ರಾಜ್ಯ

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ವಾಹನಗಳು ಜಂಕ್ಷನ್‌ ಅನ್ನು ತಪ್ಪಿಸಿ ಸುರಂಗದ ಮೂಲಕ ಸಂಚರಿಸಿದರೂ, ಕೇವಲ 2 ಕಿ.ಮೀ. ಮುಂದಕ್ಕೆ ಅದೇ ರಸ್ತೆಗೆ ಮರಳಬೇಕಾಗುತ್ತದೆ. ಇಂತಹ ಯೋಜನೆಯ ಅಗತ್ಯವೇನು..?

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ
ತೇಜಸ್ವಿ ಸೂರ್ಯ, ಡಿಕೆ ಶಿವಕುಮಾರ್
Published On :

ಬೆಂಗಳೂರು: ಪ್ರಸ್ತಾವಿತ 2 ಕಿ.ಮೀ ಉದ್ದದ ಹೆಬ್ಬಾಳ ಶಾರ್ಟ್ ಟನಲ್ ಯೋಜನೆಯನ್ನು ಅವೈಜ್ಞಾನಿಕ ಎಂದು ಟೀಕಿಸಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು, ಯೋಜನೆಯಿಂದ 1,350 ಕೋಟಿ ರೂ. ವ್ಯರ್ಥವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಯೋಜನೆ ಕುರಿತು ಪ್ರತಿಕ್ರಿಯಿಸಿರುವ ಅವರು, ಈ ಯೋಜನೆಗಾಗಿ 1,128 ಮರಗಳನ್ನು ಕಡಿಯಬೇಕಾಗುತ್ತದೆ. ಹೆಬ್ಬಾಳ ಕೆರೆಯಲ್ಲಿ ಪ್ರವಾಹದ ಅಪಾಯ ಹೆಚ್ಚಿಸುವುದರ ಜೊತೆಗೆ ಅಂತರ್ಜಲದ ಮೇಲೂ ಪರಿಣಾಮ ಬೀರಬಹುದು ಎಂದು ಆರೋಪಿಸಿದ್ದಾರೆ.

ವಾಹನಗಳು ಜಂಕ್ಷನ್‌ ಅನ್ನು ತಪ್ಪಿಸಿ ಸುರಂಗದ ಮೂಲಕ ಸಂಚರಿಸಿದರೂ, ಕೇವಲ 2 ಕಿ.ಮೀ. ಮುಂದಕ್ಕೆ ಅದೇ ರಸ್ತೆಗೆ ಮರಳಬೇಕಾಗುತ್ತದೆ. ಇಂತಹ ಯೋಜನೆಯ ಅಗತ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.

ಸಂಚಾರ ದಟ್ಟಣೆ ನಿವಾರಿಸಲು ರಾಜ್ಯ ಸರ್ಕಾರ ಮೇಲ್ಸೇತುವೆ ಕಾರಿಡಾರ್ ನಿರ್ಮಾಣಕ್ಕೂ ಮುಂದಾಗಿದೆ. ಆದರೆ, ಸುರಂಗ ಯೋಜನೆಯಿಂದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಹೆಬ್ಬಾಳದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದು, ಯೋಜನೆಯನ್ನು ಕೈಬಿಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಒತ್ತಾಯಿಸಿದ್ದಾರೆ.

ಇದೇ ವೇಳೆ ನಿರ್ಮಾಣ ಹಂತದಲ್ಲಿರುವ ನೀಲಿ ಮಾರ್ಗದ ಮೆಟ್ರೋ, ಯೋಜಿತ ಕೆಂಪು ಮತ್ತು ಕಿತ್ತಳೆ ಮಾರ್ಗಗಳು ಹಾಗೂ ಉಪನಗರ ರೈಲು ಸಂಪರ್ಕವನ್ನು ಅವರು ಉಲ್ಲೇಖಿಸಿದ್ದಾರೆ.

ಕೆಂಪು ಮಾರ್ಗದಲ್ಲಿ ಪ್ರಸ್ತಾಪಿಸಲಾಗಿದ್ದ ಪಶುವೈದ್ಯಕೀಯ ಕಾಲೇಜು ಮೆಟ್ರೋ ನಿಲ್ದಾಣವನ್ನು ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ನಿಲ್ದಾಣದಿಂದ ಪ್ರತಿದಿನ 18,000ಕ್ಕೂ ಹೆಚ್ಚು ಪ್ರಯಾಣಿಕರಿಗೆ ಅನುಕೂಲವಾಗಬಹುದಿತ್ತು. ಆದರೆ, ಸುರಂಗ ಮತ್ತು ಮೇಲ್ಸೇತುವೆ ಯೋಜನೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ನಿಲ್ದಾಣವನ್ನು ಕೈಬಿಡಲಾಗಿದೆ ಎಂದು ಅವರು ದೂರಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ರಾಜ್ಯ ಹಣಕಾಸು ಇಲಾಖೆಯ ಮೌಲ್ಯಮಾಪನಗಳನ್ನು ಉಲ್ಲೇಖಿಸಿದ ಸಂಸದರು, ಮೆಟ್ರೋಗೆ ಹೋಲಿಸಿದರೆ ಸುರಂಗ ಯೋಜನೆಯಲ್ಲಿ ಪ್ರತಿ ಪ್ರಯಾಣಿಕರಿಗೆ ತಗಲುವ ವೆಚ್ಚ ಆರು ಪಟ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಯೋಜನೆಯ ವೆಚ್ಚ, ವಿನ್ಯಾಸ ಮತ್ತು ಸಂಚಾರ ದಟ್ಟಣೆಯ ಸಂಭಾವ್ಯ ಸಮಸ್ಯೆಗಳ ಬಗ್ಗೆಯೂ ಹಣಕಾಸು ಇಲಾಖೆ ಕಳವಳ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ನಗರವು ವಿಸ್ತಾರವಾದ ಮತ್ತು ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ ಜಾಲವನ್ನು ತ್ವರಿತವಾಗಿ ನಿರ್ಮಿಸುವತ್ತ ಗಮನಹರಿಸಬೇಕು. ಹೆಬ್ಬಾಳ ಸುರಂಗ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.