500 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ! ಸಾಲದ ಸುಳಿಗೆ ಸಿಲುಕಿ ಆಯುರ್ವೇದಿಕ್ ಕಾಲೇಜ್ ಸೀಜ್; 2 ತಿಂಗಳಿಂದ ಬಂದ್
ತಮ್ಮ ಮಕ್ಕಳು ವೈದ್ಯರಾಗಲಿ ಎಂದು ಅಪ್ಪ-ಅಮ್ಮಂದಿರು ಸಾಲ ಸೋಲ ಮಾಡಿ ವೈದ್ಯಕೀಯ ಕಾಲೇಜುಗಳಿಗೆ ಸೇರಿಸುತ್ತಾರೆ. ಆದರೆ, ಅದೇ ಕಾಲೇಜು ಸಾಲದ ಕಾರಣ ಕಳೆದ ಎರಡು ತಿಂಗಳಿಂದ ಬಂದ್ ಆದರೆ, ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳ ಕಥೆ ಏನು? ಸಾಲ ಮಾಡಿ ತಮ್ಮ ಮಕ್ಕಳನ್ನು ಓದಿಸುತ್ತಿರುವ ಅಪ್ಪ-ಅಮ್ಮನ ಕನಸಿನ ಕಥೆ ಏನು?

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ತಮ್ಮ ಮಕ್ಕಳು ವೈದ್ಯರಾಗಲಿ ಎಂದು ಅಪ್ಪ-ಅಮ್ಮಂದಿರು ಸಾಲ ಸೋಲ ಮಾಡಿ ವೈದ್ಯಕೀಯ ಕಾಲೇಜುಗಳಿಗೆ ಸೇರಿಸುತ್ತಾರೆ. ಆದರೆ, ಅದೇ ಕಾಲೇಜು ಸಾಲದ ಕಾರಣ ಕಳೆದ ಎರಡು ತಿಂಗಳಿಂದ ಬಂದ್ ಆದರೆ, ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳ ಕಥೆ ಏನು? ಸಾಲ ಮಾಡಿ ತಮ್ಮ ಮಕ್ಕಳನ್ನು ಓದಿಸುತ್ತಿರುವ ಅಪ್ಪ-ಅಮ್ಮನ ಕನಸಿನ ಕಥೆ ಏನು? ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಬ್ಯಾಂಕ್ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (ದೇವನಹಳ್ಳಿ ಸಮೀಪ) ದಲ್ಲಿರುವ ಖಾಸಗಿ ಆಯುರ್ವೇದಿಕ್ ಕಾಲೇಜಾದ ಆತ್ರೆಯ ಆಯುರ್ವೇದ ವಿದ್ಯಾಲಯವನ್ನು ಸಿಟಿ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಎರಡು ತಿಂಗಳಿಂದ ಸೀಜ್ ಮಾಡಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಹಾಗಾದ್ರೆ, ಸೀಜ್ ಮಾಡಲು ಕಾರಣವೇನು?
ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಡಾ. ಪ್ರಶಾಂತ್ ಎಸ್. ಅವರ ನೇತೃತ್ವದ ಆತ್ರೇಯ ಆಯುರ್ವೇದ ವೈದ್ಯಕೀಯ ಕಾಲೇಜು ಸಂಸ್ಥೆಯು ಸಿಟಿ ಯೂನಿಯನ್ ಬ್ಯಾಂಕ್‌ನಿಂದ ಪಡೆದಿದ್ದ ಸಾಲದ ಮೊತ್ತವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿರಲಿಲ್ಲ. ಈ ಕಾರಣದಿಂದಾಗಿ ಬ್ಯಾಂಕ್ SARFAESI ಕಾಯ್ದೆಯಡಿ ನೋಟಿಸ್ ಜಾರಿ ಮಾಡಿ, ನ್ಯಾಯಾಲಯದ ಅನುಮತಿಯೊಂದಿಗೆ ಕಾಲೇಜು ಸ್ವತ್ತನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ. ಆದರೆ, ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿಗಳು ಬ್ಯಾಂಕ್‌ನ ಈ ಕ್ರಮದ ವಿರುದ್ಧ ಈಗಾಗಲೇ ಕರ್ನಾಟಕ ಹೈಕೋರ್ಟ್ ಹಾಗೂ ಸಾಲ ವಸೂಲಾತಿ ನ್ಯಾಯಾಧೀಕರಣ ಮೊರೆ ಹೋಗಿದ್ದು, ಕಾನೂನು ಹೋರಾಟ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಅದರಲ್ಲೂ, ಯಾವುದೇ ಮುನ್ಸೂಚನೆ ನೀಡದೆ ಸಂಸ್ಥೆಗೆ ಬೀಗ ಹಾಕಿರುವುದರಿಂದ ಇಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ತೀವ್ರ ಆತಂಕಕ್ಕೆ ಸಿಲುಕಿದೆ. ತರಗತಿಗಳು ನಡೆಯದೆ, ಪರೀಕ್ಷೆಗಳೂ ಇಲ್ಲದೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಂಗಾಲಾಗಿದ್ದಾರೆ.
ಮುಂದುವರೆದು, ಪ್ರವೇಶಾತಿ ಸಮಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಬರೋಬ್ಬರಿ 4.5 ಲಕ್ಷ ರೂಪಾಯಿ ಶುಲ್ಕ ವಸೂಲಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಆಡಳಿತ ಮಂಡಳಿ ಮೇಲೆ ಕೇಳಿಬಂದಿದೆ. ಇಷ್ಟೊಂದು ಭಾರಿ ಮೊತ್ತ ಪಡೆದ ಹೊರತಾಗಿಯೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ ಹಾಗೂ ನಿಯಮಾನುಸಾರ ಅನುಮತಿ ಇಲ್ಲದೆ ಕಾಲೇಜು ನಡೆಸಲಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



