ರಾಜ್ಯ

ಬೆಂಗಳೂರಿನಲ್ಲಿ SIR ಪ್ರತಿಭಟನೆ ವೇಳೆ ಪೊಲೀಸ್ ಕ್ರಮ: ಮರು ಪರಿಶೀಲನೆಗೆ ಪ್ರಿಯಾಂಕ್ ಖರ್ಗೆ ಆದೇಶ!

ಪೊಲೀಸರು ತಮ್ಮನ್ನು ಹಾಗೂ ಪತ್ರಿಕಾ ಛಾಯಾಗ್ರಾಹಕರನ್ನು ದುರ್ವರ್ತನೆಯಿಂದ ನಡೆಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.

ಬೆಂಗಳೂರಿನಲ್ಲಿ SIR ಪ್ರತಿಭಟನೆ ವೇಳೆ ಪೊಲೀಸ್ ಕ್ರಮ: ಮರು ಪರಿಶೀಲನೆಗೆ ಪ್ರಿಯಾಂಕ್ ಖರ್ಗೆ ಆದೇಶ!
ಪ್ರಿಯಾಂಕ್ ಖರ್ಗೆ
Published On :

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ SIR ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಕೈಗೊಂಡ ಕ್ರಮಗಳ ಕುರಿತು ಮರು ಪರಿಶೀಲಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಆದೇಶಿಸಿದ್ದಾರೆ. ಅಲ್ಲದೆ, ಶಾಂತಿಯುತ ಪ್ರತಿಭಟನೆಗಳಿಗೆ ಅಡ್ಡಿಪಡಿಸದಂತೆ ಪೊಲೀಸ್ ಪಡೆಗೆ ಸೂಚನೆ ನೀಡಿದ್ದಾರೆ.

'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ರಾಜೀನಾಮೆಗೆ ಆಗ್ರಹಿಸಿ, ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯತ್ತ ಮೆರವಣಿಗೆ ನಡೆಸಲು ಯತ್ನಿಸಿದ ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಮರುದಿನವೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಪೊಲೀಸರು ತಮ್ಮನ್ನು ಹಾಗೂ ಪತ್ರಿಕಾ ಛಾಯಾಗ್ರಾಹಕರನ್ನು ದುರ್ವರ್ತನೆಯಿಂದ ನಡೆಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಶಾಂತಿಯುತ ಪ್ರತಿಭಟನೆಯ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿದ್ದು, ಅದನ್ನು ದಮನಿಸುವ ಬದಲು ಗೌರವಿಸಬೇಕು ಮತ್ತು ರಕ್ಷಿಸಬೇಕು ಎಂದು ಹೇಳಿದ್ದಾರೆ.

ನಿನ್ನೆ ಬೆಂಗಳೂರು ಪೊಲೀಸರು ಪ್ರತಿಭಟನಾಕಾರರನ್ನು ನಿರ್ವಹಿಸಿದ ರೀತಿಯ ಬಗ್ಗೆ ಮರು ಪರಿಶೀಲನೆ ನಡೆಸಲಾಗುವುದು, ಯಾವುದೇ ಶಾಂತಿಯುತ ಪ್ರತಿಭಟನೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ತಮ್ಮ ಸುರಕ್ಷತೆ ಹಾಗೂ ಇತರರ ಹಕ್ಕುಗಳ ರಕ್ಷಣೆಗಾಗಿ ಪೊಲೀಸರೊಂದಿಗೆ ಸಹಕರಿಸುವಂತೆ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಚಿವರು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ. ನಿಮ್ಮ ಹಕ್ಕುಗಳನ್ನು ರಕ್ಷಿಸುವುದೇ ಪೊಲೀಸರ ಕೆಲಸವೇ ಹೊರತು, ನಿಮ್ಮ ಧ್ವನಿಗೆ ಅಡ್ಡಿಯಾಗುವುದಲ್ಲ ಎಂದು ಅವರು ಹೇಳಿದ್ದಾರೆ.

ಕೇವಲ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಮಾತ್ರವಲ್ಲದೆ, ಪ್ರತಿಯೊಬ್ಬ ನಾಗರಿಕನು ಮುಕ್ತವಾಗಿ, ಶಾಂತಿಯುತವಾಗಿ ಮತ್ತು ಭಯವಿಲ್ಲದೆ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಬಲ್ಲ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಜವಾಬ್ದಾರಿ ಎಂದು ಸಚಿವರು ತಿಳಿಸಿದ್ದಾರೆ.

ಶಾಂತಿಯುತ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಪ್ರಜಾಸತ್ತಾತ್ಮಕ ಹಕ್ಕೇ ಹೊರತು ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆಯಲ್ಲ ಮತ್ತು ಅದನ್ನು ರಕ್ಷಿಸುವುದು ಪೊಲೀಸರ ಕರ್ತವ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.