ರಾಜ್ಯ

ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಶೇ.7.5ರಷ್ಟು ಒಳಮೀಸಲಾತಿ ಘೋಷಣೆ..!

‘ಕರ್ನಾಟಕದ ಸರ್ಕಾರಿ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ (ತಿದ್ದುಪಡಿ) ನಿಯಮಗಳು, 2026’ ಎಂಬ ಕರಡು ಅಧಿಸೂಚನೆಯನ್ನು ಸೆಪ್ಟೆಂಬರ್ 17ರಂದು ಹೊರಡಿಸಲಾಗಿತ್ತು.

ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಶೇ.7.5ರಷ್ಟು ಒಳಮೀಸಲಾತಿ ಘೋಷಣೆ..!
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರ್ಕಾರವು ಭರ್ಜರಿ ಉಡುಗೊರೆಯೊಂದನ್ನು ನೀಡಿದೆ.

ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇಕಡಾ 7.5 ರಷ್ಟು ಒಳಮೀಸಲಾತಿ ಕಲ್ಪಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಘೋಷಿಸಿದ್ದಾರೆ.

‘ಕರ್ನಾಟಕದ ಸರ್ಕಾರಿ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ (ತಿದ್ದುಪಡಿ) ನಿಯಮಗಳು, 2026’ ಎಂಬ ಕರಡು ಅಧಿಸೂಚನೆಯನ್ನು ಸೆಪ್ಟೆಂಬರ್ 17ರಂದು ಹೊರಡಿಸಲಾಗಿತ್ತು.

ಈ ಕುರಿತು ಸ್ವೀಕರಿಸಿದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಪರಿಶೀಲಿಸಿದ ಬಳಿಕ ರಾಜ್ಯ ಸರ್ಕಾರ ಅಕ್ಟೋಬರ್ 8ರಂದು ಅಂತಿಮ ಅಧಿಸೂಚನೆ ಪ್ರಕಟಿಸಿದೆ.

ಉನ್ನತ ಶಿಕ್ಷಣ ಇಲಾಖೆಯು ಈ ಅಧಿಸೂಚನೆಯನ್ನು ಹೊರಡಿಸಿದ್ದು, ಈಗಿರುವ ಶೇ.15ರಷ್ಟು ಗ್ರಾಮೀಣ ಮೀಸಲಾತಿಯೊಳಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ಒಳಮೀಸಲಾತಿ ನೀಡಲಾಗುತ್ತದೆ. ಈ ಕ್ರಮವು ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಲಿದೆ ಎಂದುತಿಳಿಸಿದ್ದಾರೆ.

ಈ ಕ್ರಮವು ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ಅವರ ಕನಸನ್ನು ನನಸಾಗಿಸಿದೆ ಎಂದು ಸಚಿವರು ಹೇಳಿದರು.

ಗ್ರಾಮೀಣ ಯುವಕರು ಸರ್ಕಾರಿ ಉದ್ಯೋಗಗಳನ್ನು ಪಡೆದು ಆಡಳಿತ ವ್ಯವಸ್ಥೆಯ ಭಾಗವಾಗಬೇಕು ಎಂಬ ಉದ್ದೇಶದಿಂದ ತಮ್ಮ ಅಧಿಕಾರಾವಧಿಯಲ್ಲಿ ಅವರು ಗ್ರಾಮೀಣ ಅಭ್ಯರ್ಥಿಗಳಿಗೆ ‘ಗ್ರಾಮೀಣ ಗ್ರೇಸ್ ಅಂಕ’ಗಳನ್ನು ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು.

ಬಳಿಕ ಗ್ರಾಮೀಣ ಅಭ್ಯರ್ಥಿಗಳಿಗೆ ಗ್ರೇಸ್ ಅಂಕಗಳ ಬದಲಾಗಿ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಇದೀಗ ಈ ಮೀಸಲಾತಿ ವ್ಯವಸ್ಥೆಯನ್ನು ಶಿಕ್ಷಣ ಕ್ಷೇತ್ರಕ್ಕೂ ವಿಸ್ತರಿಸಲಾಗುತ್ತಿದೆ” ಎಂದು ಮಧು ಬಂಗಾರಪ್ಪ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.