ರಾಜ್ಯ

ಕಾಳಿ ಅರಣ್ಯದ ಜೇನು ಈಗ ಅಧಿಕೃತ ಬ್ರ್ಯಾಂಡ್: ಜೋಯಿಡಾ ಬುಡಕಟ್ಟು ಜನರ ಬದುಕಿಗೆ ಹೊಸ ಆಸರೆಯಾಯ್ತು ಅರಣ್ಯ ಇಲಾಖೆಯ ವಿನೂತನ ಹೆಜ್ಜೆ..!

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ದಟ್ಟ ಅರಣ್ಯದ ಒಳಗೆ ತಲೆಮಾರುಗಳಿಂದ ವಾಸಿಸುತ್ತಿರುವ ಸ್ಥಳೀಯ ಬುಡಕಟ್ಟು ಜನರಿಗೆ ಸುಸ್ಥಿರ ಜೀವನೋಪಾಯವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕಾಳಿ ಅರಣ್ಯದ ಜೇನು ಈಗ ಅಧಿಕೃತ ಬ್ರ್ಯಾಂಡ್: ಜೋಯಿಡಾ ಬುಡಕಟ್ಟು ಜನರ ಬದುಕಿಗೆ ಹೊಸ ಆಸರೆಯಾಯ್ತು ಅರಣ್ಯ ಇಲಾಖೆಯ ವಿನೂತನ ಹೆಜ್ಜೆ..!
ಅಡವಿ ಝೇಂಕಾರ ಬ್ರ್ಯಾಂಡ್ ಜೇನುತುಪ್ಪ
Published On :

ಹುಬ್ಬಳ್ಳಿ: ಅರಣ್ಯ ಇಲಾಖೆಯು ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ಸಮುದಾಯಗಳ ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಾಳಿ ಹುಲಿ ಮೀಸಲು ಪ್ರದೇಶದ (Kali Tiger Reserve) ಸಂರಕ್ಷಿತ ಅರಣ್ಯ ವಲಯದಿಂದ ರಾಜ್ಯದ ಮೊಟ್ಟ ಮೊದಲ ಅಧಿಕೃತ ಬ್ರ್ಯಾಂಡೆಡ್ ಜೇನುತುಪ್ಪವನ್ನು ಅರಣ್ಯ ಇಲಾಖೆಯು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ದಟ್ಟ ಅರಣ್ಯದ ಒಳಗೆ ತಲೆಮಾರುಗಳಿಂದ ವಾಸಿಸುತ್ತಿರುವ ಸ್ಥಳೀಯ ಬುಡಕಟ್ಟು ಜನರಿಗೆ ಸುಸ್ಥಿರ ಜೀವನೋಪಾಯವನ್ನು ಒದಗಿಸುವುದು ಈ ವಿಶೇಷ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕಾಡಿನ ಮೇಲಿನ ಅವಲಂಬನೆಯನ್ನು ತಗ್ಗಿಸಿ, ಪರಿಸರಕ್ಕೆ ಪೂರಕವಾದ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜೇನುತುಪ್ಪದ ವ್ಯವಹಾರವನ್ನು ಉತ್ತೇಜಿಸಲು ಅರಣ್ಯ ಇಲಾಖೆ ಈ ವಿನೂತನ ಹೆಜ್ಜೆಯನ್ನು ಇಟ್ಟಿದೆ.

‘ಅಡವಿ ಝೇಂಕಾರ’ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಈ ಬ್ರ್ಯಾಂಡ್ ಮೂಲಕ ಅರಣ್ಯ ನಿವಾಸಿಗಳಿಗೆ ನೇರ ಆದಾಯದ ಅವಕಾಶನ್ನು ಕಲ್ಪಿಸಲಾಗಿದೆ.

ಈ ಯೋಜನೆಯಡಿ ಕಾಳಿ ಟೈಗರ್ ರಿಸರ್ವ್ ವ್ಯಾಪ್ತಿಯ ಅರಣ್ಯ ಗ್ರಾಮಗಳಲ್ಲಿ ವಾಸಿಸುವ 250 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅವರಿಗೆ 350 ಬಾಕ್ಸ್ ಕಾಲೋನಿ ಜೇನುಗೂಡುಗಳನ್ನು ಉಚಿತವಾಗಿ ನೀಡಲಾಗಿದೆ. ಈ ಮೂಲಕ ನೈಸರ್ಗಿಕವಾಗಿ ಹನಿ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ.

ಅರಣ್ಯ ಇಲಾಖೆಯ ಪ್ರಕಾರ, ಈಗಾಗಲೇ ಸುಮಾರು 600 ಕೆಜಿ ಜೇನುತುಪ್ಪ ಉತ್ಪಾದನೆಯಾಗಿದ್ದು, ಸ್ಥಳೀಯ ನಿವಾಸಿಗಳು ತಮ್ಮ ಮನೆಗಳಲ್ಲೇ ಜೇನು ಕೃಷಿ ನಡೆಸುತ್ತಿದ್ದಾರೆ. ಸಂಗ್ರಹಿಸಿದ ಜೇನುತುಪ್ಪವನ್ನು ಅರಣ್ಯ ಇಲಾಖೆ ಖರೀದಿಸಿ, ಗುಣಮಟ್ಟ ಪರಿಶೀಲನೆಯ ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಈ ಜೇನುತುಪ್ಪ ಬ್ರ್ಟಾಂಡ್ ಅನ್ನು ಕಾಳಿ ಟೈಗರ್ ರಿಸರ್ವ್ ಕಚೇರಿ ಹಾಗೂ ಅರಣ್ಯ ಇಲಾಖೆ ಆಯೋಜಿಸುವ ಕಾರ್ಯಕ್ರಮಗಳಲ್ಲಿ 250 ಗ್ರಾಂ ಮತ್ತು 500 ಗ್ರಾಂ ಪ್ಯಾಕ್‌ಗಳಲ್ಲಿ (ಕ್ರಮವಾಗಿ ರೂ.200 ಮತ್ತು ರೂ,400) ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆನ್‌ಲೈನ್ ಹಾಗೂ ಮನೆ ಬಾಗಿಲಿಗೆ ವಿತರಣೆ ಮಾಡುವ ಯೋಜನೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಕಾಳಿ ಟೈಗರ್ ರಿಸರ್ವ್ ಅಧಿಕಾರಿಯೊಬ್ಬರು ಮಾತನಾಡಿ, “ಜೋಯಿಡಾ ತಾಲೂಕಿನ ಅರಣ್ಯ ಭಾಗಗಳಲ್ಲಿ ಜೇನು ಕೃಷಿಗೆ ಅತ್ಯುತ್ತಮ ಪರಿಸರವಿದೆ. ಇಲ್ಲಿ ಹಲವು ಸಣ್ಣ ಗ್ರಾಮಗಳು ಪಾರಂಪರಿಕವಾಗಿ ವಾಸಿಸುತ್ತಿವೆ. ಅರಣ್ಯ ಇಲಾಖೆಯ ಸಹಕಾರದಿಂದ ಅವರಿಗೆ ಆದಾಯದ ಹೊಸ ಮಾರ್ಗ ಸಿಕ್ಕಿದೆ ಎಂದು ಹೇಳಿದ್ದಾರೆ.

ಜೇನು ಸಾಕಣೆ ಅವಧಿಯಲ್ಲಿ ಅರಣ್ಯವಾಸಿಗಳು
ಜೇನು ಸಾಕಣೆ ಅವಧಿಯಲ್ಲಿ ಅರಣ್ಯವಾಸಿಗಳು — TNIE Photo

ಅರಣ್ಯ ಇಲಾಖೆ ಜೇನುಗೂಡುಗಳನ್ನು ಉಚಿತವಾಗಿ ನೀಡುವುದರ ಜೊತೆಗೆ ಉತ್ಪಾದಿತ ಜೇನುತುಪ್ಪವನ್ನು ಖರೀದಿಸುವ ಮೂಲಕ ರೈತರನ್ನು ಪ್ರೋತ್ಸಾಹಿಸುತ್ತಿದೆ. ಗುಣಮಟ್ಟ ಕಾಪಾಡಲು ವಿಶೇಷ ತಂಡವೂ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯನ್ನು ಇತರ ಅರಣ್ಯ ವಿಭಾಗಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ದಟ್ಟ ಅರಣ್ಯ ಪ್ರದೇಶಗಳು ಜೇನು ಉತ್ಪಾದನೆಗೆ ಸೂಕ್ತವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಘಟ್ಟದ ಪ್ರದೇಶಗಳಾದ ದಕ್ಷಿಣ ಕನ್ನಡ, ಕೊಡಗು ಹಾಗೂ ಕೇರಳದ ಕೆಲವು ಭಾಗಗಳು ಈಗಾಗಲೇ ಜೇನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಇಂತಹ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.