ರಾಜ್ಯ

GBA 5 ನಿಗಮಗಳಿಗೆ ಶೀಘ್ರದಲ್ಲೇ ಕ್ರೆಡಿಟ್ ರೇಟಿಂಗ್: ಮುನ್ಸಿಪಲ್ ಬಾಂಡ್ ಮೂಲಕ ಬೆಂಗಳೂರು ಅಭಿವೃದ್ಧಿಗೆ ಹೊಸ ತಂತ್ರ..!

ಕ್ರೆಡಿಟ್ ರೇಟಿಂಗ್‌ಗೆ ಅಗತ್ಯವಿರುವ ದಾಖಲೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ತಿಂಗಳ ಅಂತ್ಯದೊಳಗೆ ಐದು ನಿಗಮಗಳಿಗೂ ರೇಟಿಂಗ್ ಸಿಗುವ ನಿರೀಕ್ಷೆ ಇದೆ ಎಂದು ಜಿಬಿಎ ವಿಶೇಷ ಆಯುಕ್ತ (ಹಣಕಾಸು) ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

GBA 5 ನಿಗಮಗಳಿಗೆ ಶೀಘ್ರದಲ್ಲೇ ಕ್ರೆಡಿಟ್ ರೇಟಿಂಗ್: ಮುನ್ಸಿಪಲ್ ಬಾಂಡ್ ಮೂಲಕ ಬೆಂಗಳೂರು ಅಭಿವೃದ್ಧಿಗೆ ಹೊಸ ತಂತ್ರ..!
ಸಂಗ್ರಹ ಚಿತ್ರ
Published On :

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಡಿಯಲ್ಲಿ ರಚನೆಯಾದ ಐದು ನಗರ ನಿಗಮಗಳು ಶೀಘ್ರದಲ್ಲೇ ಕ್ರೆಡಿಟ್ ರೇಟಿಂಗ್ ಪಡೆಯಲಿದ್ದು, ಮುನ್ಸಿಪಲ್ ಬಾಂಡ್ ಮೂಲಕ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಜ್ಜಾಗಿವೆ.

ಕ್ರೆಡಿಟ್ ರೇಟಿಂಗ್‌ಗೆ ಅಗತ್ಯವಿರುವ ದಾಖಲೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ತಿಂಗಳ ಅಂತ್ಯದೊಳಗೆ ಐದು ನಿಗಮಗಳಿಗೂ ರೇಟಿಂಗ್ ಸಿಗುವ ನಿರೀಕ್ಷೆ ಇದೆ ಎಂದು ಜಿಬಿಎ ವಿಶೇಷ ಆಯುಕ್ತ (ಹಣಕಾಸು) ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

ರೇಟಿಂಗ್ ಸಿಕ್ಕ ಬಳಿಕ ಪ್ರತಿ ನಿಗಮವೂ ಕೈಗೆತ್ತಿಕೊಳ್ಳಲಿರುವ ಪ್ರಮುಖ ಯೋಜನೆಗಳನ್ನು ಘೋಷಿಸಿ, ಅವುಗಳಿಗೆ ಅಗತ್ಯವಿರುವ ಹಣವನ್ನು ‘ಮುನ್ಸಿಪಲ್ ಬಾಂಡ್’ ಮೂಲಕ ಸಂಗ್ರಹಿಸಲಿದೆ.

ನಗರಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ರೂ.1,000 ಕೋಟಿಗೂ ಹೆಚ್ಚು ಮೌಲ್ಯದ ಬಾಂಡ್ ಬಿಡುಗಡೆ ಮಾಡಿದ ನಗರ ಸಂಸ್ಥೆಗೆ ರೂ.100 ಕೋಟಿ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದರು.

ರಾಜ್ಯ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಐದು ನಗರ ನಿಗಮಗಳು ತಮ್ಮ ಬ್ಯಾಲೆನ್ಸ್ ಶೀಟ್ ಆಧರಿಸಿ ಮುನ್ಸಿಪಲ್ ಬಾಂಡ್ ಮೂಲಕ ಸಂಪನ್ಮೂಲ ಸಂಗ್ರಹಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದರು.

ಈ ವರ್ಷದ ಮಾರ್ಚ್‌ನಲ್ಲಿ ಮಂಡಿಸಲಾದ ಮೊದಲ ಬಜೆಟ್‌ಗಳಲ್ಲಿ ಐದು ನಿಗಮಗಳೂ ತಲಾ ರೂ.200 ಕೋಟಿ ಮೌಲ್ಯದ ಮುನ್ಸಿಪಲ್ ಬಾಂಡ್ ಬಿಡುಗಡೆ ಮಾಡುವ ಯೋಜನೆ ಘೋಷಿಸಿದ್ದವು.

ಈ ಹಿಂದೆ ನಗರ ನಿರ್ವಹಣೆಗೆ ಬಿಬಿಎಂಪಿ ಒಂದೇ ಇತ್ತು. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪ್ರತ್ಯೇಕ ನಗರ ನಿಗಮಗಳು ರಚನೆಯಾಗಿವೆ. ಬಾಂಡ್ ಬಿಡುಗಡೆ ಮಾಡಲು ಪ್ರತಿಯೊಂದು ನಿಗಮಕ್ಕೂ ಕ್ರೆಡಿಟ್ ರೇಟಿಂಗ್ ಅಗತ್ಯ. ಇದು ಆ ಸಂಸ್ಥೆಯ ಆರ್ಥಿಕ ಸಾಮರ್ಥ್ಯ ಮತ್ತು ಸಾಲ ತೀರಿಸುವ ನಂಬಿಕೆಯನ್ನು ಅಳೆಯುವ ಪ್ರಕ್ರಿಯೆ ಎಂದು ಹರೀಶ್ ಕುಮಾರ್ ಅವರು ವಿವರಿಸಿದ್ದಾರೆ.

“ಪ್ರತಿ ನಿಗಮವೂ ತನ್ನ ಆಸ್ತಿ, ಆದಾಯ ಹಾಗೂ ಹಣಕಾಸು ಸ್ಥಿತಿಯ ವಿವರಗಳನ್ನು ಸಲ್ಲಿಸಬೇಕಾಗಿತ್ತು. SEBI (ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ)ಗೆ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತುತಿ ನೀಡಲಾಗಿದೆ,” ಎಂದರು.

ಬೆಂಗಳೂರು ದೇಶದಲ್ಲೇ ಮೊದಲ ಬಾರಿಗೆ 1997ರಲ್ಲಿ ಆಗಿನ ಬೆಂಗಳೂರು ಮಹಾನಗರ ಪಾಲಿಕೆ ಮೂಲಕ ರೂ.125 ಕೋಟಿ ಮೌಲ್ಯದ ಮುನ್ಸಿಪಲ್ ಬಾಂಡ್ ಬಿಡುಗಡೆ ಮಾಡಿದ ನಗರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ನಗರವನ್ನು ಐದು ನಿಗಮಗಳಾಗಿ ವಿಭಜಿಸಿರುವ ಹಿನ್ನೆಲೆಯಲ್ಲಿ ರಸ್ತೆ, ಸೇತುವೆ, ನೀರು, ಒಳಚರಂಡಿ ಹಾಗೂ ಇತರೆ ಮೂಲಸೌಕರ್ಯ ಕಾಮಗಾರಿಗಳಿಗೆ ಹೆಚ್ಚಿನ ಹಣಕಾಸು ಅಗತ್ಯವಿದ್ದು, ಮುನ್ಸಿಪಲ್ ಬಾಂಡ್‌ಗಳನ್ನು ಪ್ರಮುಖ ಆದಾಯ ಮೂಲವಾಗಿ ಬಳಸಲು ಸರ್ಕಾರ ಮುಂದಾಗಿದೆ.

ಪ್ರತಿ ರೂ.100 ಕೋಟಿ ಮುನ್ಸಿಪಲ್ ಬಾಂಡ್ ಸಂಗ್ರಹಕ್ಕೆ ಕೇಂದ್ರ ಸರ್ಕಾರದಿಂದ ರೂ.13 ಕೋಟಿ ಪ್ರೋತ್ಸಾಹಧನ ದೊರೆಯಲಿದ್ದು, ಇದರಿಂದ ನಗರ ನಿಗಮಗಳಿಗೆ ಹೆಚ್ಚುವರಿ ಹಣಕಾಸು ಬಲ ಸಿಗಲಿದೆ.

ಮುಂದಿನ 15 ದಿನಗಳಲ್ಲಿ ಕ್ರೆಡಿಟ್ ರೇಟಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಐದು ನಿಗಮಗಳೂ ಈಗಾಗಲೇ ಪ್ರಮುಖ ಮೂಲಸೌಕರ್ಯ ಯೋಜನೆಗಳ ಅಂತಿಮ ರೂಪುರೇಷೆ ಸಿದ್ಧಪಡಿಸುತ್ತಿವೆ ಎಂದು ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.