ಪಶ್ಚಿಮ ಘಟ್ಟಗಳಲ್ಲಿ ಅಪರೂಪದ ನೀಲಕುರಿಂಜಿ ಹೂಗಳು: ಪ್ರವಾಸಿಗರಿಗೆ ಸರ್ಕಾರ ಸೂಚನೆ; ಚಾರಣ ಮಾರ್ಗಗಳಲ್ಲಿ ಕಾಲಿಡುವ ಮುನ್ನ ಈ ನಿಯಮ ತಿಳಿಯಿರಿ..!
ಪ್ರವಾಸಿಗರಿಗೆ ನೀಲಕುರಿಂಜಿಯಂತಹ ಅಪರೂಪದ ಹೂವುಗಳ ಅರಳುವಿಕೆ, ಅವುಗಳ ಪರಿಸರ ಮಹತ್ವದ ಕುರಿತು ಮಾಹಿತಿ ನೀಡುವುದರ ಜತೆಗೆ, ನೈಸರ್ಗಿಕ ತಾಣಗಳಲ್ಲಿ ಪರಿಸರ ಸ್ನೇಹಿ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು.

ಬೆಂಗಳೂರು: ಪಶ್ಚಿಮ ಘಟ್ಟಗಳ ಭಾಗದಲ್ಲಿ ಅಪರೂಪದ ನೀಲಕುರಿಂಜಿ ಹೂವುಗಳು ಅರಳಿರುವುದು ಪ್ರಕೃತಿ ಪ್ರಿಯರು ಹಾಗೂ ಪ್ರವಾಸಿಗರಲ್ಲಿ ವಿಶೇಷ ಕುತೂಹಲ ಮೂಡಿಸಿದೆ.
ಹೂವುಗಳ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿರುವುದರಿಂದ, ಪರಿಸರ ಸಂರಕ್ಷಣೆ ಹಾಗೂ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.
ನೀಲಕುರಿಂಜಿ ಹೂವುಗಳು ಅರಳಿರುವ ಪ್ರದೇಶಗಳಿಗೆ ಭೇಟಿ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಸಾರ್ವಜನಿಕರಿಗೆ ಆಹ್ವಾನ ನೀಡಿದೆ. ಇದೇ ವೇಳೆ ಚಾರಣ ಮಾರ್ಗಗಳಲ್ಲಿ ಕಟ್ಟುನಿಟ್ಟಿನ ನಿಯಮಗಳು ಹಾಗೂ ಪ್ರವಾಸಿಗರ ಸಂಖ್ಯೆಗೆ ಮಿತಿ ವಿಧಿಸಿರುವುದಾಗಿ ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ಪ್ರವಾಸಿಗರಿಗೆ ನೀಲಕುರಿಂಜಿಯಂತಹ ಅಪರೂಪದ ಹೂವುಗಳ ಅರಳುವಿಕೆ, ಅವುಗಳ ಪರಿಸರ ಮಹತ್ವದ ಕುರಿತು ಮಾಹಿತಿ ನೀಡುವುದರ ಜತೆಗೆ, ನೈಸರ್ಗಿಕ ತಾಣಗಳಲ್ಲಿ ಪರಿಸರ ಸ್ನೇಹಿ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಪ್ರವಾಸೋದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.
ಕುದುರೆಮುಖವನ್ನು ಪ್ರಕೃತಿ ಮತ್ತು ಪರಿಸರ ಪ್ರವಾಸೋದ್ಯಮ ತಾಣವಾಗಿ ಗುರುತಿಸಲಾಗಿದೆ. ಪ್ರವಾಸಿಗರ ಅನುಭವವನ್ನು ಉತ್ತಮಪಡಿಸುವ ಜತೆಗೆ, ಹೂವುಗಳು ಹಾಗೂ ಅವುಗಳ ಆವಾಸಸ್ಥಾನಕ್ಕೆ ಯಾವುದೇ ಹಾನಿಯಾಗದಂತೆ ಅಗತ್ಯ ಮಾಹಿತಿ, ಮಾರ್ಗದರ್ಶನ ಮತ್ತು ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕುದುರೆಮುಖದಲ್ಲಿ ಸೀಮಿತ ಪ್ರಮಾಣದಲ್ಲಿ ಅರಳಿರುವ ನೀಲಿ-ನೇರಳೆ ಬಣ್ಣದ ನೀಲಕುರಿಂಜಿ ಹೂವುಗಳು ಪ್ರವಾಸಿಗರಲ್ಲಿ ವಿಶೇಷ ಆಸಕ್ತಿ ಮೂಡಿಸಿವೆ. ಇಂತಹ ಅಪರೂಪದ ನೈಸರ್ಗಿಕ ವಿದ್ಯಮಾನಗಳನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಪ್ರವಾಸೋದ್ಯಮದ ಮೂಲಕ ಪರಿಚಯಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ನೀಲಕುರಿಂಜಿ ಹೂವುಗಳು ಕುರಿಂಜಲ್ ಶಿಖರ, ಗಂಗಾಡಿಕಲ್, ನೇತ್ರಾವತಿ ಮತ್ತು ಕುದುರೆಮುಖ ಸೇರಿದಂತೆ ನಾಲ್ಕು ಚಾರಣ ಮಾರ್ಗಗಳಲ್ಲಿ ಅರಳಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಾಲ್ಕೂ ಚಾರಣ ಮಾರ್ಗಗಳು ಪ್ರವಾಸಿಗರಿಗೆ ಮುಕ್ತವಾಗಿದ್ದರೂ, ‘ಅರಣ್ಯ ವಿಹಾರ’ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡ ಬಳಿಕವಷ್ಟೇ ಪ್ರವೇಶಕ್ಕೆ ಅವಕಾಶವಿದೆ.
ಇದೇ ವೇಳೆ ನೀಲಕುರಿಂಜಿ ಹೂವುಗಳನ್ನು ವೀಕ್ಷಿಸಲು ಯಾವುದೇ ವಿಶೇಷ ಅನುಮತಿ ಅಗತ್ಯವಿಲ್ಲ ಎಂದು ಕೊಡಚಾದ್ರಿಯ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ಚಾರಣಿಗರ ಸಂಖ್ಯೆಯನ್ನು ನಿಯಂತ್ರಿಸುವುದರ ಜತೆಗೆ ಮಾರ್ಗಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವೇಶ ಮಿತಿ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ವಿಶೇಷವಾಗಿ ಏಪ್ರಿಲ್ 9ರಂದು ಚಾರಣಕ್ಕೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಜಾರಿಯಾದ ಬಳಿಕ ಕಾಲ್ನಡಿಗೆ ಪ್ರವಾಸಿಗರ ಸಂಖ್ಯೆಯ ಮೇಲೂ ನಿಯಂತ್ರಣ ವಿಧಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



