ಅಮೆಜಾನ್ ಘಟಕಗಳ ಮೇಲೆ ದಾಳಿ: ಇ-ಕಾಮರ್ಸ್ ಗೋದಾಮುಗಳಿಂದ ಅಕ್ರಮ ಔಷಧ ಸಂಗ್ರಹ ವಶ
ನಿಯಮ ಉಲ್ಲಂಘನೆಯ ಬಗ್ಗೆ ಲಭ್ಯವಾದ ಖಚಿತ ಮಾಹಿತಿಯ ಆಧಾರದ ಮೇಲೆ FDA ತಂಡಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದವು

ಬೆಂಗಳೂರು ಗ್ರಾಮಾಂತರ: ಪರವಾನಗಿ ಇಲ್ಲದೆ ಔಷಧ ಸಂಗ್ರಹಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಇಲಾಖೆಯ ಔಷಧ ಜಾರಿ ವಿಭಾಗವು ಇ-ಕಾಮರ್ಸ್ ವೇದಿಕೆಗಳಿಗೆ ಸಂಬಂಧಿಸಿದ ಅಕ್ರಮ ಔಷಧ ಸಂಗ್ರಹ ಘಟಕಗಳ ಮೇಲೆ ದಾಳಿ ನಡೆಸಿದ್ದು, 4 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಔಷಧಗಳನ್ನು ವಶಪಡಿಸಿಕೊಂಡಿದೆ.
ನಿಯಮ ಉಲ್ಲಂಘನೆಯ ಬಗ್ಗೆ ಲಭ್ಯವಾದ ಖಚಿತ ಮಾಹಿತಿಯ ಆಧಾರದ ಮೇಲೆ FDA ತಂಡಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದವು.
ಆನೇಕಲ್‌ನಲ್ಲಿ ದಾಳಿ
ರಾಜ್ಯ ಗುಪ್ತಚರ ವಿಭಾಗದ ಸಹಾಯಕ ಔಷಧ ನಿಯಂತ್ರಕ ಮನೋಹರ್ ನೇತೃತ್ವದ ತಂಡ, ಪ್ರಾದೇಶಿಕ ಔಷಧ ನಿರೀಕ್ಷಕರ ಸಹಕಾರದೊಂದಿಗೆ ಆನೇಕಲ್ ತಾಲ್ಲೂಕಿನ ತಟ್ಟನಹಳ್ಳಿಯಲ್ಲಿರುವ M/s Amazon Seller Services Pvt. Ltd. ಸಂಸ್ಥೆಯ ಪರವಾನಗಿ ರಹಿತ ಆವರಣದ ಮೇಲೆ ದಾಳಿ ನಡೆಸಿತು.
ಔಷಧ ಪರವಾನಗಿ ಇಲ್ಲದೆ ಔಷಧಗಳನ್ನು ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ 2,45,352 ರೂ ಮೌಲ್ಯದ ಔಷಧಗಳನ್ನು ವಶಪಡಿಸಿಕೊಳ್ಳಲಾಯಿತು.
ದೇವನಹಳ್ಳಿಯಲ್ಲಿ ದಾಳಿ
ಇದೇ ವೇಳೆ, ಔಷಧ ನಿರೀಕ್ಷಕಿ ಶ್ರೀಮತಿ ವಿಭಾ ನೇತೃತ್ವದ ಮತ್ತೊಂದು ತಂಡ, ಇತರ ಔಷಧ ನಿರೀಕ್ಷಕರೊಂದಿಗೆ ದೇವನಹಳ್ಳಿಯ ಏರೋಸ್ಪೇಸ್ ಪ್ರದೇಶದಲ್ಲಿರುವ M/s Amazon ಸಂಸ್ಥೆಯ ಪರವಾನಗಿ ರಹಿತ ಘಟಕದ ಮೇಲೆ ದಾಳಿ ನಡೆಸಿತು.
ಈ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 1,57,000 ರೂ ಮೌಲ್ಯದ ಔಷಧಗಳನ್ನು ವಶಪಡಿಸಿಕೊಳ್ಳಲಾಯಿತು.
ಎರಡೂ ಘಟಕಗಳು ಕಡ್ಡಾಯ ಔಷಧ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದು, 1940ರ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಅಧಿಕಾರಿಗಳು ಕಾನೂನು ಕ್ರಮ ಆರಂಭಿಸಿದ್ದು, ವಶಪಡಿಸಿಕೊಂಡ ಔಷಧಗಳ ದಾಸ್ತಾನನ್ನು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



