ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ ನರ್ಸ್ ಮೇಲೆ ಅತ್ಯಾಚಾರ: ವಿಡಿಯೋ ಮಾಡಿ ನಿರಂತರ ಬ್ಲ್ಯಾಕ್‌ಮೇಲ್; ರೇಡಿಯಾಲಜಿಸ್ಟ್ ಬಂಧನ
ಮಹಿಳೆ ನೀಡಿರುವ ದೂರಿನ ಪ್ರಕಾರ, ಡಿಸೆಂಬರ್ 15, 2025ರಂದು ಡಯಾಗ್ನಾಸ್ಟಿಕ್ ಸೆಂಟರ್ ಮಾಲೀಕ ಕೆಲಸ ಮಾಡುತ್ತಿದ್ದ ವೇಳೆ ಮಾತ್ರೆಗಳನ್ನು ನೀಡಿದ್ದು, ಇದರಿಂದ ಆಕೆ ಪ್ರಜ್ಞೆ ಕಳೆದುಕೊಂಡಿದ್ದೆ.

ಬೆಂಗಳೂರು: ನರ್ಸ್ ಒಬ್ಬರಿಗೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ, ಆ ದೃಶ್ಯಗಳನ್ನು ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಹಾಗೂ ಜಾತಿ ನಿಂದನೆ ಮಾಡಿದ ಗಂಭೀರ ಆರೋಪದ ಮೇಲೆ 42 ವರ್ಷದ ರೇಡಿಯಾಲಜಿಸ್ಟ್ ಮತ್ತು ಡಯಾಗ್ನಾಸ್ಟಿಕ್ ಸೆಂಟರ್ ಮಾಲೀಕನೊಬ್ಬನನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಡಯಾಗ್ನಾಸ್ಟಿಕ್ ಸೆಂಟರ್'ನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ದೂರು ಆಧರಿಸಿ ಕೊಡಿಗೆಹಳ್ಳಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ವಿವಿಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದು, ರೇಡಿಯಾಲಜಿಸ್ಟ್‌ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಮಹಿಳೆ ನೀಡಿರುವ ದೂರಿನ ಪ್ರಕಾರ, ಡಿಸೆಂಬರ್ 15, 2025ರಂದು ಡಯಾಗ್ನಾಸ್ಟಿಕ್ ಸೆಂಟರ್ ಮಾಲೀಕ ಕೆಲಸ ಮಾಡುತ್ತಿದ್ದ ವೇಳೆ ಮಾತ್ರೆಗಳನ್ನು ನೀಡಿದ್ದು, ಇದರಿಂದ ಆಕೆ ಪ್ರಜ್ಞೆ ಕಳೆದುಕೊಂಡಿದ್ದೆ. ಬಳಿಕ ಪ್ರಜ್ಞೆ ಮರಳಿದಾಗ ಬಟ್ಟೆಯಿಲ್ಲದೆ ಇರುವುದನ್ನು ಗಮನಿಸಿ ವೈದ್ಯರನ್ನು ಪ್ರಶ್ನಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ವೈದ್ಯರು ಆ ಘಟನೆಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಆ ವಿಡಿಯೋ ಬಳಸಿ ಬ್ಲ್ಯಾಕ್‌ಮೇಲ್ ಮಾಡಿ, ಮುಂದಿನ ಕೆಲವು ತಿಂಗಳುಗಳಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿ, ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪಿ ಅಮೃತನಗರದಲ್ಲಿ ಮಹಿಳೆಗಾಗಿ ಬಾಡಿಗೆ ಮನೆಯನ್ನು ವ್ಯವಸ್ಥೆ ಮಾಡಿಕೊಟ್ಟಿದ್ದು, ಅಲ್ಲಿಯೂ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.
ಜುಲೈ 2ರಂದು ತಾನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವಳು ಎಂಬುದು ತಿಳಿದ ಬಳಿಕ ಆರೋಪಿ, ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಮಾತನಾಡಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಸಂಸ್ಥೆಯಲ್ಲಿ ಇನ್ನು ಮುಂದೆ ಕೆಲಸ ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾರೆ.
ನನ್ನ ಜಾತಿ ತಿಳಿದ ಬಳಿಕ ಆತ ನನ್ನನ್ನು ಮದುವೆಯಾಗಲು ನಿರಾಕರಿಸಿದ್ದಲ್ಲದೆ, ನಮ್ಮ ಆತ್ಮೀಯ ಕ್ಷಣಗಳ ವಿಡಿಯೋಗಳು ಮತ್ತು ಛಾಯಾಚಿತ್ರಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಿಗೆಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



