ಅನುಮತಿಯಿಲ್ಲದೆ 8 ವರ್ಷಗಳಿಂದ MA ಕ್ಲಾಸ್! ಜಾನಪದ ವಿವಿಯ 8 ಪಿಜಿ ಕೋರ್ಸ್‌ಗಳು ದಿಢೀರ್ ರದ್ದು: ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ; ಸಿಬ್ಬಂದಿಗೂ ಶಾಕ್
ಹಾವೇರಿ ಜಿಲ್ಲೆಯ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಿಯಮಬಾಹಿರವಾಗಿ ನಡೆಸಲಾಗುತ್ತಿದ್ದ 8 ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆ ಖಡಕ್ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಗೊಟಗೋಡಿ (ಹಾವೇರಿ): ಹಾವೇರಿ ಜಿಲ್ಲೆಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಿಯಮಬಾಹಿರವಾಗಿ ನಡೆಸಲಾಗುತ್ತಿದ್ದ 8 ಸ್ನಾತಕೋತ್ತರ (PG) ಕೋರ್ಸ್‌ಗಳ ಪ್ರವೇಶಾತಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆ ಖಡಕ್ ಆದೇಶ ಹೊರಡಿಸಿದೆ. ಸರ್ಕಾರ ಹಾಗೂ ಕುಲಾಧಿಪತಿಗಳಾದ ರಾಜ್ಯಪಾಲರ ಯಾವುದೇ ಪೂರ್ವ ಅನುಮೋದನೆ ಪಡೆಯದೆ, ಕರಡು ನಿಯಮಾವಳಿಗಳನ್ನೂ ರಚಿಸದೆ ಕಳೆದ 2018-19ನೇ ಸಾಲಿನಿಂದಲೇ ಈ ಕೋರ್ಸ್‌ಗಳನ್ನು ಕಾನೂನುಬಾಹಿರವಾಗಿ ನಡೆಸಿಕೊಂಡು ಬರಲಾಗುತ್ತಿತ್ತು. ಈ ಎಡವಟ್ಟು ಈಗ ಬೆಳಕಿಗೆ ಬಂದಿದ್ದು, ಕಳೆದ 8 ವರ್ಷಗಳಿಂದ ಈ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಿರುವ ಮತ್ತು ಪ್ರಸ್ತುತ ಓದುತ್ತಿರುವ ನೂರಾರು ವಿದ್ಯಾರ್ಥಿಗಳ ಭವಿಷ್ಯ ಇದೀಗ ಸಂಪೂರ್ಣ ಅತಂತ್ರವಾಗಿದೆ. ಆ ಕುರಿತ ವರದಿ ಇಲ್ಲಿದೆ:
ರದ್ದಾಗಿರುವ 8 ಕೋರ್ಸ್‌ಗಳು ಯಾವುವು?
ಎಂ.ಎ. ಕನ್ನಡ ಮತ್ತು ಜಾನಪದ, ಎಂ.ಎ. ಇಂಗ್ಲಿಷ್, ಎಂ.ಎ. ಅರ್ಥಶಾಸ್ತ್ರ, ಎಂ.ಎ. ಸಮಾಜಶಾಸ್ತ್ರ, ಮಾಸ್ಟರ್ ಆಫ್ ಸೋಷಿಯಲ್ ವರ್ಕ್ (MSW), ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ (MPA), ಮಾಸ್ಟರ್ ಆಫ್ ವಿಷ್ಯುಯಲ್ ಆರ್ಟ್ಸ್, ಎಂ.ಎ. ಮಹಿಳಾ ಅಧ್ಯಯನ.
ಹಾಗಾದ್ರೆ, ಬಯಲಿಗೆ ಬಂದಿದ್ದು ಹೇಗೆ?
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧಿನಿಯಮದ ನಿಯಮಗಳನ್ನು ಉಲ್ಲಂಘಿಸಿ ಈ ಕೋರ್ಸ್‌ಗಳನ್ನು ಆರಂಭಿಸಲಾಗಿತ್ತು. ಇತ್ತೀಚೆಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಈ ಕೋರ್ಸ್‌ಗಳಿಗೆ ಘಟನೋತ್ತರ ಅನುಮೋದನೆ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈ ದಾಖಲೆಗಳನ್ನು ಉನ್ನತ ಶಿಕ್ಷಣ ಇಲಾಖೆ ಕೂಲಂಕಷವಾಗಿ ಪರಿಶೀಲಿಸಿದಾಗ, ಯಾವುದೇ ಅಧಿಕೃತ ಮಂಜೂರಾತಿ ಇಲ್ಲದೆ 2018-19ನೇ ಸಾಲಿನಿಂದ ಈ ಕೋರ್ಸ್‌ಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ. ಈ ಮೂಲಕ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧಿನಿಯಮದ ಪ್ರಕರಣ 43(2) ಸ್ಪಷ್ಟ ಉಲ್ಲಂಘನೆಯಾಗಿದೆ.
ಮುಂದುವರೆದು, ವಿಶ್ವವಿದ್ಯಾಲಯದ ಈ ಬೇಜವಾಬ್ದಾರಿತನದಿಂದಾಗಿ ಕಳೆದ 8 ವರ್ಷಗಳಿಂದ ಈ ಕೋರ್ಸ್‌ಗಳಲ್ಲಿ ಪದವಿ ಪಡೆದ ಹಾಗೂ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ನೂರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಮತ್ತು ಅವರು ಪಡೆದ ಪದವಿ ಪ್ರಮಾಣಪತ್ರಗಳ ಸಿಂಧುತ್ವ ಈಗ ಆತಂಕಕ್ಕೆ ಸಿಲುಕಿದೆ. ಅದರಲ್ಲೂ, ಈ ಕೋರ್ಸ್‌ಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ, ಈ ನಿರ್ದಿಷ್ಟ ವಿಭಾಗಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇರಿದಂತೆ 20ಕ್ಕೂ ಹೆಚ್ಚು ನೌಕರರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಜಾನಪದ ವಿವಿ ಕುಲಸಚಿವ ಗುರುಪ್ರಸಾದ್, ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಈ 8 ಕೋರ್ಸ್‌ಗಳ ಪ್ರವೇಶಾತಿಯನ್ನು ತಡೆಹಿಡಿಯಲಾಗಿದ್ದು, ಮುಂದಿನ ನಡೆ ಹಾಗೂ ವಿದ್ಯಾರ್ಥಿಗಳ ಹಿತರಕ್ಷಣೆಯ ಕುರಿತು ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಜಾನಪದ ವಿಶ್ವವಿದ್ಯಾಲಯವನ್ನು ಆರಂಭದಲ್ಲಿ ಜಾನಪದ ಕಲೆ, ಜಾನಪದ ವಿಜ್ಞಾನ, ಸಾಹಿತ್ಯ, ಪ್ರವಾಸೋದ್ಯಮ ಮತ್ತು ಬುಡಕಟ್ಟು ಅಧ್ಯಯನಗಳಂತಹ ವಿಶೇಷ ಕೋರ್ಸ್‌ಗಳಿಗಾಗಿ ಸ್ಥಾಪಿಸಲಾಗಿತ್ತು. ಆದರೆ, ತನ್ನ ವ್ಯಾಪ್ತಿ ಮೀರಿ ಸಾಮಾನ್ಯ ಎಂ.ಎ ಕೋರ್ಸ್‌ಗಳನ್ನು ಅನುಮತಿ ಇಲ್ಲದೆ ಆರಂಭಿಸಿದ್ದು ತನಿಖೆಯ ವೇಳೆ ಗಂಭೀರ ಲೋಪವಾಗಿ ಪರಿಣಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




