GBA ಚುನಾವಣೆಗೆ BJP ರಣತಂತ್ರ: ಮೋದಿ ಭೇಟಿ ಬೆನ್ನಲ್ಲೇ ಸಂಘಟನೆ ಚುರುಕು; ಮೇ 15ಕ್ಕೆ ಮಹತ್ವದ ಸಭೆ
ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ನಗರ ಮೂಲಸೌಕರ್ಯ ಕುಸಿತ, ಕಸದ ನಿರ್ವಹಣೆಯ ವಿಫಲತೆ, ರಸ್ತೆ ಹಾಳು ಹಾಗೂ ನೀರಿನ ಸಮಸ್ಯೆ ಹೆಚ್ಚಾಗಿದೆ. “ಕಾಂಗ್ರೆಸ್ ಸರ್ಕಾರ ‘ಬ್ರ್ಯಾಂಡ್ ಬೆಂಗಳೂರು’ ಎಂದು ಘೋಷಿಸಿದರೂ ಯಾವುದೇ ಸ್ಪಷ್ಟ ಫಲಿತಾಂಶ ಕಾಣುತ್ತಿಲ್ಲ.

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ಹಾಗೂ ನಗರ ಮಟ್ಟದ ಬಿಜೆಪಿ ನಾಯಕರೊಂದಿಗೆ ನಡೆದ ಸಂವಾದದ ನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೆ ಬಿಜೆಪಿ ತನ್ನ ಸಂಘಟನೆ ಹಾಗೂ ಚುನಾವಣಾ ತಂತ್ರವನ್ನು ಇನ್ನಷ್ಟು ಬಲಪಡಿಸಿದೆ.
ಪಕ್ಷವು ಮೇ 15ರಂದು ಬೆಂಗಳೂರು ನಗರ ಶಾಸಕರು, ಸಂಸದರು ಹಾಗೂ ಪ್ರಮುಖ ಮುಖಂಡರೊಂದಿಗೆ ವಿಶೇಷ ಸಮಾಲೋಚನಾ ಸಭೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಈ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ವಾರ್ಡ್ ಮಟ್ಟದ ತಂತ್ರ, ಸ್ಥಳೀಯ ಸಮಸ್ಯೆಗಳ ಮೇಲೆ ಜನಾಭಿಪ್ರಾಯ ನಿರ್ಮಾಣ ಹಾಗೂ ಆಡಳಿತ ವಿರೋಧಿ ಅಂಶಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಆಳವಾದ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ವೇಳಾಪಟ್ಟಿಯ ಕುರಿತು ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಜಿಎಸ್.ಸಂಗ್ರೇಶಿ ಅವರು ನೀಡಿರುವ ಸೂಚನೆಯಂತೆ, ಜಿಬಿಎ ಚುನಾವಣೆಗಳು ಜೂನ್ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ. ಇದರಿಂದಾಗಿ ಪಕ್ಷಗಳು ಈಗಿನಿಂದಲೇ ಅಭ್ಯರ್ಥಿ ಪಟ್ಟಿ ಹಾಗೂ ಪ್ರಚಾರ ಕಾರ್ಯಕ್ಕೆ ವೇಗ ನೀಡಿವೆ.
ಈ ನಡುವೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ನಗರ ಮೂಲಸೌಕರ್ಯ ಕುಸಿತ, ಕಸದ ನಿರ್ವಹಣೆಯ ವಿಫಲತೆ, ರಸ್ತೆ ಹಾಳು ಹಾಗೂ ನೀರಿನ ಸಮಸ್ಯೆ ಹೆಚ್ಚಾಗಿದೆ. “ಕಾಂಗ್ರೆಸ್ ಸರ್ಕಾರ ‘ಬ್ರ್ಯಾಂಡ್ ಬೆಂಗಳೂರು’ ಎಂದು ಘೋಷಿಸಿದರೂ ಯಾವುದೇ ಸ್ಪಷ್ಟ ಫಲಿತಾಂಶ ಕಾಣುತ್ತಿಲ್ಲ.” ಎಂದು ಆರೋಪಿಸಿದ್ದಾರೆ.
ಬೆಂಗಳೂರು ಸದಾ ಬಿಜೆಪಿಗೆ ಬಲವಾದ ಬೆಂಬಲ ನೀಡಿದ ನಗರವಾಗಿದ್ದು, ಈ ಬಾರಿ ಜಿಬಿಎ ಅಡಿಯಲ್ಲಿ ಬರುವ ಐದು ನಿಗಮಗಳಲ್ಲಿಯೂ ಪಕ್ಷವು ಬಹುಮತ ಸಾಧಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಮನೆಮನೆಗೆ ಸಂಪರ್ಕ ಅಭಿಯಾನ ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
2015 ರ ಬಿಬಿಎಂಪಿ ಚುನಾವಣೆಯನ್ನು ನೆನಪಿಸಿಕೊಂಡ ಹಿರಿಯ ಬಿಜೆಪಿ ನಾಯಕರೊಬ್ಬರು, ಬಿಜೆಪಿ ಶೇ.50 ಕ್ಕಿಂತ ಹೆಚ್ಚು ವಾರ್ಡ್‌ಗಳನ್ನು ಗೆದ್ದಿದ್ದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ಕೈಜೋಡಿಸಿ ಮೇಯರ್ ಚುನಾವಣೆಯಲ್ಲಿ ಗೆಲ್ಲಲು ಇತರ ಜಿಲ್ಲೆಗಳಿಂದ ಎಂಎಲ್‌ಸಿಗಳು ಮತ್ತು ರಾಜ್ಯಸಭಾ ಸಂಸದರನ್ನು ಬೆಂಗಳೂರಿಗೆ ಕರೆತರುವ ಮೂಲಕ ಆಡಳಿತವನ್ನು ರಚಿಸಿದವು ಎಂದು ಹೇಳಿದರು.
"ಕಾಂಗ್ರೆಸ್ ಆಗ ಅಧಿಕಾರದಲ್ಲಿತ್ತು. ಈಗಲೂ ಅಧಿಕಾರದಲ್ಲಿದೆ. ಹೀಗಾಗಿ ಇದೇ ರೀತಿಯ ನಡೆಯ ಸಾಧ್ಯತೆಯಿದೆ, ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಲು ನಾವು ನಮ್ಮ ಕಾನೂನು ತಂಡಕ್ಕೆ ಸೂಚನೆ ನೀಡಿದ್ದೇವೆ" ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪಕ್ಷದ ಸಂಘಟನೆ ಬಲಪಡಿಸಲು ಹಲವು ಹಂತದ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೇ 15ರ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ಹೋಗಲಿದ್ದು, ನಾವು ಈಗಾಗಲೇ ಕ್ಷೇತ್ರ ಮಟ್ಟದ ಸಮಿತಿಗಳನ್ನು ರಚಿಸಿದ್ದೇವೆ, ಪ್ರತಿ ಕ್ಷೇತ್ರದಿಂದ ಮೂರು ಹೆಸರುಗಳ ಪ್ಯಾನೆಲ್ ಸಲ್ಲಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದಲ್ಲದೆ, ರಾಷ್ಟ್ರೀಯ ಸಂಘಟನಾ ನಾಯಕರಾದ ರಾಮ್ ಮಾಧವ್ ಹಾಗೂ ಬಿ.ಎಲ್.ಸಂತೋಶ್ ಕೂಡ ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಅವರ ಮಾರ್ಗದರ್ಶನದಲ್ಲಿ ರಾಜ್ಯ ಮಟ್ಟದ ಚುನಾವಣಾ ರಣತಂತ್ರವನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ.
ಪಕ್ಷದ ಮೂಲಗಳ ಪ್ರಕಾರ, ಜೆಡಿಎಸ್ ಜೊತೆ ಸಾಧ್ಯತೆಯ ಮೈತ್ರಿ ಕುರಿತು ಅನೌಪಚಾರಿಕ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದ್ದು, ಬೆಂಗಳೂರು ನಗರದಲ್ಲಿ ಜೆಡಿಎಸ್ ಮತಬ್ಯಾಂಕ್ ಸೀಮಿತವಾಗಿದ್ದರೂ ಕೆಲವು ಕ್ಷೇತ್ರಗಳಲ್ಲಿ ಅವರ ಬೆಂಬಲ ನಿರ್ಣಾಯಕವಾಗಬಹುದು ಎಂದು ಬಿಜೆಪಿ ನಾಯಕರು ಅಂದಾಜಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




