2037 ಕ್ಕೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುವುದು ನಮ್ಮ ಗುರಿ: ಡಿ.ಕೆ ಶಿವಕುಮಾರ್; Video
ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ನತ್ತ ಕೊಂಡೊಯ್ಯುವುದು, ಅಪೌಷ್ಟಿಕತೆಯನ್ನು ಶೇ.5ಕ್ಕಿಂತ ಕಡಿಮೆಗೊಳಿಸುವುದು, ಶಾಲೆಯಿಂದ ಹೊರಗುಳಿಯುವವರ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು ಹಾಗೂ ಬಡತನವನ್ನು ನಿರ್ಮೂಲನೆ ಮಾಡುವ ಮಹಾ ಸಂಕಲ್ಪವನ್ನು ನಾವು ಕೈಗೊಂಡಿದ್ದೇವೆ ಎಂದರು.

ಬೆಂಗಳೂರು: ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವುದು, ಅಪೌಷ್ಟಿಕತೆಯ ಪ್ರಮಾಣವನ್ನು ಶೇ.5ಕ್ಕಿಂತ ಕಡಿಮೆಗೊಳಿಸುವುದು ಹಾಗೂ ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯಕ್ಕೆ ತರುವುದು ಸೇರಿದಂತೆ 2037ರ ವೇಳೆಗೆ ಸಾಧಿಸುವ ಗುರಿಗಳನ್ನು ಒಳಗೊಂಡ “ಮೆಗಾ ಸಂಕಲ್ಪ”ವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
ಡಿ ಕೆ ಶಿವಕುಮಾರ್ ಅವರು ಅನಾವರಣಗೊಳಿಸಿದ ನವ ಸಂಕಲ್ಪ(ಒಂಬತ್ತು ಸಂಕಲ್ಪಗಳು)ಗಳಲ್ಲಿ ಹೊಸ ಆರೋಗ್ಯ ವಿಮಾ ಯೋಜನೆ, 3 ಲಕ್ಷ ಕೋಟಿ ರೂಪಾಯಿ ಹೊಸ ಹೂಡಿಕೆಗಳನ್ನು ಆಕರ್ಷಿಸುವುದು, ಬೆಂಗಳೂರಿನಾಚೆಗೂ ಅಭಿವೃದ್ಧಿಯ ವೇಗ ಹೆಚ್ಚಿಸಲು ಐದು ಹೊಸ ಪ್ರಮುಖ ನಗರಗಳನ್ನು ನಿರ್ಮಿಸುವುದು, ಮುಂದಿನ 500 ದಿನಗಳಲ್ಲಿ 1.5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುವುದು, ಸರ್ಕಾರಿ ಹುದ್ದೆಗಳಿಗೆ 1 ಲಕ್ಷ ನೇಮಕಾತಿ ಹಾಗೂ ಖಾಸಗಿ ವಲಯದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸುವುದು ಸೇರಿವೆ.
ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ನತ್ತ ಕೊಂಡೊಯ್ಯುವುದು, ಅಪೌಷ್ಟಿಕತೆಯನ್ನು ಶೇ.5ಕ್ಕಿಂತ ಕಡಿಮೆಗೊಳಿಸುವುದು, ಶಾಲೆಯಿಂದ ಹೊರಗುಳಿಯುವವರ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು ಹಾಗೂ ಬಡತನವನ್ನು ನಿರ್ಮೂಲನೆ ಮಾಡುವ ಮಹಾ ಸಂಕಲ್ಪವನ್ನು ನಾವು ಕೈಗೊಂಡಿದ್ದೇವೆ. ಇದೆಲ್ಲ ಸಾಧ್ಯವೇ ಎಂದು ಕೆಲವು ಪತ್ರಕರ್ತರು ಪ್ರಶ್ನಿಸಿದರು.
ನಾನು ಇದನ್ನು ಕೈಗೆತ್ತಿಕೊಂಡಿರುವುದೇ ಅದನ್ನು ಸಾಧಿಸುವ ಸಾಮರ್ಥ್ಯ ನನ್ನಲ್ಲಿದೆ ಎಂಬ ವಿಶ್ವಾಸದಿಂದ. ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಟೀಕಾಕಾರರು ಹೇಳಿದ್ದರು. ಆದರೆ ನಾವು ಅವರನ್ನು ತಪ್ಪೆಂದು ಸಾಬೀತುಪಡಿಸಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿನ ಕ್ರಮಗಳನ್ನು ಪ್ರಸ್ತಾಪಿಸಿದ ಡಿ ಕೆ ಶಿವಕುಮಾರ್, ಎಲ್ಲ ತಾಲ್ಲೂಕುಗಳಲ್ಲೂ ಟೆಲಿ-ಐಸಿಯು (Tele-ICU) ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
“ನಶಾ ಮುಕ್ತ ಕರ್ನಾಟಕ’, ‘ಆಪರೇಷನ್ ರೈಸ್’, ‘ಬೇಡ ಬ್ರೋ’ ಹಾಗೂ ‘ಆರೋಗ್ಯ ಸ್ಪಂದನ’ದಂತಹ ಕಾರ್ಯಕ್ರಮಗಳನ್ನು ನಾವು ಕೈಗೆತ್ತಿಕೊಂಡಿದ್ದೇವೆ. ತಮ್ಮ ಕ್ಷೇತ್ರದಲ್ಲಿನ ಸ್ಮಶಾನಗಳಿಗಾಗಿ ಎಚ್.ಕೆ. ಪಾಟೀಲ್ ಅವರು ‘ಮುಕ್ತಿ ವನ’ ಪರಿಕಲ್ಪನೆಯನ್ನು ರೂಪಿಸಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯಾದ್ಯಂತ 1,000 ಸ್ಮಶಾನಗಳನ್ನು ಅಭಿವೃದ್ಧಿಪಡಿಸಲು ನಾವು ನಿರ್ಧರಿಸಿದ್ದೇವೆ” ಎಂದು ಮುಖ್ಯಮಂತ್ರಿ ಹೇಳಿದರು.
ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಉಚಿತ ಮನೆಗಳು ಮತ್ತು ನಿವೇಶನಗಳನ್ನು ಒದಗಿಸುವುದು ಸೇರಿದಂತೆ ಹಲವು ಸಾಮಾಜಿಕ ನ್ಯಾಯ ಕಾರ್ಯಕ್ರಮಗಳನ್ನೂ ಅವರು ಘೋಷಿಸಿದರು.
ನಿವೇಶನ ಹೊಂದಿರದ ಗ್ರಾಮೀಣ ಪ್ರದೇಶಗಳ ಕುಟುಂಬಗಳಿಗೆ 5 ಲಕ್ಷ ನಿವೇಶನಗಳನ್ನು ಒದಗಿಸುತ್ತಿದ್ದೇವೆ. ರಸ್ತೆ, ಚರಂಡಿ ಹಾಗೂ ಬೀದಿದೀಪಗಳ ಗುಣಮಟ್ಟವನ್ನು ಸುಧಾರಿಸುತ್ತಿದ್ದೇವೆ. ಹಿಂದುಳಿದ ಸಮುದಾಯಗಳು, ಅಲ್ಪಸಂಖ್ಯಾತರು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಯುವಕರಿಗೆ 50,000 ಉದ್ಯೋಗಗಳನ್ನು ಒದಗಿಸುವುದರ ಜತೆಗೆ, ಅಲ್ಪಸಂಖ್ಯಾತ ಸಮುದಾಯಗಳ ಯುವಕರಿಗೆ ಉದ್ಯಮಶೀಲತೆ ಹಾಗೂ ಕೌಶಲ್ಯ ತರಬೇತಿಯನ್ನು ನೀಡಲಿದ್ದೇವೆ ಎಂದು ಅವರು ಹೇಳಿದರು.
ಶಿಕ್ಷಣ, ಆರೋಗ್ಯ, ಜಲ ಭದ್ರತೆ, ಆರ್ಥಿಕ ಶಕ್ತಿ, ಬೆಂಗಳೂರು ಅಭಿವೃದ್ಧಿ, ಪ್ರಾದೇಶಿಕ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಬಂಡವಾಳ ಹೂಡಿಕೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಒತ್ತು ನೀಡುವ ಮೂಲಕ “ಶಕ್ತಿಶಾಲಿ ಕರ್ನಾಟಕ”ವನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



