ಬೆಂಗಳೂರಿನ 'ಸುರಂಗ ರಸ್ತೆ' ಯೋಜನೆ ಬೆಂಬಲಿಸಲು ಉದ್ಯಮಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಕರೆ!
ಈ ಯೋಜನೆಗೆ ವ್ಯಕ್ತವಾಗುತ್ತಿರುವ ವಿರೋಧವು ರಾಜಕೀಯ ಪ್ರೇರಿತವಾಗಿದ್ದು, ಈ ಮೂಲಸೌಕರ್ಯವು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿದರು.

ಬೆಂಗಳೂರು: ಬೆಂಗಳೂರಿನಲ್ಲಿ ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ಈ ಯೋಜನೆಗೆ ಬೆಂಬಲ ಸೂಚಿಸುವಂತೆ ಉದ್ಯಮಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಕರೆ ನೀಡಿದ್ದಾರೆ.
'ಉಬುಂಟು' (Ubuntu) ಸಂಸ್ಥೆ ಆಯೋಜಿಸಿದ್ದ ಒಗ್ಗಟ್ಟಾಗಿ ಬೆಳೆಯೋಣ(Together We Grow) ನಡೆದ ಐದನೇ ಆವೃತ್ತಿಯ 'ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನ'ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಸುರಂಗ ಯೋಜನೆಯು ಪ್ರಯಾಣಿಕರ ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ ಎಂದು ಹೇಳಿದರು.
ಅಲ್ಲದೆ, ಈ ಯೋಜನೆಗೆ ವ್ಯಕ್ತವಾಗುತ್ತಿರುವ ವಿರೋಧವು ರಾಜಕೀಯ ಪ್ರೇರಿತವಾಗಿದ್ದು, ಈ ಮೂಲಸೌಕರ್ಯವು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿದರು.
ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಇಲ್ಲಿ 1.4 ಕೋಟಿ ವಾಹನಗಳಿವೆ. ನಗರದ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರವು ಮೂಲಸೌಕರ್ಯಕ್ಕಾಗಿ 1.5 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಉದ್ಯಮಿಗಳಾಗಿ, ನೀವು ಸುರಂಗ ಯೋಜನೆಗೆ ಬೆಂಬಲವಾಗಿ ಧ್ವನಿ ಎತ್ತಬೇಕು ಎಂದು ಅವರು ಹೇಳಿದರು.
ಮಹಿಳೆಯರು ಬರೀ ಸಾಂಪ್ರದಾಯಿಕ ಚೌಕಟ್ಟಿಗೆ ಸೀಮಿತರಾಗಿಲ್ಲ: ಮಹಿಳೆಯರು ಮತ್ತು ಯುವಜನರ ಶಕ್ತಿಯ ಮೇಲೆ ಸರ್ಕಾರಕ್ಕೆ ನಂಬಿಕೆಯಿದೆ ಎಂದು ಹೇಳಿದ ಸಿಎಂ ಡಿ.ಕೆ. ಶಿವಕುಮಾರ್, ಗ್ರಾಮ ಪಂಚಾಯಿತಿಗಳಿಂದ ಸಂಸತ್ತಿನವರೆಗೆ ಮಹಿಳಾ ನಾಯಕತ್ವದ ಅಗತ್ಯವನ್ನು ಒತ್ತಿ ಹೇಳಿದರು. ಮಹಿಳೆಯರನ್ನು ಇನ್ನು ಮುಂದೆ ಸಾಂಪ್ರದಾಯಿಕ ಚೌಕಟ್ಟಿಗೆ ಸಿಮೀತಗೊಳಿಸಲು ಸಾಧ್ಯವಿಲ್ಲ. ಅವರು ಸಮರ್ಥ ಚಿಂತಕರು, ವೃತ್ತಿಪರರು ಹಾಗೂ ಉದ್ಯಮಿಗಳಾಗಿ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ ಅವರು, 'ಶಕ್ತಿ' ಯೋಜನೆಯಡಿ ಮಹಿಳೆಯರು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದು, ಇದು ಅವರ ಆತ್ಮವಿಶ್ವಾಸ ಮತ್ತು ಸ್ವಾತಂತ್ರ್ಯವನ್ನು ಹೆಚ್ಚಿಸಿದೆ .'ಗೃಹ ಲಕ್ಷ್ಮಿ' ಯೋಜನೆಯಡಿ ರಾಜ್ಯದ 1.22 ಕೋಟಿ ಮಹಿಳೆಯರಿಗೆ ಮನೆ ನಿರ್ವಹಣಾ ವೆಚ್ಚಕ್ಕಾಗಿ ತಲಾ 2,000 ರೂ.ಗಳನ್ನು ನೀಡಲಾಗುತ್ತಿದೆ. ಸರ್ಕಾರವು ಮಹಿಳಾ ಪರವಾದ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು.
ಮೊದಲ ಮಗು ಗಂಡು ಮಗುವಾಗಿರಬೇಕು ಎಂಬ ಆದ್ಯತೆಯ ಮನಸ್ಥಿತಿಯಿಂದ ಸಮಾಜ ಹೊರಬರಬೇಕು ಎಂದು ಕರೆ ನೀಡಿದ ಶಿವಕುಮಾರ್, ಪೋಷಕರು ಮಕ್ಕಳಲ್ಲಿ ಮೌಲ್ಯಗಳು ಮತ್ತು ಶಿಸ್ತನ್ನು ಬೆಳೆಸಬೇಕು ಎಂದು ಹೇಳಿದರು. ಆರ್ಥಿಕ ಸವಾಲುಗಳನ್ನು ಮೆಟ್ಟಿ ನಿಂತು ಉದ್ಯೋಗ ಸೃಷ್ಟಿಕರ್ತರಾಗಿರುವ ಮಹಿಳಾ ಉದ್ಯಮಿಗಳನ್ನು ಶ್ಲಾಘಿಸಿದ ಅವರು, ಸರ್ಕಾರವು ಅವರಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.
ಸೋನಿಯಾ ಗಾಂಧಿ, ಇಂದಿರಾ ಗಾಂಧಿ, ದ್ರೌಪದಿ ಮತ್ತು ಕುಂತಿ ಸೇರಿದಂತೆ ಭಾರತೀಯ ಇತಿಹಾಸ ಹಾಗೂ ಪುರಾಣಗಳಲ್ಲಿನ ಮಹಿಳಾ ನಾಯಕಿಯರನ್ನು ಉಲ್ಲೇಖಿಸಿದ ಅವರು, ಮಹಿಳೆಯರು ನಿರಂತರವಾಗಿ ತ್ಯಾಗ ಮತ್ತು ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದ್ದಾರೆ. ಶೇ. 33ರಷ್ಟು ಮೀಸಲಾತಿಯೊಂದಿಗೆ, ಸ್ಥಳೀಯ ಸಂಸ್ಥೆಗಳಿಂದ ಸಂಸತ್ತಿನವರೆಗಿನ ನಾಯಕತ್ವದ ಸ್ಥಾನಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವು ಹೆಚ್ಚುತ್ತಲೇ ಹೋಗುತ್ತದೆ ಎಂದು ಅವರು ತಿಳಿಸಿದರು.
ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಸವಾಲುಗಳನ್ನು ಮೆಟ್ಟಿ ನಿಂತು ಉದ್ಯಮಗಳನ್ನು ಕಟ್ಟಿರುವ ಮಹಿಳಾ ಉದ್ಯಮಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ರಾಮಾಯಣವನ್ನು ಉಲ್ಲೇಖಿಸಿದ ಶಿವಕುಮಾರ್, ಸೀತೆಯ ತ್ಯಾಗ ಮತ್ತು ಹೋರಾಟಗಳ ಕಾರಣದಿಂದಾಗಿ ಆಕೆ ವ್ಯಕ್ತಿತ್ವವು ರಾಮನ ವ್ಯಕ್ತಿತ್ವಕ್ಕಿಂತಲೂ ಶ್ರೇಷ್ಠವಾಗಿದೆ ಎಂದು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




