ರಾಜ್ಯ

ವಿದ್ಯಾರ್ಥಿನಿಯರ ನಾಪತ್ತೆ ಕೇಸ್‌ಗೆ ಬಿಗ್ ಟ್ವಿಸ್ಟ್: 'ನಂಗೆ ಅವನೇ ಬೇಕು' ಎಂದ ಗರ್ಭಿಣಿ ಯುವತಿ! ಕೋರ್ಟ್​ನಲ್ಲಿ ಹೇಳಿದ್ದೇನು?

18 ವರ್ಷ ತುಂಬಿದ್ದ ಹಿನ್ನೆಲೆ ಯಾರ ಜೊತೆ ವಾಸ ಮಾಡುತ್ತೀಯ ಎಂದು ನ್ಯಾಯಾಲಯ ಕೇಳಿದೆ. ಇದಕ್ಕೆ ಉತ್ತರಿಸಿರುವ ತನಿಷ್ಕಾ ಮದುವೆಯಾದ ಯುವಕನ ಜೊತೆ ಇರುತ್ತೇನೆ ಎಂದು ಹೇಳಿದ್ದಾಳೆ.

ವಿದ್ಯಾರ್ಥಿನಿಯರ ನಾಪತ್ತೆ ಕೇಸ್‌ಗೆ ಬಿಗ್ ಟ್ವಿಸ್ಟ್: 'ನಂಗೆ ಅವನೇ ಬೇಕು' ಎಂದ ಗರ್ಭಿಣಿ ಯುವತಿ! ಕೋರ್ಟ್​ನಲ್ಲಿ ಹೇಳಿದ್ದೇನು?
ನಾಪತ್ತೆಯಾದ ವಿದ್ಯಾರ್ಥಿನಿಯರು
Published On :

ಬೆಂಗಳೂರು: ಎಂಟು ತಿಂಗಳ ಹಿಂದೆ ಬೆಂಗಳೂರಿನ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಪೈಕಿ ಒಬ್ಬ ವಿದ್ಯಾರ್ಥಿನಿಯನ್ನು ಕೊನೆಗೂ ಸಿಐಡಿ (CID) ಅಧಿಕಾರಿಗಳು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದೀಗ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ನಾಪತ್ತೆಯಾಗಿದ್ದ ವಿದ್ಯಾರಣ್ಯಪುರದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಆದರೆ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಇನ್ನೂ ಪತ್ತೆಯಾಗಿಲ್ಲ.

ಈ ಇಬ್ಬರು ವಿದ್ಯಾರ್ಥಿನಿಯರು ಕಳೆದ ಜನವರಿ 31 ರಂದು ಕಾಲೇಜಿಗೆ ತೆರಳುವುದಾಗಿ ಹೇಳಿ ನಾಪತ್ತೆಯಾಗಿದ್ದರು. ಈ ಸಂಬಂಧ ವಿದ್ಯಾರಣ್ಯಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಶೋಧ ಆರಂಭಿಸಿದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಮಹತ್ವದ ಸುಳಿವು ಸಿಕ್ಕಿರಲಿಲ್ಲ. ನಂತರ ತನಿಷ್ಕಾ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಗಂಭೀರತೆ ಅರಿತ ಹೈಕೋರ್ಟ್, ತನಿಖೆಯನ್ನು ಸಿಐಡಿಗೆ ವರ್ಗಾಯಿಸಿತ್ತು.

ಹೈಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ತನಿಷ್ಕಾಳನ್ನು ಪತ್ತೆಹಚ್ಚಿದ್ದಾರೆ.

ಹೈಕೋರ್ಟ್ ಮುಂದೆ ತನಿಷ್ಕಾ ಹಾಜರು

ತನಿಷ್ಕಾಳನ್ನು ಪತ್ತೆ ಹಚ್ಚಿರುವ ಸಿಐಡಿ ಪೊಲೀಸರು ಹೈಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಹೇಬಿಯಸ್ ಕಾರ್ಪಸ್ ಕೇಸ್ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಬುಧವಾರ ತನಿಷ್ಕಾಳನ್ನು ಹೈಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ.

ಈ ವೇಳೆ ತನಿಷ್ಕಾಗೆ 18 ವರ್ಷ ತುಂಬಿದ್ದ ಹಿನ್ನೆಲೆ ಯಾರ ಜೊತೆ ವಾಸ ಮಾಡುತ್ತೀಯ ಎಂದು ನ್ಯಾಯಾಲಯ ಕೇಳಿದೆ. ಇದಕ್ಕೆ ಉತ್ತರಿಸಿರುವ ತನಿಷ್ಕಾ ಮದುವೆಯಾದ ಯುವಕನ ಜೊತೆ ಇರುತ್ತೇನೆ ಎಂದು ಹೇಳಿದ್ದಾಳೆ. ಹೀಗಾಗಿ ಕೋರ್ಟ್ ಪತಿಯ ಜೊತೆ ತೆರಳಲು ಅನುಮತಿ ನೀಡಿದೆ.

ಸದ್ಯ ತನಿಷ್ಕಾಳನ್ನು ಕರೆದುಕೊಂಡು ಬಂದಿರುವ ಪೊಲೀಸರು ಆಕೆ ಜೊತೆಗಿದ್ದ ತೇಜಸ್ವಿನಿಯ ಹಿಂದೆ ಬಿದ್ದಿದ್ದಾರೆ. ತನಿಷ್ಕಾ ಹೇಳಿರುವ ಪ್ರಕಾರ ಆಕೆಯೂ ಕೂಡಾ ಸಂಬಂಧಿಕರ ಮನೆಯಲ್ಲಿದ್ದಾಳಂತೆ. ಹೀಗಾಗಿ ಆಕೆಯನ್ನೂ ಸದ್ಯದಲ್ಲೇ ಪತ್ತೆಹಚ್ಚಲಿದ್ದಾರೆ.

ಒಟ್ಟಿನಲ್ಲಿ ಹೆತ್ತವರಿಗೆ ಹೇಳದೆ ಮನೆ ಬಿಟ್ಟು ಹೋದವರು 8 ತಿಂಗಳ ನಂತರ ಕಣ್ಮುಂದೆ ಬಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.