ರಾಜ್ಯ

'ಯಾರಿಗಾದ್ರೂ Call ಮಾಡು, ಕಾರು ನಿಲ್ಲಿಸಲ್ಲ': ಕ್ಯಾಬ್ ಚಾಲಕನೊಂದಿಗಿನ ಭಯಾನಕ ಕ್ಷಣ ಬಿಚ್ಟಿಟ್ಟ ಮಹಿಳೆ!

ಏರ್‌ಪೋರ್ಟ್‌ಗೆ ಹೋಗುವ ವೇಳೆ AC ಕ್ಯಾಬ್ ಬುಕ್ಕಿಂಗ್ ಕುರಿತ ಸಣ್ಣ ವಾಗ್ವಾದ ಹೇಗೆ ಭಯಾನಕ ಪರಿಸ್ಥಿತಿಗೆ ತಿರುಗಿತು ಎಂಬುದನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ವಿವರಿಸಿದ್ದಾರೆ.

'ಯಾರಿಗಾದ್ರೂ Call ಮಾಡು, ಕಾರು ನಿಲ್ಲಿಸಲ್ಲ': ಕ್ಯಾಬ್ ಚಾಲಕನೊಂದಿಗಿನ ಭಯಾನಕ ಕ್ಷಣ ಬಿಚ್ಟಿಟ್ಟ ಮಹಿಳೆ!
ಬೆಂಗಳೂರು ಕ್ಯಾಬ್ ಪ್ರಯಾಣದ ಕಹಿ ಅನುಭವ ಬಿಟ್ಟಿಟ್ಟ ಮಹಿಳೆ (ಕಾರು ಸಂಗ್ರಹ ಚಿತ್ರ)
Published On :

ಬೆಂಗಳೂರು: ಬೆಂಗಳೂರಿನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಬಿಹಾರ ಮೂಲದ ಮಹಿಳೆಗೆ ಭಯಾನಕ ಅನುಭವ ಎದುರಾಗಿದ್ದು, ಈ ಕುರಿತ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಹಾಡಹಗಲೇ ತಮಗೆ ಸಂಭವಿಸಿದ ಆತಂಕಕಾರಿ ಕ್ಯಾಬ್ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಏರ್‌ಪೋರ್ಟ್‌ಗೆ ಹೋಗುವ ವೇಳೆ AC ಕ್ಯಾಬ್ ಬುಕ್ಕಿಂಗ್ ಕುರಿತ ಸಣ್ಣ ವಾಗ್ವಾದ ಹೇಗೆ ಭಯಾನಕ ಪರಿಸ್ಥಿತಿಗೆ ತಿರುಗಿತು ಎಂಬುದನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ವಿವರಿಸಿದ್ದಾರೆ.

thebihari.baddie ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ರಿತಿಕಾ ಸೂರ್ಯವಂಶಿ ಎಂಬ ಮಹಿಳೆ ತನಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದು, ಮಹಿಳೆಯ ಪ್ರಕಾರ, ಚಾಲಕ ವಾಹನವನ್ನು ನಿಲ್ಲಿಸಲು ನಿರಾಕರಿಸಿದ್ದರಿಂದ ಅವರು ಕೆಲಕಾಲ ಭಯಭೀತ ಸ್ಥಿತಿಯನ್ನು ಅನುಭವಿಸಿದರು ಎಂದು ಹೇಳಿಕೊಂಡಿದ್ದಾರೆ.

ಅಲ್ಲದೆ ಈ ಘಟನೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡಬೇಡ ಎಂದು ತಂದೆ ಸಲಹೆ ನೀಡಿದ್ದರೂ, ಇತರ ಮಹಿಳೆಯರು ಎಚ್ಚರಿಕೆಯಿಂದಿರಬೇಕು ಎಂಬ ಉದ್ದೇಶದಿಂದ ವಿಡಿಯೋ ಹಂಚಿಕೊಂಡಿರುವುದಾಗಿ ಆಕೆ ವಿಡಿಯೋದಲ್ಲಿ ಹೇಳಿದ್ದಾರೆ.

ಆಗಿದ್ದೇನು?

ಮಹಿಳೆ ಹೇಳುವಂತೆ, ಅವರು ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ತೆರಳಲು Rapido ಮೂಲಕ AC ಕ್ಯಾಬ್ ಬುಕ್ ಮಾಡಿದ್ದರು. ಅಲ್ಲಿಂದ ಅವರು ಪಟ್ನಾಕ್ಕೆ ವಿಮಾನ ಪ್ರಯಾಣ ಕೈಗೊಳ್ಳಬೇಕಿತ್ತು. ಸಾಮಾನ್ಯವಾಗಿ ಕ್ಯಾಬ್‌ಗೆ ಏರುವ ಮೊದಲು ಅದರ “ವೈಬ್” ಅನ್ನು ಗಮನಿಸುತ್ತಾರೆ. ಈ ಬಾರಿ ವಾಹನದ ಗಾಜುಗಳು ಸ್ವಲ್ಪ ಟಿಂಟ್ ಆಗಿದ್ದವು. ಇದರಿಂದ ಅವರಿಗೆ ಅಸಹಜ ಭಾವನೆ ಉಂಟಾದರೂ, ವಿಮಾನ ಹತ್ತಲು ತಡವಾಗುತ್ತಿದ್ದ ಕಾರಣ ಆಕೆ ಬೇರೆ ಮಾರ್ಗವಲ್ಲದೇ ಅದೇ ಕ್ಯಾಬ್‌ಗೆ ಹತ್ತಿದರು.

ಕ್ಯಾಬ್‌ನಲ್ಲಿ ಕುಳಿತ ಕೆಲವೇ ಕ್ಷಣ ಅವರು ಚಾಲಕನಿಗೆ AC ಆನ್ ಮಾಡಲು ಕೇಳಿದರು. ಆದರೆ ಮಹಿಳೆಯ ಪ್ರಕಾರ, ಚಾಲಕ “ನೀವು ನಿಜವಾಗಿಯೂ AC ಕ್ಯಾಬ್ ಬುಕ್ ಮಾಡಿದ್ದೀರಾ?” ಎಂದು ಪ್ರಶ್ನಿಸಿದ್ದಾನೆ. ನಂತರ ಅವರು ಮೊಬೈಲ್ ಆಪ್‌ನಲ್ಲಿ “AC Cab” ಎಂದು ಸ್ಪಷ್ಟವಾಗಿ ತೋರಿಸಿದ್ದಾಗಿ ಹೇಳಿದ್ದಾರೆ.

“ನಿಮ್ಮ AC ಕೆಲಸ ಮಾಡುತ್ತಿದೆಯೋ ಇಲ್ಲವೋ ಅದು ನನ್ನ ಸಮಸ್ಯೆಯಲ್ಲ. ಅದು ನಿಮ್ಮ ಸಮಸ್ಯೆ,” ಎಂದು ಚಾಲಕನಿಗೆ ಹೇಳಿದ್ದಾಗಿ ಮಹಿಳೆ ವಿವರಿಸಿದ್ದಾರೆ. ಇದಾದ ಬಳಿಕ AC ಕೆಲಸ ಮಾಡದಿದ್ದರೆ ರೈಡ್ ರದ್ದು ಮಾಡಿ ಎಂದು ಕೇಳಿದ್ದಾಗಿ ಅವರು ಹೇಳಿದ್ದಾರೆ. ಆದರೆ ಚಾಲಕ ವಾಹನ ನಿಲ್ಲಿಸಲು ನಿರಾಕರಿಸಿದ್ದರಿಂದ ಪರಿಸ್ಥಿತಿ ಗಂಭೀರವಾಯಿತು.

'ಯಾರಿಗಾದ್ರೂ Call ಮಾಡು, ಕಾರು ನಿಲ್ಲಿಸಲ್ಲ' ಎಂದ ಚಾಲಕ?

ಮಹಿಳೆಯ ಪ್ರಕಾರ, ಇದೇ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ಹೆಚ್ಚಾಗಿದ್ದು, ಈ ವೇಳೆ ಚಾಲಕ “ಯಾರಿಗಾದರೂ ಕರೆ ಮಾಡಿ, ಈ ಕ್ಯಾಬ್ ಈಗ ನಿಲ್ಲೋದಿಲ್ಲ” ಎಂದು ಹೇಳಿದ್ದಾನೆ. ಇದರಿಂದ ತಕ್ಷಣವೇ ತಮಗೆ ಅಸುರಕ್ಷಿತ ಭಾವನೆ ಉಂಟಾಯಿತೆಂದು ಅವರು ಹೇಳಿದ್ದಾರೆ.

ಅವರು ಕೂಡಲೇ ಹತ್ತಿರದಲ್ಲಿದ್ದ ಸ್ನೇಹಿತನಿಗೆ ಕರೆ ಮಾಡಿ ತಮ್ಮ ಲೈವ್ ಲೊಕೇಶನ್ ಹಂಚಿಕೊಂಡರು. ಜೊತೆಗೆ ಪೊಲೀಸರಿಗೆ ಕರೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಚಾಲಕ ಮಧ್ಯರಸ್ತೆಯಲ್ಲಿ ವಾಹನ ನಿಲ್ಲಿಸಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ. ಕ್ಯಾಬ್ ನಿಂತ ಕೂಡಲೇ ಅವರು ತಕ್ಷಣ ವಾಹನದಿಂದ ಇಳಿದು ಆಪ್ ಮೂಲಕ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ರೈಡ್ ರದ್ದುಪಡಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಹಾಡಹಗಲೇ ಅಸುರಕ್ಷಿತ ಭಾವನೆ

“ಮಧ್ಯಾಹ್ನ 12 ಗಂಟೆ. ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ನಡೆದರೂ, ಕೆಲ ಕ್ಷಣ ನನಗೆ ಸಂಪೂರ್ಣ ಅಸುರಕ್ಷಿತ ಭಾವನೆ ಉಂಟಾಯಿತು,” ಎಂದು ಮಹಿಳೆ ಹೇಳಿದ್ದಾರೆ. ವಿಡಿಯೋ ಕೊನೆಯಲ್ಲಿ, ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಗಾಬರಿಗೊಳ್ಳದೆ ಮಾನಸಿಕವಾಗಿ ಧೈರ್ಯವಾಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ

ಈ ವಿಡಿಯೋ ವೈರಲ್ ಆದ ಬಳಿಕ ಹಲವರು ಕಾಮೆಂಟ್ ವಿಭಾಗದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಬೆಂಗಳೂರಿನ ಕ್ಯಾಬ್ ಹಾಗೂ ಆಟೋ ಚಾಲಕರೊಂದಿಗೆ ಇದೇ ರೀತಿಯ ಸಮಸ್ಯೆ ಎದುರಿಸಿದ್ದಾಗಿ ಹೇಳಿದ್ದಾರೆ. ಒಬ್ಬ ಬಳಕೆದಾರರು, “ಬೆಂಗಳೂರು ಚಾಲಕರ ವರ್ತನೆ ತುಂಬಾ ಕೆಟ್ಟ ಅನುಭವ ನೀಡುತ್ತದೆ. ಪ್ರಯಾಣಿಕರು ಸುರಕ್ಷಿತವಾಗಿದೆಯೇ ಎಂಬುದನ್ನೇ ಪರಿಗಣಿಸುವುದಿಲ್ಲ,” ಎಂದು ಬರೆದಿದ್ದಾರೆ.

ಮತ್ತೊಬ್ಬರು, “ಇದು ಕೇವಲ ಕ್ಯಾಬ್ ಸಮಸ್ಯೆಯಲ್ಲ, ಆಟೋಗಳಲ್ಲೂ ಇದೇ ರೀತಿಯ ಸಮಸ್ಯೆಗಳು ಹೆಚ್ಚುತ್ತಿವೆ. ಕಾನೂನು ಕ್ರಮ ಕಠಿಣವಾಗಬೇಕು,” ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, “ನನಗೆ ಇಂತಹ ಅನುಭವಗಳು ಹೆಚ್ಚಾಗಿ Rapido ಚಾಲಕರೊಂದಿಗೆ ಮಾತ್ರ ಎದುರಾಗಿದೆ,” ಎಂದು ಪ್ರತಿಕ್ರಿಯಿಸಿದ್ದಾರೆ.

“ಬೆಂಗಳೂರುದ ಬಹುತೇಕ ಕ್ಯಾಬ್‌ಗಳಲ್ಲಿ AC ಮತ್ತು ಸ್ವಚ್ಛತೆ ಎರಡೂ ದೊಡ್ಡ ಸಮಸ್ಯೆಯಾಗಿದೆ,” ಎಂದು ಮತ್ತೊಬ್ಬರು ಹೇಳಿದ್ದು, ಇನ್ನೊಬ್ಬರು, “ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ವಿಶ್ವಾಸದಿಂದಲೇ ಕೆಲ ಚಾಲಕರು ಇಂತಹ ಧೈರ್ಯ ತೋರಿಸುತ್ತಿದ್ದಾರೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.