ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ದುರಂತಕ್ಕೆ GBA ನಿರ್ಲಕ್ಷ್ಯವೇ ಕಾರಣ: ತನಿಖಾ ವರದಿ
ಭಾರತೀಯ ಕಟ್ಟಡ ನಿಯಮಾವಳಿಗಳ (Indian Building Code) ಪ್ರಕಾರ, ಕಾಂಪೌಂಡ್ ಗೋಡೆಯ ಎತ್ತರ 1.5 ರಿಂದ 2.4 ಮೀಟರ್ ಇರಬೇಕು. ಆದರೆ, ಬೌರಿಂಗ್ ಆಸ್ಪತ್ರೆಯ ಗೋಡೆಯು 2.8 ಮೀಟರ್ ಎತ್ತರವಿತ್ತು.

ಬೆಂಗಳೂರು: ಕಳೆದ ಏಪ್ರಿಲ್ 29 ರಂದು ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಜನರು ಬಲಿಯಾದ ದಾರುಣ ಘಟನೆಗೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತು ಅಂದಿನ ಬಿಬಿಎಂಪಿ (BBMP) ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂದು ತನಿಖಾ ವರದಿ ಬೆಟ್ಟು ಮಾಡಿದೆ.
ಜಿಬಿಎ ಅಧಿಕಾರಿಗಳು ಪಾದಚಾರಿ ಮಾರ್ಗ ಒತ್ತುವರಿಯನ್ನು ತೆರವುಗೊಳಿಸಿದ್ದರೆ ಹಾಗೂ ಬಿಬಿಎಂಪಿ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆಯನ್ನು ದುರಸ್ತಿ ಮಾಡಿದ್ದರೆ ಈ ಭೀಕರ ದುರಂತವನ್ನು ತಪ್ಪಿಸಬಹುದಿತ್ತು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ (SP) ನೇತೃತ್ವದ ತನಿಖಾ ತಂಡವು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರಿಗೆ ವರದಿ ಸಲ್ಲಿಸಿದೆ.
ಗುರುವಾರ ನಡೆದ ಲೋಕಾಯುಕ್ತ ವಿಚಾರಣೆಯ ಸಂದರ್ಭದಲ್ಲಿ ಈ ವರದಿಯನ್ನು ಮಂಡಿಸಲಾಗಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ತನಿಖಾ ವರದಿಯಲ್ಲಿ ದುರಂತಕ್ಕೆ ಕಾರಣವಾದ ಹಲವು ತಾಂತ್ರಿಕ ಲೋಪಗಳು ಮತ್ತು ಅಧಿಕಾರಿಗಳ ಅಕ್ಷಮ್ಯ ನಿರ್ಲಕ್ಷ್ಯವನ್ನು ಬಹಿರಂಗಪಡಿಸಲಾಗಿದೆ:
ಭಾರತೀಯ ಕಟ್ಟಡ ನಿಯಮಾವಳಿಗಳ (Indian Building Code) ಪ್ರಕಾರ, ಕಾಂಪೌಂಡ್ ಗೋಡೆಯ ಎತ್ತರ 1.5 ರಿಂದ 2.4 ಮೀಟರ್ ಇರಬೇಕು. ಆದರೆ, ಬೌರಿಂಗ್ ಆಸ್ಪತ್ರೆಯ ಗೋಡೆಯು 2.8 ಮೀಟರ್ ಎತ್ತರವಿತ್ತು. ಅಲ್ಲದೆ, ಮಳೆನೀರು ಸರಾಗವಾಗಿ ಹರಿದು ಹೋಗಲು ಯಾವುದೇ ರಂಧ್ರಗಳಾಗಲಿ (weep holes) ಅಥವಾ ಗೋಡೆಗೆ ಭದ್ರತೆ ನೀಡುವ ತಾಂತ್ರಿಕ ರಚನೆಯಾಗಲಿ ಇರಲಿಲ್ಲ.
2008-09ರ ಅವಧಿಯಲ್ಲಿ ಲಾರಿಯೊಂದು ಡಿಕ್ಕಿ ಹೊಡೆದಾಗ ಈ ಕಾಂಪೌಂಡ್ ಗೋಡೆ ಜಖಂಗೊಂಡಿತ್ತು. ಅಷ್ಟೇ ಅಲ್ಲದೆ, 2018-19ರಲ್ಲಿ ಕಟ್ಟಡ ಅವಶೇಷಗಳ ತ್ಯಾಜ್ಯವನ್ನು (Construction Debris) ಅದೇ ಗೋಡೆಯ ಬಳಿ ಸುರಿಯಲಾಗಿತ್ತು. ಆದರೂ ಇದನ್ನು ದುರಸ್ತಿ ಮಾಡುವ ಗೋಜಿಗೆ ಯಾರೂ ಹೋಗಿರಲಿಲ್ಲ ಎಂದು ತಿಳಿಸಲಾಗಿದೆ.
ಸಂಬಂಧಪಟ್ಟ ಸಂಸ್ಥೆಯಲ್ಲಿ ಖಾಯಂ ಸಿವಿಲ್ ಇಂಜಿನಿಯರ್‌ಗಳ ನೇಮಕಾತಿಯೇ ಆಗಿಲ್ಲ. 2024ರಲ್ಲಿ ಗುತ್ತಿಗೆ ಆಧಾರದ ಮೇಲೆ ಇಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಅನುಮತಿ ಸಿಕ್ಕಿದ್ದರೂ, ಯಾವುದೇ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ ಎಂದು ವರದಿ ಹೇಳಿದೆ.
ಬೀದಿ ಬದಿ ವ್ಯಾಪಾರಿಗಳ ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಂದಿನ ಬಿಬಿಎಂಪಿ ನೀಡಿದ್ದ ಭರವಸೆಯ ಮೇರೆಗೆ ಹೈಕೋರ್ಟ್ 2025ರ ಮಾರ್ಚ್ 3 ರಂದು ಪ್ರಮುಖ ಅರ್ಜಿಗಳನ್ನು ವಿಲೇವಾರಿ ಮಾಡಿತ್ತು.
ಇದರ ಬೆನ್ನಲ್ಲೇ ಜಿಬಿಎ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿತ್ತು, ಆದರೆ, ಅಧಿಕಾರಿಗಳು ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ಪ್ರಸ್ತುತ ಸ್ಥಳೀಯ ಪೊಲೀಸರು ಒತ್ತುವರಿ ಮಾಡಿಕೊಂಡಿದ್ದ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಬಿಎನ್‌ಎಸ್ (BNS) ಸೆಕ್ಷನ್ 285 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ವಿಚಾರಣೆ ವೇಳೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಪ್ರತಿಕ್ರಿಯಿಸಿ, ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರನ ವಿರುದ್ಧ ಈಗಾಗಲೇ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದ್ದು, ನಿರ್ಲಕ್ಷ್ಯ ವಹಿಸಿದ ಇಂಜಿನಿಯರ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರ ಹೇಳಿಕೆಗಳನ್ನು ಪಡೆದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮಾತನಾಡಿ, ಹೈಕೋರ್ಟ್ ಆದೇಶದಂತೆ ಮುಂದಿನ ಒಂದು ತಿಂಗಳೊಳಗೆ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



