ನಾವೆಲ್ಲರೂ ಕಮಲದ ಆಶ್ರಯದಲ್ಲಿದ್ದೇವೆ, ದೇಶವನ್ನು ಎತ್ತರಕ್ಕೆ ಕೊಂಡೊಯ್ಯೋಣ: ಪ್ರಧಾನಿ ಮೋದಿ
ಸೇವಾ ಭಾವದಿಂದ ಕೆಲಸ ಮಾಡಿದರೆ ಪ್ರತೀ ಕೆಲಸವೂ ಯಶಸ್ವಿಯಾಗುತ್ತದೆ. ನಾವೆಲ್ಲರೂ ಕಮಲದ ಆಶ್ರಯದಲ್ಲಿದ್ದೇವೆ. ನಮ್ಮ ಜೊತೆ ಗುರುದೇವ್ ಅವರ ಆಶೀರ್ವಾದವಿದೆ. ಕಮಲದ ಆಶ್ರಯಜಲ್ಲಿ ದೇಶವನ್ನು ಎತ್ತರಕ್ಕೆ ಕೊಂಡೊಯ್ಯೋಣ.

ಬೆಂಗಳೂರು: ಸೇವಾ ಭಾವದಿಂದ ಕೆಲಸ ಮಾಡಿದರೆ ಪ್ರತೀ ಕೆಲಸವೂ ಯಶಸ್ವಿಯಾಗುತ್ತದೆ. ನಾವೆಲ್ಲರೂ ಕಮಲದ ಆಶ್ರಯದಲ್ಲಿದ್ದೇವೆ. ಕಮಲದ ಆಶ್ರಯಜಲ್ಲಿ ದೇಶವನ್ನು ಎತ್ತರಕ್ಕೆ ಕೊಂಡೊಯ್ಯೋಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದರು.
ನಗರದ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಆವರಣದಲ್ಲಿ ಭಾನುವಾರ ನಡೆದ ‘ಧ್ಯಾನ ಮಂದಿರ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನತೆ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಿ ‘ವಿಕಸಿತ ಭಾರತ’ ಗುರಿ ಸಾಧನೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಬೆಂಗಳೂರು ಕೇವಲ ಸಾಫ್ಟ್‌ವೇರ್ ಮತ್ತು ಸೇವಾ ಕ್ಷೇತ್ರಕ್ಕೆ ಮಾತ್ರವಲ್ಲ, ಭಾರತದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಜಾಗೃತಿಯನ್ನು ಜಗತ್ತಿನ ಮಟ್ಟದಲ್ಲಿ ಎತ್ತಿಹಿಡಿದ ನಗರ ಎಂದು ಪ್ರಶಂಸಿಸಿದರು.
ಭಾರತದ ಅಭಿವೃದ್ಧಿಗೆ ಯುವಜನತೆ ದೊಡ್ಡ ಶಕ್ತಿಯಾಗಿದ್ದು, ಇಂದಿನ ಕಾಲದಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಅಗತ್ಯವಿದೆ ಎಂದು ಹೇಳಿದರು.
“ಆರ್ಟ್ ಆಫ್ ಲಿವಿಂಗ್'ನಂತಹ ಸಂಸ್ಥೆಗಳು ಯುವಜನರಿಗೆ ಮಾನಸಿಕ ಶಾಂತಿ, ಏಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಭಾವನೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ಶಿಕ್ಷಣ, ಯುವಜನ ಮತ್ತು ಮಹಿಳಾ ಸಬಲೀಕರಣ, ಅರಣ್ಯ ವೃದ್ಧಿ, ಪರಿಸರ ಸಂರಕ್ಷಣೆ, ಆದಿವಾಸಿ ಕಲ್ಯಾಣ, ಆರೋಗ್ಯ ಸೇವೆ, ಜೈಲು ಸುಧಾರಣೆ ಹಾಗೂ ಡಿಜಿಟಲ್ ಸಾಕ್ಷರತೆ ಸೇರಿ ಒಂಬತ್ತು ರಾಷ್ಟ್ರವ್ಯಾಪಿ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ವಿಕಸಿತ ಭಾರತದ ಕನಸು ಸಾಕಾರಗೊಳ್ಳಬೇಕಾದರೆ ಮಾನಸಿಕವಾಗಿ ಶಾಂತ, ಸಾಮಾಜಿಕವಾಗಿ ಜವಾಬ್ದಾರಿಯುತ ಹಾಗೂ ಸಂವೇದನಾಶೀಲ ಯುವಜನರ ಅಗತ್ಯವಿದೆ. ಇಂದಿನ ಕಾಲದಲ್ಲಿ ಧ್ಯಾನ, ಮಾನಸಿಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಚಿಂತನೆ ಬಹಳ ಮುಖ್ಯ.
ಸಮಾಜದ ಬೆಂಬಲವಿಲ್ಲದೆ ಯಾವುದೇ ಮಿಷನ್ ಯಶಸ್ವಿಯಾಗುವುದಿಲ್ಲ, “ರಾಜಕೀಯ ಮತ್ತು ಸರ್ಕಾರಕ್ಕಿಂತ ಸಮಾಜವೇ ದೊಡ್ಡ ಶಕ್ತಿ. ರಾಷ್ಟ್ರ ನಿರ್ಮಾಣದಲ್ಲಿ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನ ಜನರನ್ನು ತಕ್ಷಣ ಸಂಪರ್ಕಿಸುತ್ತಿದ್ದರೂ, ಇಂದಿನ ಪರಿಸ್ಥಿತಿಯಲ್ಲಿ ಮನುಷ್ಯನು ತನ್ನೊಳಗಿನ ಆತ್ಮಸಂಪರ್ಕ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದರು.
ಪರಿಸರ ಸಂರಕ್ಷಣೆ ಕುರಿತಂತೆಯೂ ಮಾತನಾಡಿದ ಮೋದಿ, ಸಾವಯವ ಉತ್ಪನ್ನಗಳ ಬಳಕೆ, ಮಣ್ಣಿನ ನೈಸರ್ಗಿಕ ಗುಣಗಳ ರಕ್ಷಣೆ, ಅರಣ್ಯ ವೃದ್ಧಿ, ನೀರು-ವಿದ್ಯುತ್ ಸಂರಕ್ಷಣೆ, ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಷೇಧ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವಂತೆ ಕರೆ ನೀಡಿದರು.
ಕೇಂದ್ರ ಸರ್ಕಾರದ ‘ಮಿಷನ್ ಲೈಫ್’ ಯೋಜನೆಯ ಉಲ್ಲೇಖ ಮಾಡುತ್ತಾ, ಇದು ಜವಾಬ್ದಾರಿಯುತ ಜೀವನಶೈಲಿಯ ಪ್ರತೀಕ ಎಂದು ಹೇಳಿದರು.
ಇದೇ ವೇಳೆ ಶ್ರೀ ಶ್ರೀ ರವಿ ಶಂಕರ್ ಗುರೂಜಿ ಅವರು ಪ್ರಧಾನಿ ಮೋದಿಯನ್ನು ಪ್ರಶಂಸಿಸಿ, “ಭಾರತ ಇಂದು ವಿಶ್ವದ ಮುಂದೆ ಆತ್ಮವಿಶ್ವಾಸದಿಂದ ನಿಂತಿದೆ. ದೇಶದಲ್ಲಿ ಸ್ವಚ್ಛತೆ, ಭದ್ರತೆ ಮತ್ತು ಹೊಸ ವಿಶ್ವಾಸದ ವಾತಾವರಣ ನಿರ್ಮಾಣವಾಗಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಘಾಟನೆಯಾದ ಧ್ಯಾನ ಮಂದಿರದ ಮೇಲ್ಚಾವಣಿ ಕಮಲಾಕಾರದ ವಿನ್ಯಾಸ ಹೊಂದಿದ್ದು, ಅದನ್ನು ಉಲ್ಲೇಖಿಸಿದ ಮೋದಿ, ಸೇವಾ ಭಾವದಿಂದ ಕೆಲಸ ಮಾಡಿದರೆ ಪ್ರತೀ ಕೆಲಸವೂ ಯಶಸ್ವಿಯಾಗುತ್ತದೆ. ನಾವೆಲ್ಲರೂ ಕಮಲದ ಆಶ್ರಯದಲ್ಲಿದ್ದೇವೆ. ನಮ್ಮ ಜೊತೆ ಗುರುದೇವ್ ಅವರ ಆಶೀರ್ವಾದವಿದೆ. ಕಮಲದ ಆಶ್ರಯಜಲ್ಲಿ ದೇಶವನ್ನು ಎತ್ತರಕ್ಕೆ ಕೊಂಡೊಯ್ಯೋಣ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




