ರಾಜ್ಯ

ಸಂಸಾರ, ಸಿಮ್ ಕಾರ್ಡ್, CID ಬಲೆ: ನಾಪತ್ತೆಯಾಗಿದ್ದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿಯರು 8 ತಿಂಗಳ ಬಳಿಕ ಪತ್ತೆ; ಒಬ್ಬಳು ಗರ್ಭಿಣಿ!

ನಾಪತ್ತೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಸಂಸಾರ, ಸಿಮ್ ಕಾರ್ಡ್, CID ಬಲೆ: ನಾಪತ್ತೆಯಾಗಿದ್ದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿಯರು 8 ತಿಂಗಳ ಬಳಿಕ ಪತ್ತೆ; ಒಬ್ಬಳು ಗರ್ಭಿಣಿ!
ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು
Published On :

ಬೆಂಗಳೂರು: ಎಂಟು ತಿಂಗಳ ಹಿಂದೆ ಬೆಂಗಳೂರಿನ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರನ್ನು ಕೊನೆಗೂ ಸಿಐಡಿ (CID) ಅಧಿಕಾರಿಗಳು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ನಾಪತ್ತೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಹೈಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಬ್ಬರೂ ಯುವತಿಯರನ್ನು ಪತ್ತೆಹಚ್ಚಿದ್ದಾರೆ.

ಈ ಇಬ್ಬರು ವಿದ್ಯಾರ್ಥಿನಿಯರು ಕಳೆದ ಜನವರಿ 31 ರಂದು ಕಾಲೇಜಿಗೆ ತೆರಳುವುದಾಗಿ ಹೇಳಿ ನಾಪತ್ತೆಯಾಗಿದ್ದರು. ಈ ಸಂಬಂಧ ವಿದ್ಯಾರಣ್ಯಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಶೋಧ ಆರಂಭಿಸಿದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಮಹತ್ವದ ಸುಳಿವು ಸಿಕ್ಕಿರಲಿಲ್ಲ. ನಂತರ ತನಿಷ್ಕಾ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಗಂಭೀರತೆ ಅರಿತ ಹೈಕೋರ್ಟ್, ತನಿಖೆಯನ್ನು ಸಿಐಡಿಗೆ ವರ್ಗಾಯಿಸಿತ್ತು.

​ಸ್ಥಳೀಯ ಪೊಲೀಸರ ಆರಂಭಿಕ ತನಿಖೆಯಲ್ಲಿ ಇಬ್ಬರೂ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವಿಷಯ ಬೆಳಕಿಗೆ ಬಂದಿತ್ತು. ಅಲ್ಲಿ ಮಗುವೊಂದರ ಜೊತೆ ಇವರು ಆಟವಾಡುತ್ತಿದ್ದಾಗ, ಮಗುವಿನ ತಾಯಿ ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇದಾದ ನಂತರ ಇವರ ಸುಳಿವು ಸಿಕ್ಕಿರಲಿಲ್ಲ. ಆದರೆ, ಬೆಟ್ಟದ ಆವರಣದಲ್ಲೇ ಇವರಿಗೆ ಕನಕಪುರ ಮೂಲದ ಯುವಕನೊಬ್ಬನ ಪರಿಚಯವಾಗಿದೆ.

​ಮನೆಯಲ್ಲಿದ್ದ ಕೌಟುಂಬಿಕ ಒತ್ತಡಕ್ಕೆ ಹೆದರಿದ್ದ ತನಿಷ್ಕಾ, "ನಾವಿಬ್ಬರೂ ಅಕ್ಕ-ತಂಗಿ, ನಮಗೆ ತಂದೆ-ತಾಯಿ ಯಾರೂ ಇಲ್ಲ, ಅನಾಥರು" ಎಂದು ಯುವಕನಿಗೆ ಸುಳ್ಳು ಹೇಳಿದ್ದಾರೆ. ಯುವತಿಯರ ಮಾತು ನಂಬಿದ ಆ ಯುವಕ, ಇಬ್ಬರನ್ನೂ ತನ್ನೊಂದಿಗೆ ಕರೆದೊಯ್ದಿದ್ದನು.

​ಸಂಸಾರ, ಸಿಮ್ ಕಾರ್ಡ್ ಮತ್ತು ಸಿಐಡಿ ಬಲೆ

ಬಳಿಕ ಆ ಯುವಕ ತನಿಷ್ಕಾಳನ್ನು ಮದುವೆಯಾಗಿದ್ದು, ತೇಜಸ್ವಿನಿಯನ್ನು ತಂಗಿ ಎಂದು ಮನೆಯಲ್ಲೇ ಜೊತೆಯಲ್ಲಿಟ್ಟುಕೊಂಡಿದ್ದನು. ಇತ್ತೀಚೆಗೆ ತನಿಷ್ಕಾ ಹೊಸ ಸಿಮ್ ಕಾರ್ಡ್ ಖರೀದಿಸಲು ತನ್ನ ಮೂಲ ಆಧಾರ್ ಕಾರ್ಡ್ ನೀಡಿದ್ದಳು. ಸಿಐಡಿ ಅಧಿಕಾರಿಗಳು ಈಗಾಗಲೇ ಈ ಆಧಾರ್ ಸಂಖ್ಯೆಯ ಮೇಲೆ ನಿಗಾ ಇರಿಸಿದ್ದರಿಂದ, ಟೆಲಿಕಾಂ ಸರ್ವಿಸ್ ಪ್ರೊವೈಡರ್ ಮೂಲಕ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ರವಾನೆಯಾಯಿತು.

​ಆಧಾರ್ ಮಾಹಿತಿ ಹಾಗೂ ನೆಟ್‌ವರ್ಕ್ ಸ್ಥಳವನ್ನು ಬೆನ್ನತ್ತಿದ ಸಿಐಡಿ ತಂಡ, ಇಬ್ಬರೂ ಯುವತಿಯರು ಇರುವ ಜಾಗವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ತನಿಷ್ಕಾ ಪ್ರಸ್ತುತ ಗರ್ಭಿಣಿಯಾಗಿದ್ದು, ಸಿಐಡಿ ಪೊಲೀಸರು ಇಬ್ಬರನ್ನೂ ಇಂದು ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.