ರಾಜ್ಯ

ಅನುಮತಿ ಪಡೆಯದೆ 4 ಬಾರಿ ವಿದೇಶ ಪ್ರವಾಸ ಆರೋಪ: ಕುವೆಂಪು ವಿವಿ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿಗೆ ಶೋಕಾಸ್ ನೋಟಿಸ್ ಜಾರಿ..!

ಶರತ್ ಅನಂತಮೂರ್ತಿ ಅವರು ಮೊದಲ ಬಾರಿಗೆ 19-06-2024ರಿಂದ 11-07-2024ರವರೆಗೆ ಸುಮಾರು 23 ದಿನಗಳ ಕಾಲ ಕೆನಡಾಕ್ಕೆ ತೆರಳಿದ್ದರು.

ಅನುಮತಿ ಪಡೆಯದೆ 4 ಬಾರಿ ವಿದೇಶ ಪ್ರವಾಸ ಆರೋಪ: ಕುವೆಂಪು ವಿವಿ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿಗೆ ಶೋಕಾಸ್ ನೋಟಿಸ್ ಜಾರಿ..!
ಕುವೆಂಪು ವಿಶ್ವವಿದ್ಯಾಲಯ
Published On :

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರಿಗೆ ಕರ್ನಾಟಕ ರಾಜ್ಯಪಾಲರ ಸಚಿವಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಾಧಿಪತಿಯಾಗಿರುವ ರಾಜ್ಯಪಾಲರ ಪೂರ್ವಾನುಮತಿ ಪಡೆಯದೆ ವೈಯಕ್ತಿಕ ಕಾರಣಗಳಿಗಾಗಿ ಹಲವು ಬಾರಿ ವಿದೇಶ ಪ್ರವಾಸ ಕೈಗೊಂಡಿರುವುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಸಚಿವಾಲಯದ 02-09-2026ರ ಜಿಎಸ್ 07 ಕೆಪಿಎಂ 2024 (ಪಿ-1) ಸಂಖ್ಯೆಯ ನೋಟಿಸ್‌ನಲ್ಲಿ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯಲ್ಲಿದ್ದ ಸಂದರ್ಭದಲ್ಲಿ ಪೂರ್ವಾನುಮತಿ ಪಡೆಯದೆ ವೈಯಕ್ತಿಕ ಕಾರಣಗಳಿಗಾಗಿ ವಿದೇಶ ಪ್ರವಾಸ ಕೈಗೊಂಡಿರುವ ಕುರಿತು ವಿವರಣೆ ಕೇಳಲಾಗಿದೆ.

ನೋಟಿಸ್‌ನಲ್ಲಿ ಉಲ್ಲೇಖಿಸಿರುವಂತೆ, ಪ್ರೊ. ಶರತ್ ಅನಂತಮೂರ್ತಿ ಅವರು ಮೊದಲ ಬಾರಿಗೆ 19-06-2024ರಿಂದ 11-07-2024ರವರೆಗೆ ಸುಮಾರು 23 ದಿನಗಳ ಕಾಲ ಕೆನಡಾಕ್ಕೆ ತೆರಳಿದ್ದರು. ಈ ಪ್ರವಾಸವನ್ನು ವೈಯಕ್ತಿಕ ಕಾರಣಕ್ಕಾಗಿ ಕೈಗೊಂಡಿದ್ದು, ರಾಜ್ಯಪಾಲರ ಕಚೇರಿಯಿಂದ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ತಿಳಿಸಲಾಗಿದೆ.

ಎರಡನೇ ಬಾರಿ 16-12-2024ರಿಂದ 06-01-2025ರವರೆಗೆ ಸುಮಾರು 24 ದಿನಗಳ ಕಾಲ ಕೆನಡಾಕ್ಕೆ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲೂ ವೈಯಕ್ತಿಕ ಕಾರಣವನ್ನು ನೀಡಲಾಗಿತ್ತು ಹಾಗೂ ಪೂರ್ವಾನುಮತಿ ಪಡೆಯಲಾಗಿರಲಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಮೂರನೇ ಬಾರಿ 14-07-2025ರಿಂದ 25-07-2025ರವರೆಗೆ ಸುಮಾರು 12 ದಿನಗಳ ಕಾಲ ಕೆನಡಾಕ್ಕೆ ತೆರಳಿದ್ದು, ಈ ಪ್ರವಾಸಕ್ಕೂ ವೈಯಕ್ತಿಕ ಕಾರಣವನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿಯೂ ರಾಜ್ಯಪಾಲರ ಕಚೇರಿಯಿಂದ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ಉಲ್ಲೇಖಿಸಲಾಗಿದೆ.

ನಾಲ್ಕನೇ ಬಾರಿ 17-08-2026ರಿಂದ 09-09-2026ರವರೆಗೆ ಸುಮಾರು 20 ದಿನಗಳ ಕಾಲ ಕೆನಡಾಕ್ಕೆ ತೆರಳಿದ್ದು, ಈ ಪ್ರವಾಸವನ್ನೂ ವೈಯಕ್ತಿಕ ಕಾರಣಕ್ಕಾಗಿ ಕೈಗೊಂಡಿದ್ದರು. ಈ ಬಾರಿಯೂ ಪೂರ್ವಾನುಮತಿ ಪಡೆದಿಲ್ಲ ಎಂದು ರಾಜ್ಯಪಾಲರ ಸಚಿವಾಲಯದ ನೋಟಿಸ್‌ನಲ್ಲಿ ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ, ವಿಶ್ವವಿದ್ಯಾಲಯದ ಕುಲಾಧಿಪತಿಯ ಪೂರ್ವಾನುಮತಿ ಪಡೆಯದೆ ಮೇಲ್ಕಂಡ ವಿದೇಶ ಪ್ರವಾಸಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸೂಕ್ತ ಕ್ರಮ ಏಕೆ ಕೈಗೊಳ್ಳಬಾರದು ಎಂಬುದಕ್ಕೆ ಕಾರಣ ತಿಳಿಸುವಂತೆ ಉಪ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರಿಗೆ ರಾಜ್ಯಪಾಲರ ಸಚಿವಾಲಯ ಸೂಚಿಸಿದೆ.

ವಿದೇಶ ಪ್ರವಾಸಗಳನ್ನು ಕೈಗೊಂಡ ಸಂದರ್ಭದಲ್ಲಿನ ಪರಿಸ್ಥಿತಿಗಳು, ಪ್ರತಿ ಪ್ರವಾಸಕ್ಕೂ ಮುನ್ನ ಪೂರ್ವಾನುಮತಿ ಪಡೆಯದಿರುವ ಕಾರಣಗಳು ಸೇರಿದಂತೆ ಸಂಪೂರ್ಣ ವಿವರಣೆಯನ್ನು ನೀಡುವಂತೆ ರಾಜ್ಯಪಾಲರ ಕಚೇರಿ ಸೂಚಿಸಿದೆ.

ತಮ್ಮ ವಿವರಣೆಗೆ ಬೆಂಬಲವಾಗಿ ಅವಲಂಬಿಸಿರುವ ಎಲ್ಲ ಸಂಬಂಧಿತ ದಾಖಲೆಗಳು ಹಾಗೂ ಪೂರಕ ದಾಖಲೆಗಳ ಪ್ರತಿಗಳೊಂದಿಗೆ ಲಿಖಿತ ಉತ್ತರವನ್ನು ನೋಟಿಸ್ ಸ್ವೀಕರಿಸಿದ ದಿನದಿಂದ ಏಳು ದಿನಗಳೊಳಗೆ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ನಿಗದಿತ ಅವಧಿಯಲ್ಲಿ ಉತ್ತರ ಸಲ್ಲಿಸದಿದ್ದರೆ, ತಮ್ಮ ಬಳಿ ಯಾವುದೇ ವಿವರಣೆ ಇಲ್ಲ ಎಂದು ಪರಿಗಣಿಸಲಾಗುವುದು. ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಹಾಗೂ ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಪಾಲರ ಸಚಿವಾಲಯ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.