ಗಣೇಶ ಮೂರ್ತಿ ವಿಸರ್ಜನೆ: ಹಲಸೂರು ಕೆರೆ ಕಲ್ಯಾಣಿಗೆ ಸಚಿವ ರಿಜ್ವಾನ್ ಅರ್ಷದ್ ಭೇಟಿ, ಸಿದ್ಧತೆ ಪರಿಶೀಲನೆ..!
ಈ ಹಿನ್ನೆಲೆಯಲ್ಲಿ ಹಳೆಯ ಮದ್ರಾಸ್ ರಸ್ತೆಯಲ್ಲಿರುವ ಎಂಇಜಿ ಮತ್ತು ಮೆಟಲ್ ಲ್ಯಾಂಪ್ಸ್ ಸಂಪರ್ಕಿಸುವ ಕೆನ್ಸಿಂಗ್ಟನ್ ರಸ್ತೆಯನ್ನು ಬಂದ್ ಮಾಡಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ನಿರ್ಧರಿಸಿದೆ.

ಬೆಂಗಳೂರು: ಗಣೇಶ ಮೂರ್ತಿ ವಿಸರ್ಜನೆಗೆ ಹಲಸೂರು ಕೆರೆ ಕಲ್ಯಾಣಿಯಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಸಿಸಿಟಿವಿ ಅಳವಡಿಕೆಯಿಂದ ಹಿಡಿದು ಕೆರೆಯ ನಾಲ್ಕು ಮೂಲೆಗಳಲ್ಲಿ ಸಂಚಾರಿ ವಿಸರ್ಜನಾ ಟ್ಯಾಂಕರ್ಗಳ ನಿಯೋಜನೆಯವರೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ಅವರು ಸೋಮವಾರ ಹೇಳಿದ್ದಾರೆ.
ಗಣೇಶ ಹಬ್ಬಕ್ಕೆ ಇನ್ನೇನು ಒಂದು ವಾರ ಬಾಕಿಯಿದ್ದು, ಸಾವಿರಾರು ಗಣೇಶ ಮೂರ್ತಿಗಳು ವಿಸರ್ಜನೆಗೆ ಆಗಮಿಸುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ಹಳೆಯ ಮದ್ರಾಸ್ ರಸ್ತೆಯಲ್ಲಿರುವ ಎಂಇಜಿ ಮತ್ತು ಮೆಟಲ್ ಲ್ಯಾಂಪ್ಸ್ ಸಂಪರ್ಕಿಸುವ ಕೆನ್ಸಿಂಗ್ಟನ್ ರಸ್ತೆಯನ್ನು ಬಂದ್ ಮಾಡಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ನಿರ್ಧರಿಸಿದೆ. ಗಣೇಶ ಮೂರ್ತಿಗಳನ್ನು ಸಾಗಿಸುವ ವಾಹನಗಳಿಗೆ ಮಾತ್ರ ಈ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗುತ್ತದೆ.
ಕೆರೆ ಸುತ್ತಲಿನ ನಾಲ್ಕು ಮೂಲೆಗಳಲ್ಲಿ ಸಂಚಾರಿ ವಿಸರ್ಜನಾ ಟ್ಯಾಂಕ್ಗಳನ್ನು ನಿಯೋಜಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಭಕ್ತರ ಹಿತದೃಷ್ಟಿಯಿಂದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಗಣೇಶ ಮೂರ್ತಿಗಳು ವಿಸರ್ಜನೆಗೆ ಬರುವ ನಿರೀಕ್ಷೆ ಇರುವುದರಿಂದ ಸಂಚಾರಿ ಟ್ಯಾಂಕರ್ಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗುವುದು. ಇದರಿಂದ ಕಲ್ಯಾಣಿಯಲ್ಲಿ ಜನದಟ್ಟಣೆ ಕಡಿಮೆಯಾಗಲಿದ್ದು, ಸುರಕ್ಷತೆ ಹೆಚ್ಚಲಿದೆ ಎಂದು ಸಚಿವರು ಹೇಳಿದ್ದಾರೆ.
ನಾಗರಿಕ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲಾಗಿದ್ದು, ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ಕಲ್ಯಾಣಿಯ ಬಳಿ ಈಜುಗಾರರು ಹಾಗೂ ಸ್ವಯಂಸೇವಕರನ್ನು ನಿಯೋಜಿಸಿ, ಭಕ್ತರಿಂದ ಗಣೇಶ ಮೂರ್ತಿಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಮೂರ್ತಿಗಳನ್ನು ಎತ್ತಿ ಕಲ್ಯಾಣಿಯಲ್ಲಿ ವಿಸರ್ಜಿಸಲು ಎರಡು ಕ್ರೇನ್ಗಳನ್ನು ಬಳಸಲಾಗುತ್ತದೆ.
ಗಣೇಶ ಮೂರ್ತಿ ವಿಸರ್ಜನೆ ವೇಳೆ ಹೆಚ್ಚಿನ ಸಮಯದಲ್ಲಿ ಉಂಟಾಗಬಹುದಾದ ವಾಹನ ದಟ್ಟಣೆಯನ್ನು ಸಂಚಾರ ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆ ಪೊಲೀಸರು ನಿರ್ವಹಿಸಲಿದ್ದಾರೆ. ಕಾನೂನು ಸುವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ಹಲವು ವರ್ಷಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಹೇಳಿದರು.
ಕಲ್ಯಾಣಿಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಸೌಂದರ್ಯಕ್ಕಾಗಿ ಮೆಟ್ಟಿಲುಗಳು ಹಾಗೂ ಸುರಕ್ಷತೆಗಾಗಿ ಕಬ್ಬಿಣದ ಗ್ರಿಲ್ಗಳನ್ನು ಅಳವಡಿಸಿರುವ ಬೆಂಗಳೂರು ಮಹಾನಗರ ಪ್ರಾಧಿಕಾರ ಮತ್ತು ಕೇಂದ್ರ ಪಾಲಿಕೆಯ ಎಂಜಿನಿಯರ್ಗಳ ಕಾರ್ಯವನ್ನು ಸಚಿವರು ಶ್ಲಾಘಿಸಿದರು. ಇದೇ ವೇಳೆ ಕೆರೆಯ ಒಟ್ಟಾರೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಎಂಜಿನಿಯರ್ಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬಿಸಿಸಿಸಿ ಆಯುಕ್ತ ಜಿ ಜಗದೀಶ, ಕಲ್ಯಾಣ, ಶಿಕ್ಷಣ ಮತ್ತು ಆರೋಗ್ಯ ವಿಶೇಷ ಆಯುಕ್ತ ವೆಂಕಟ ಚಲಪತಿ, ಬೆಂಗಳೂರು ಪೂರ್ವ ಡಿಸಿಪಿ ವಿಕ್ರಮ್ ಅಮಠೆ, ಸಂಚಾರ (ಪೂರ್ವ) ಡಿಸಿಪಿ ಗೋಪಾಲ್ ಬ್ಯಾಕೋಡ್ ಮತ್ತು ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



