ಕೊಪ್ಪಳ: ಕೆಲಸದಿಂದ ತಪ್ಪಿಸಿಕೊಳ್ಳಲು ಭಾರಿ ಪ್ಲಾನ್; AI ನಲ್ಲಿ ಹುಲಿ ಸೃಷ್ಟಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿಬಿದ್ದ ಮೈಗಳ್ಳ!
ಕೊಪ್ಪಳ ಸುತ್ತಮುತ್ತ ಕರಡಿ, ಹುಲಿ ಪ್ರತ್ಯಕ್ಷ ವರದಿಗಳಿಂದ ಹಳ್ಳಿಯ ಜನರು ಕೂಲಿಗೆ ಹೋಗಲು ಹೆದರುವಂತಾಗಿದೆ.

ಕೊಪ್ಪಳ: ಕೃತಕ ಬುದ್ಧಿಮತ್ತೆಯಿಂದ ಪ್ರಯೋಜನಗಳಿರುವಷ್ಟೇ ಸಮಸ್ಯೆಗಳೂ ಇವೆ. ಸರಿಯಾಗಿ ಬಳಕೆ ಮಾಡದೇ ಇರುವವರ ಕೈಲಿ AI ಸಿಕ್ಕಿದರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ.
ಆಗಿದ್ದಿಷ್ಟು.... ಕೊಪ್ಪಳದ ಕವಳಿ ಗ್ರಾಮದ ಈರಣ್ಣ ಎಂಬ ಯುವಕ AI ನಲ್ಲಿ ಹುಲಿ ಸೃಷ್ಟಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. ಮನೆಯಲ್ಲಿ ಬಡತನ ಹಾಸು ಹೊದ್ದರೂ ಕೆಲಸದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈತ AI ಮೊರೆ ಹೋಗಿದ್ದಾನೆ. ಈರಣ್ಣ ಪೋಷಕರು ಕಡು ಬಡವರಾಗಿದ್ದು. ದೈನಂದಿನ ಜೀವನ ನಿರ್ವಹಣೆಗೆ ಕೂಲಿ ಮಾಡಬೇಕಾದ ಅನಿವಾರ್ಯತೆ ಇತ್ತು. ಇಂಥ ಪರಿಸ್ಥಿತಿಯಲ್ಲಿ ಒಬ್ಬರೇ ದುಡಿದರೆ ಆಗದು ಎಂದು ಮಗ ಈರಣ್ಣನಿಗೆ ಕೆಲಸಕ್ಕೆ ಹೋಗುವಂತೆ ಪೋಷಕರು ಬುದ್ಧಿ ಹೇಳಿದ್ದಾರೆ. ಆದರೆ ಕೂಲಿ ಕೆಲಸ ಮಾಡಲು ಇಷ್ಟವಿಲ್ಲದ ಈರಣ್ಣ ಹೇಗಾದರೂ ಕೆಲಸಕ್ಕೆ ಹೋಗುವುದರಿಂದ ತಪ್ಪಿಸಿಕೊಳ್ಳಲು AI ನ್ನು ಬಳಸಿಕೊಂಡಿದ್ದಾನೆ.
AI ನಲ್ಲಿ ಹುಲಿ ಸೃಷ್ಟಿಸಿ, ಗುಡ್ಡದಲ್ಲಿ ಹುಲಿ ಬಂದಿದೆ ಅಂತಾ ಇನ್ಸ್‌ಟಾಗ್ರಾಮ್ ನಲ್ಲಿ ಶೇರ್ ಮಾಡಿ ಕೆಲಸದಿಂದ ತಪ್ಪಿಸಿಕೊಳ್ಳುವ ಪ್ಲಾನ್ ಮಾಡಿದ್ದಾನೆ ಈ ಯುವಕ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆ ಬಿಸಿ ಉಂಟಾಗಿತ್ತು.
ತನಿಖೆ ನಡೆಸಿದ ಅಧಿಕಾರಿಗಳಿಗೆ ಈ ಯುವಕ ಕೆಲಸಕ್ಕೆ ಹೋಗುವುದು ಇಷ್ಟವಿಲ್ಲದೇ AI ಮೂಲಕ ಹುಲಿ ಸೃಷ್ಟಿಸಿ ಭೀತಿ ಮೂಡಿಸಿದ್ದಾನೆ ಎಂಬುದು ಸ್ಪಷ್ಟವಾಯಿತು. ಆತಂಕ ಸೃಷ್ಟಿಸಿದ್ದ ಯುವಕನಿಗೆ ಅರಣ್ಯಾಧಿಕಾರಿಗಳು 50 ಬಸ್ಕಿ ಹೊಡೆಸಿದ್ದಾರೆ. ಅರಣ್ಯ ಸಿಬ್ಬಂದಿ ವಿಚಾರಣೆ ವೇಳೆ ಕೆಲಸದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದೆ ಅಂತಾ ಈರಣ್ಣ ತಪ್ಪೊಪ್ಪಿಕೊಂಡಿದ್ದಾನೆ.
ಕೊಪ್ಪಳ ಸುತ್ತಮುತ್ತ ಕರಡಿ, ಹುಲಿ ಪ್ರತ್ಯಕ್ಷ ವರದಿಗಳಿಂದ ಹಳ್ಳಿಯ ಜನರು ಕೂಲಿಗೆ ಹೋಗಲು ಹೆದರುವಂತಾಗಿದೆ. ಹೀಗಿರುವಾಗ ಎಐನಲ್ಲಿ ಹುಲಿ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು. ನೈಜ ವಿಡಿಯೋ ರೀತಿಯಲ್ಲೇ ಕಾಣುವ ದೃಶ್ಯವನ್ನು ಕಂಡು ಗ್ರಾಮಸ್ಥರು ಗೊಂದಲಕ್ಕೆ ಒಳಗಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



