2029 ರ ಡ್ರಗ್ಸ್ ಮುಕ್ತ ಕರ್ನಾಟಕ ಕನಸಿಗೆ ಹಿನ್ನಡೆ: ಸಿಬ್ಬಂದಿಯೂ ಇಲ್ಲ, FIR ದಾಖಲಿಸುವ ಅಧಿಕಾರವೂ ಇಲ್ಲ; ಹಲ್ಲು ಕಿತ್ತ ಹಾವಿನಂತಾದ ಎಎನ್‌ಟಿಎಫ್..!
2029ರ ವೇಳೆಗೆ ಕರ್ನಾಟಕವನ್ನು ಮಾದಕವಸ್ತು ಮುಕ್ತ ರಾಜ್ಯವನ್ನಾಗಿಸುವ ಗುರಿಯನ್ನು ಸರ್ಕಾರ ಘೋಷಿಸಿದೆ. ಇತ್ತೀಚೆಗೆ ‘ಬೇಡ ಬ್ರೋ’ ಮತ್ತು ‘ರೈಸ್’ ಅಭಿಯಾನಗಳನ್ನೂ ಆರಂಭಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಮಾದಕ ದ್ರವ್ಯ ಜಾಲವನ್ನು ಮಟ್ಟಹಾಕಲು ಸ್ಥಾಪಿಸಲಾದ ಮಾದಕ ದ್ರವ್ಯ ನಿರೋಧಕ ಕಾರ್ಯಪಡೆ (ANTF) ಪ್ರಸ್ತುತ ತೀವ್ರ ಸಂಪನ್ಮೂಲ ಮತ್ತು ಅಧಿಕಾರದ ಕೊರತೆಯಿಂದಾಗಿ ಕೇವಲ ಕಾಗದದ ಮೇಲಷ್ಟೇ ಉಳಿದಿದೆ.
ಮಂಜೂರಾದ 55 ಹುದ್ದೆಗಳ ಪೈಕಿ ಈ ಪಡೆ ಕೇವಲ 10 ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದು, ಡ್ರಗ್ಸ್ ಪ್ರಕರಣ ದಾಖಲಿಸಲು ಮತ್ತು ಮಾದಕವಸ್ತು ಅಪರಾಧಗಳ ತನಿಖೆ ನಡೆಸಲು ಸ್ವತಂತ್ರ ಪೊಲೀಸ್ ಠಾಣೆಯೂ ಇಲ್ಲವಾಗಿದೆ.
2029ರ ವೇಳೆಗೆ ಕರ್ನಾಟಕವನ್ನು ಮಾದಕವಸ್ತು ಮುಕ್ತ ರಾಜ್ಯವನ್ನಾಗಿಸುವ ಗುರಿಯನ್ನು ಸರ್ಕಾರ ಘೋಷಿಸಿದೆ. ಇತ್ತೀಚೆಗೆ ‘ಬೇಡ ಬ್ರೋ’ ಮತ್ತು ‘ರೈಸ್’ ಅಭಿಯಾನಗಳನ್ನೂ ಆರಂಭಿಸಿದೆ.
ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಮಾದರಿಯಲ್ಲಿ ರಾಜ್ಯಾದ್ಯಂತ ಮಾದಕವಸ್ತು ಕಳ್ಳಸಾಗಣೆ, ವಿತರಣೆ, ಉತ್ಪಾದನೆ ಹಾಗೂ ಮಾದಕವಸ್ತುಗಳ ದುರ್ಬಳಕೆಯನ್ನು ತಡೆಯಲು ವಿಶೇಷ ಕಾರ್ಯಪಡೆಯಾಗಿ ಎಎನ್‌ಟಿಎಫ್ ಅನ್ನು 2025ರ ಆಗಸ್ಟ್‌ನಲ್ಲಿ ಸ್ಥಾಪಿಸಲಾಯಿತು.
ಜಿಲ್ಲೆಗಳು, ಇತರ ರಾಜ್ಯಗಳು ಮತ್ತು ಕೇಂದ್ರ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಿ ಮಾದಕವಸ್ತು ಜಾಲಗಳನ್ನು ಭೇದಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಸಿಬ್ಬಂದಿ ಕೊರತೆ ಮತ್ತು ಪೊಲೀಸ್ ಠಾಣೆಯ ಅಧಿಕಾರ ಇಲ್ಲದಿರುವುದು ಕಾರ್ಯಪಡೆಯ ಸ್ವತಂತ್ರ ಕಾರ್ಯಾಚರಣೆಗೆ ಅಡ್ಡಿಯಾಗಿವೆ ಎಂದು ಮೂಲಗಳು ತಿಳಿಸಿವೆ.
ಮಾದಕವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯ (ಎನ್‌ಡಿಪಿಎಸ್) ಅಡಿಯಲ್ಲಿ ಸ್ವತಂತ್ರವಾಗಿ ಎಫ್‌ಐಆರ್ ದಾಖಲಿಸಲು ಹಾಗೂ ತನಿಖಾ ಅಧಿಕಾರಗಳನ್ನು ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ಎರಡು ತಿಂಗಳೊಳಗೆ ಎಎನ್‌ಟಿಎಫ್‌ಗೆ ಪೊಲೀಸ್ ಠಾಣೆಯ ಅಧಿಕಾರ ನೀಡಲು ಗೃಹ ಇಲಾಖೆ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಸರ್ಕಾರ ಮತ್ತು ಪೊಲೀಸರು ಮಾದಕವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ, ಅವುಗಳ ಪೂರೈಕೆ ಇನ್ನೂ ಆತಂಕದ ವಿಷಯವಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಅನಾಮಧೇಯವಾಗಿ ತಿಳಿಸಿದ್ದಾರೆ.
ಗುಪ್ತಚರ ಮಾಹಿತಿ ವಿಶ್ಲೇಷಣೆ ಮತ್ತು ತಾಂತ್ರಿಕ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿರುವ ಸಿಬ್ಬಂದಿಯನ್ನು ನೇಮಿಸುವ ಮೂಲಕ ಎಎನ್‌ಟಿಎಫ್ ಅನ್ನು ಬಲಪಡಿಸಬೇಕು. ಕಾರ್ಯಾಚರಣೆಗೆ ಅಗತ್ಯವಾದ ಸಾರಿಗೆ, ಉಪಕರಣಗಳು ಸೇರಿದಂತೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಇದರಿಂದ ಕಾರ್ಯಪಡೆಯು ಅಡೆತಡೆಗಳಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



