'ಸುದೀಪ್ರನ್ನು ಪರಿಚಯಿಸಿದ್ದು ನಾನು'; ಮತ್ತೆ ಗುಡುಗಿದ ದಮ್ಮು, ತಾಕತ್ ಇದ್ರೆ ಬನ್ನಿ ಎಂದಿದ್ದ ಕಾಂಗ್ರೆಸ್ ನಾಯಕ ವಿಎಸ್ ಉಗ್ರಪ್ಪ!
ಕಲಾವಿದನಿಗೆ ಯಾವುದೇ ಜಾತಿಯಿಲ್ಲ, ಸುದೀಪ್ ಕೇವಲ ನಟರಷ್ಟೇ ಅಲ್ಲ, ಅವರು ಸಮಾಜದ ಆಸ್ತಿ. ಕೂಡಲೇ ಉಗ್ರಪ್ಪ ಅವರು ಸುದೀಪ್ ಅವರ ಬಳಿ ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಎಸ್ಜಿ ರಾಜುಗೌಡ ಆಗ್ರಹಿಸಿದರು.

ಬೆಂಗಳೂರು: ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಮದಕರಿ ನಾಯಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಬ್ಬರದ ಭಾಷಣ ಮಾಡಿದ್ದ ಮಾಜಿ ಸಂಸದ ವಿಎಸ್ ಉಗ್ರಪ್ಪ ನಟ ಸುದೀಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ನಾಯಕ ಸಮುದಾಯದ ಮಗನಾಗಿದ್ದರೆ ನಮ್ಮ ಸಮುದಾಯದ ಪರ ಧ್ವನಿ ಎತ್ತಿ. ದಮ್ಮು, ತಾಕತ್ ಇದ್ರೆ ನಮ್ಮ ಸಮುದಾಯದ ಮೀಸಲಾತಿ ಹೋರಾಟಕ್ಕೆ ಬನ್ನಿ ಎಂದಿದ್ದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ನಟ ಸುದೀಪ್ ಅವರಿಗೆ ಅಪಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಉಗ್ರಪ್ಪ, ನಟ ಸುದೀಪ್ ಅವರು ನಮ್ಮ ಸಮುದಾಯದ ಹೆಸರಲ್ಲಿ ಗುರುತಿಸಿಕೊಂಡವರು. ನಾಯಕ ಸಮಾಜದ ಜಯಂತಿಯಲ್ಲಿ ಸುದೀಪ್ ಅವರನ್ನು ಮೊದಲು ಪರಿಚಯಿಸಿದ್ದೇ ನಾನು. ನಾನು ವಕೀಲ ಎಲ್ಲರ ಪ್ರಶ್ನೆಗೆ ಉತ್ತರ ಕೊಡಬಲ್ಲೆ. ಗೋಕಾಕ್ ಚಳುವಳಿಗಾಗಿ ಡಾ. ರಾಜಕುಮಾರ್ ಕೂಡ ಬೀದಿಗಿಳಿದು ಹೋರಾಟ ಮಾಡಿದ್ದರು ಎಂದರು.
'ರಾಜೂಗೌಡರೇ ನಿಮಗೂ ಸುದೀಪ್ಗೂ ಈಗಲೂ ಹೇಳುವುದೇನೆಂದರೆ, ಸಮಾಜಕ್ಕಾಗಿ ಹೋರಾಟ ಮಾಡೋಣ, ಸುದೀಪ್ ಅವರೇ ನೀವು ಬನ್ನಿ ನಿಮ್ಮ ನಾಯಕತ್ವದಲ್ಲೇ ಹೋರಾಡೋಣ. ಫೇವರಿಸಂ ಬೆಳೆಸೋ ಹೇಳಿಕೆ ಒಳ್ಳೇದಲ್ಲ. ಸಮಾಜದ ಬೆಂಬಲಕ್ಕೆ ನೀವು ನಿಲ್ಲಬೇಕು. ಸಮಾಜ ನಿಮ್ಮ ಬೆಂಬಲಕ್ಕೆ ಬಂದಿದ್ದು ನೆನಪಿದೆಯಲ್ಲ. ನಾನು ಇದುವರೆಗೂ ಯಾರಿಗೂ ಅಗೌರವ ತೋರಿಲ್ಲ. ಅಗೌರವವಾಗುವಂತೆ ನಡೆದುಕೊಂಡೂ ಇಲ್ಲ. ಬದುಕಿನ ಪ್ರಶ್ನೆ ಬಂದಾಗ ಪ್ರತಿಷ್ಠೆ ಬಿಟ್ಟು ಹೋರಾಟಕ್ಕೆ ಬನ್ನಿ, ನಮ್ಮ ಆಕ್ರೋಶ ಎಲ್ಲರಿಗೂ ಗೊತ್ತಾಗಬೇಕು ಎಂದು ಹೇಳಿದರು.
SC/ST ಮೀಸಲಾತಿ ಹೆಚ್ಚಳಕ್ಕೆ ತಡೆ ನೀಡಿರುವ ಹೈಕೋರ್ಟ್ ನಿರ್ಧಾರ ಈ ಸಮಾಜಗಳ ಪಾಲಿಗೆ ದೊಡ್ಡ ಹೊಡೆತ. ಸಂವಿಧಾನದ ಆಶಯಗಳಿಗೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ತೀರ್ಪು ಇದಾಗಿದೆ. ಮೀಸಲಾತಿ ಹೆಚ್ಚಳಕ್ಕೆ ಅವಕಾಶ ಇದೆ ಎಂದು ಜಸ್ಟೀಸ್ ನಾಗಮೋಹನ್ ದಾಸ್, ಸುಭಾಷ್ ಆದಿ ಅವರಿದ್ದ ಸಮಿತಿ ನೀಡಿದ್ದ ವರದಿಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವೀಕರಿಸಿದ್ದರು. ತಮಿಳುನಾಡಿನಲ್ಲಿ ಶೇ 69ರಷ್ಟು ಮೀಸಲಾತಿ ಸೇರ್ಪಡೆ ಮಾಡಿದಂತೆ ನಮ್ಮ ಮೀಸಲಾತಿ ಸೇರ್ಪಡೆಗೂ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ ಮಾಡಿ ಶೆಡ್ಯೂಲ್ ಒಂಬತ್ತಕ್ಕೆ ಸೇರ್ಪಡೆ ಮಾಡಬೇಕಿತ್ತು. ಕೇಂದ್ರ ಸರ್ಕಾರದವರು ಇದನ್ನ ಇನ್ನೂ ಮಾನ್ಯ ಮಾಡದೇ ಇರುವುದು ಸರಿಯಲ್ಲ. ಕೇವಲ ಮತ ರಾಜಕಾರಣಕ್ಕಾಗಿ ಇದನ್ನು ಇನ್ನೂ ಹಾಗೆ ಇಟ್ಟುಕೊಂಡಿದೆ. ಈಗಲೂ ಕಾಲ ಮಿಂಚಿಲ್ಲ, ಬಿಜೆಪಿಗರೇ ಪ್ರಧಾನಿ ಮೇಲೆ ಒತ್ತಡ ತಂದು ಮೀಸಲಾತಿಗೆ ಕಾನೂನಿನ ಮಾನ್ಯತೆ ಕೊಡಿಸಿ. ಎಸ್ಸಿ, ಎಸ್ಟಿ ನಿಯೋಗದೊಂದಿಗೆ ನಾವೇ ಪ್ರಧಾನಿ ಬಳಿ ಮನವಿ ಮಾಡುತ್ತೇವೆ. ಸಿಎಂ ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಉಗ್ರಪ್ಪ ವಿರುದ್ಧ ಮಾಜಿ ಸಚಿವ ಎಸ್ಜಿ ರಾಜುಗೌಡ ಕಿಡಿ
ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಚಿವ ಎಸ್ಜಿ ರಾಜುಗೌಡ, 'ಉಗ್ರಪ್ಪ ಅವರೇ, ನಿಮ್ಮ ವಯಸ್ಸಿಗೆ ತಕ್ಕಂತೆ ಮಾತನಾಡಿ. ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ' ಎಂದು ಕಟುವಾಗಿ ತರಾಟೆಗೆ ತೆಗೆದುಕೊಂಡರು.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೋಡೆಕಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಗಾಡ್ ಫಾದರ್ ಇಲ್ಲದೆ, ಕೇವಲ ತನ್ನ ಪರಿಶ್ರಮದಿಂದ 33 ವರ್ಷ ಚಿತ್ರರಂಗದಲ್ಲಿ ಬೆಳೆದು ನಿಂತಿರುವ ದೊಡ್ಡ ಕಲಾವಿದ ಸುದೀಪ್. ಅವರನ್ನು ಏಕವಚನದಲ್ಲಿ ನಿಂದಿಸುವುದು ಸರಿಯಲ್ಲ. ಮದಕರಿ ನಾಯಕ ಜಯಂತಿಗೆ ಸುದೀಪ್ ಬಂದಿದ್ದು ತಪ್ಪಾ? ಜನ ಸುದೀಪ್-ಸುದೀಪ್ ಅಂತ ಕೇಕೆ ಹಾಕಿದರೆ ನಿಮಗೆ ಏಕೆ ಹೊಟ್ಟೆ ಉರಿಯುತ್ತದೆ?. ಕಲಾವಿದನಿಗೆ ಯಾವುದೇ ಜಾತಿಯಿಲ್ಲ, ಸುದೀಪ್ ಕೇವಲ ನಟರಷ್ಟೇ ಅಲ್ಲ, ಅವರು ಸಮಾಜದ ಆಸ್ತಿ. ಕೂಡಲೇ ಉಗ್ರಪ್ಪ ಅವರು ಸುದೀಪ್ ಅವರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



