ಅಕ್ರಮ ಪಶುವೈದ್ಯಕೀಯ ಕೇಂದ್ರದಲ್ಲಿ ಪ್ರಾಣಿಗಳ ಮೇಲೆ ಕ್ರೌರ್ಯ: ಇಬ್ಬರು ಪಶುವೈದ್ಯರ ಮೇಲೆ ಕೇಸು ದಾಖಲು
ಸಂಜೆ 6ರಿಂದ ರಾತ್ರಿ 11ರವರೆಗೆ ಜಂಟಿ ಪರಿಶೀಲನಾ ತಂಡಗಳು ಗೇರ್ ಸ್ಕೂಲ್ ರಸ್ತೆಯಲ್ಲಿರುವ ಪ್ರೈಮ್ ಕೇರ್ ಪಶುವೈದ್ಯಕೀಯ ಆಸ್ಪತ್ರೆ ಮೇಲೆ ದಾಳಿ ನಡೆಸಿದವು.

ಬೆಂಗಳೂರು: ಬೆಂಗಳೂರಿನ ದೊಡ್ಡಕನ್ನಹಳ್ಳಿ ಪ್ರದೇಶದಲ್ಲಿರುವ ಪರವಾನಗಿ ಇಲ್ಲದ ಪಶುವೈದ್ಯಕೀಯ ಕೇಂದ್ರವೊಂದರಲ್ಲಿ ಪ್ರಾಣಿಗಳ ಮೇಲೆ ನಡೆದಿರುವ ಭೀಕರ ಕ್ರೌರ್ಯಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಇಬ್ಬರು ವೈದ್ಯರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
GBA ಪೂರ್ವ ವಲಯದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರುದ್ರೇಶ್ ಕುಮಾರ್ ಕೆ.ಎಲ್. ಅವರಿಗೆ ಅಕ್ರಮವಾಗಿ ಪ್ರಾಣಿಗಳನ್ನು ಹಿಡಿದು ತಂದು, ವೈದ್ಯಕೀಯ ಚಿಕಿತ್ಸೆಯ ಹೆಸರಿನಲ್ಲಿ ಅವುಗಳ ಮೇಲೆ ತೀವ್ರ ಕ್ರೌರ್ಯ ಎಸಗಲಾಗುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಸಂಜೆ 6ರಿಂದ ರಾತ್ರಿ 11ರವರೆಗೆ ಜಂಟಿ ಪರಿಶೀಲನಾ ತಂಡಗಳು ಗೇರ್ ಸ್ಕೂಲ್ ರಸ್ತೆಯಲ್ಲಿರುವ ಪ್ರೈಮ್ ಕೇರ್ ಪಶುವೈದ್ಯಕೀಯ ಆಸ್ಪತ್ರೆ ಮೇಲೆ ದಾಳಿ ನಡೆಸಿದವು.
ಕಾರ್ಯಾಚರಣೆ ವೇಳೆ ತೀವ್ರ ಅನಾರೋಗ್ಯಕರ ಸ್ಥಿತಿಯಲ್ಲಿದ್ದ 12 ನಾಯಿಗಳು ಹಾಗೂ ಮತ್ತೊಂದು ಪ್ರಾಣಿಯನ್ನು ಪತ್ತೆಹಚ್ಚಿ ರಕ್ಷಿಸಲಾಯಿತು. ಅಲ್ಲದೆ, ಸತ್ತಿದ್ದ ಒಂದು ನಾಯಿಯ ಮೃತದೇಹವೂ ಪತ್ತೆಯಾಗಿದೆ.
ವಾಟ್ಸ್‌ಆ್ಯಪ್ ಚಾಟ್‌ಗಳು, ವಾಯ್ಸ್ ನೋಟ್‌ಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಒಳಗೊಂಡ ಡಿಜಿಟಲ್ ಸಾಕ್ಷ್ಯಗಳು ಆರೋಪಿಗಳಿಗೂ ಈ ಕಾರ್ಯಾಚರಣೆಗೂ ಸಂಬಂಧವಿರುವುದನ್ನು ಸೂಚಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗದ ಡಾ. ಮಂಜುನಾಥ್ ಎಸ್. ಹಾಗೂ ಬೆಂಗಳೂರು ದಕ್ಷಿಣದ ಡಾ. ಆಸಿಫ್ ಪಾಷಾ ಆರೋಪಿಗಳು ಎಂದು ಪೊಲೀಸರು ಗುರುತಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮಂಜುನಾಥ್ ಸಂಶೋಧನಾ ಉದ್ದೇಶಕ್ಕಾಗಿ ಬೀದಿ ನಾಯಿಗಳನ್ನು ಸಂಗ್ರಹಿಸುತ್ತಿದ್ದರು. ಆಸಿಫ್ ಅವರು ಪರವಾನಗಿ ಇಲ್ಲದ ಕೇಂದ್ರದಲ್ಲಿ ಆ ನಾಯಿಗಳನ್ನು ಇರಿಸಲು ಸ್ಥಳಾವಕಾಶ ಒದಗಿಸಿದ್ದರು ಎನ್ನಲಾಗಿದೆ.
ಅನುಮತಿ ಹಾಗೂ ಸೂಕ್ತ ಅರಿವಳಿಕೆ ನೀಡದೆ ಪ್ರಾಣಿಗಳ ಮೇಲೆ ವೈದ್ಯಕೀಯ ಪ್ರಕ್ರಿಯೆಗಳು ಅಥವಾ ಪ್ರಯೋಗಗಳನ್ನು ನಡೆಸುವುದು ಕಾನೂನುಬದ್ಧ ರಕ್ಷಣಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11(1)(a) ಹಾಗೂ 2023ರ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 325ರ ಅಡಿಯಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಬ್ಬರೂ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ರಕ್ಷಿಸಲಾದ ಪ್ರಾಣಿಗಳನ್ನು ಪುನರ್ವಸತಿ ಹಾಗೂ ವೈದ್ಯಕೀಯ ಪರೀಕ್ಷೆಗಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಪ್ರಕರಣದ ಹಿಂದಿರುವ ಮತ್ತಷ್ಟು ಜಾಲದ ಕುರಿತು ಬೆಳ್ಳಂದೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



