ರಾಜ್ಯ

ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಭಾರೀ ಮೋಸ! ಶೇ. 85ರಷ್ಟು ಯಂತ್ರಗಳಲ್ಲಿ ದೋಷ ಪತ್ತೆ; ಸರ್ಕಾರ ಖಡಕ್ ಎಚ್ಚರಿಕೆ

ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ತೈಲದ ಅಳತೆಯಲ್ಲಿ ಮೋಸವಾಗುತ್ತಿರುವುದನ್ನು ತಡೆಗಟ್ಟಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಭಾರೀ ಮೋಸ! ಶೇ. 85ರಷ್ಟು ಯಂತ್ರಗಳಲ್ಲಿ ದೋಷ ಪತ್ತೆ; ಸರ್ಕಾರ ಖಡಕ್ ಎಚ್ಚರಿಕೆ
ರಾಜ್ಯದ ಶೇ. 85ರಷ್ಟು ಪೆಟ್ರೋಲ್ ಬಂಕ್‌ಗಳ ಯಂತ್ರಗಳಲ್ಲಿ ದೋಷ ಪತ್ತೆ: ಸಚಿವ ರಿಜ್ವಾನ್ ಅರ್ಷದ್ — Online Desk
Published On :

ಬೆಂಗಳೂರು: ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ತೈಲದ ಅಳತೆಯಲ್ಲಿ ಆಗುತ್ತಿರುವ ಮೋಸವನ್ನು ತಡೆಗಟ್ಟಲು ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಗ್ರಾಹಕರಿಗೆ ಅನುಮಾನ ಬಂದರೆ ಸ್ಥಳದಲ್ಲೇ ಪರಿಶೀಲನೆ ನಡೆಸಲು ಅವಕಾಶ ನೀಡಬೇಕು ಮತ್ತು ದೂರು ಸಲ್ಲಿಸಲು ಉಚಿತ ಸಹಾಯವಾಣಿ ಬಳಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಖಡಕ್ ಸೂಚನೆ ನೀಡಿದ್ದಾರೆ. ಇದರೊಂದಿಗೆ, ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳ ಮೇಲೆ ಹಠಾತ್ ದಾಳಿ ನಡೆಸಿ ತಪಾಸಣೆ ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪೆಟ್ರೋಲ್ ಬಂಕ್‌ಗಳಲ್ಲಿ ಮಹಾಮೋಸ!

ಕಾನೂನು ಮಾಪನಶಾಸ್ತ್ರ ಇಲಾಖೆಯು ರಾಜ್ಯದ ಒಟ್ಟು 5,946 ಪೆಟ್ರೋಲ್ ಬಂಕ್‌ಗಳ ಪೈಕಿ ಮೊದಲ ಹಂತದಲ್ಲಿ 805 ಬಂಕ್‌ಗಳಲ್ಲಿ ವ್ಯಾಪಕ ತಪಾಸಣೆ ನಡೆಸಿದೆ. ಈ ವೇಳೆ ತಪಾಸಣೆ ನಡೆಸಲಾದ ಬಂಕ್‌ಗಳ ಪೈಕಿ ಬರೋಬ್ಬರಿ 768 ಪೆಟ್ರೋಲ್ ಬಂಕ್‌ಗಳಲ್ಲಿ ತೈಲದ ಅಳತೆ ನಿಖರವಾಗಿಲ್ಲ (ಕಡಿಮೆ ಪೂರೈಕೆ) ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಜೊತೆಗೆ ತೈಲ ಅಳತೆಯಲ್ಲಿ ಗಂಭೀರ ವ್ಯತ್ಯಾಸ ಹಾಗೂ ಗ್ರಾಹಕರಿಗೆ ವಂಚನೆ ಎಸಗುತ್ತಿದ್ದ 101 ಪೆಟ್ರೋಲ್ ಬಂಕ್‌ಗಳ ವಿರುದ್ಧ ಈಗಾಗಲೇ ಕಾನೂನು ರೀತ್ಯಾ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಮುಂದುವರೆದು, ಪರಿಶೀಲನೆಗೆ ಒಳಪಟ್ಟ ಒಟ್ಟು 3071 ಪೆಟ್ರೋಲ್ ಪೂರೈಕೆ ಗನ್‌ಗಳ ಪೈಕಿ 2618 ಗನ್‌ಗಳಲ್ಲಿ ಅಳತೆಯ ದೋಷಗಳು ಕಂಡುಬಂದಿವೆ. ಅಂದರೆ ಸುಮಾರು ಶೇ 85ರಷ್ಟು ಪೂರೈಕೆ ಗನ್‌ಗಳಿಂದ ಇಂಧನ ಸರಿಯಾಗಿ ಸರಬರಾಜು ಆಗುತ್ತಿಲ್ಲ. ಅದರಲ್ಲೂ, ನಿಯಮ 4(12e) ಪ್ರಕಾರ ಇಂತಹ ವ್ಯತ್ಯಾಸ ಕಂಡುಬಂದಾಗ ದೂರು ನೀಡಬೇಕಾಗಿದ್ದರೂ ಯಾರೂ ಗಮನ ಹರಿಸಿಲ್ಲ. ಕೇಂದ್ರ ಸರ್ಕಾರದ ಹಿಂದಿನ ಆದೇಶಗಳ ಬದಲಾವಣೆಯಿಂದಾಗಿ ತಪಾಸಣೆಯಲ್ಲಿ ವಿಳಂಬ ಉಂಟಾಗಿತ್ತು. ಈಗ ಜನಸಾಮಾನ್ಯರ ಹಿತದೃಷ್ಟಿಯಿಂದ ಜಂಟಿ ಕಾರ್ಯಾಚರಣೆ ತೀವ್ರಗೊಂಡಿದೆ.

ವಂಚನೆ ತಡೆಯಲು ರಿಜ್ವಾನ್ ಅರ್ಷದ್ ಖಡಕ್ ಆದೇಶವೇನು?

  • ಪೂರೈಕೆ ಗನ್‌ಗಳ ಕಡ್ಡಾಯ ತಪಾಸಣೆ: ಶೇ. 85 ರಷ್ಟು ಪೆಟ್ರೋಲ್ ಪೂರೈಕೆ ಗನ್‌ಗಳಿಂದ ಇಂಧನ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇಂತಹ ತಾಂತ್ರಿಕ ಅಕ್ರಮಗಳನ್ನು ಪತ್ತೆ ಹಚ್ಚಲು ನಿರಂತರ ತಪಾಸಣೆ ನಡೆಸಬೇಕು.

  • ಗ್ರಾಹಕರ ಹಕ್ಕು ರಕ್ಷಣೆ: ದುಬಾರಿ ಹಣ ತೆತ್ತು ಇಂಧನ ಖರೀದಿಸುವ ಸಾರ್ವಜನಿಕರಿಗೆ ಒಂದು ತೊಟ್ಟು ತೈಲವೂ ನಷ್ಟವಾಗದಂತೆ ನೋಡಿಕೊಳ್ಳುವುದು ಇಲಾಖೆಯ ಕರ್ತವ್ಯ ಎಂದು ಸಚಿವರು ಎಚ್ಚರಿಸಿದ್ದಾರೆ.

  • ಮುಲಾಜಿಲ್ಲದೆ ಕ್ರಮ: ವಂಚನೆ ಮಾಡುವ ಬಂಕ್ ಮಾಲೀಕರು ಎಷ್ಟೇ ಪ್ರಭಾವಿಯಾಗಿದ್ದರೂ ಪರವಾನಗಿ ರದ್ದುಪಡಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಮುಂದುವರೆದು, ಕೇಂದ್ರ ಸರ್ಕಾರದ ಕ್ಯಾಲಿಬರೇಷನ್‌ಗೆ ಸಂಬಂಧಿಸಿದ ಎರಡು ಅಧಿಸೂಚನೆಗಳಿಗೆ ರಾಜ್ಯ ಸರ್ಕಾರದ ಆಕ್ಷೇಪವಿದೆ ಎಂದ ರಿಜ್ವಾನ್ ಅರ್ಷದ್, "ಈ ಹಿಂದೆ ವರ್ಷಕ್ಕೊಮ್ಮೆ ಕ್ಯಾಲಿಬರೇಷನ್ ಮಾಡಿಸಬೇಕಿದ್ದ ನಿಯಮವನ್ನು ಕೇಂದ್ರ ಸರ್ಕಾರ ಎರಡು ವರ್ಷಕ್ಕೊಮ್ಮೆ ಮಾಡುವಂತೆ ಬದಲಾವಣೆ ಮಾಡಿದೆ. ಅಲ್ಲದೆ, ಪೆಟ್ರೋಲ್ ಗನ್‌ಗಳ ಕ್ಯಾಲಿಬರೇಷನ್‌ ಅನ್ನು ಖಾಸಗಿಯವರು ಮಾಡಬಹುದು ಎಂಬ ಮತ್ತೊಂದು ಅಧಿಸೂಚನೆಯೂ ಬಂದಿದೆ ಎಂದು ಕೇಂದ್ರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.