ಮಹಾರಾಷ್ಟ್ರ DCM ಅಜಿತ್ ಪವಾರ್ ವಿಮಾನ ಪತನ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಕೊಲೆ: ಬೆಂಗಳೂರಲ್ಲಿ FIR ದಾಖಲು
ಜನವರಿ 28, 2026ರಂದು ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಬಾಂಬಾರ್ಡಿಯರ್ ಲಿಯರ್‌ಜೆಟ್ 45 ವಿಮಾನ ಪತನಗೊಂಡು, ಅಜಿತ್ ಪವಾರ್ ಸೇರಿ ಐವರು ಮೃತಪಟ್ಟಿದ್ದರು.

ಬೆಂಗಳೂರು: ಮಹಾರಾಷ್ಟ್ರ ರಾಜಕಾರಣದ ದಿಗ್ಗಜ, ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವು ಕೇವಲ ಅಪಘಾತವಲ್ಲ, ಅದೊಂದು ವ್ಯವಸ್ಥಿತ ಸಂಚು ಮತ್ತು ಕೊಲೆ ಎಂದು ಅವರ ಅಳಿಯ ರೋಹಿತ್ ರಾಜೇಂದ್ರ ಪವಾರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲವು ಅನುಮಾನಾಸ್ಪದ ಸಂಗತಿಗಳನ್ನು ಬಹಿರಂಗಪಡಿಸಲಾಗಿದೆ.
ಜನವರಿ 28, 2026ರಂದು ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಬಾಂಬಾರ್ಡಿಯರ್ ಲಿಯರ್‌ಜೆಟ್ 45 ವಿಮಾನ ಪತನಗೊಂಡು, ಅಜಿತ್ ಪವಾರ್ ಸೇರಿ ಐವರು ಮೃತಪಟ್ಟಿದ್ದರು. ಈ ಘಟನೆ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ರೋಹಿತ್ ಪವಾರ್, “ಇದು ಕೇವಲ ಅಪಘಾತವಲ್ಲ, ವ್ಯವಸ್ಥಿತ ಕೊಲೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿಮಾನ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿದೆ, ನಿರ್ವಹಣೆಯಲ್ಲಿ ಭಾರಿ ನಿರ್ಲಕ್ಷ್ಯ ನಡೆದಿದೆ ಮತ್ತು ದಾಖಲೆಗಳನ್ನು ಬದಲಾಯಿಸಲಾಗಿದೆ. ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ Directorate General of Civil Aviation (DGCA) ಫೆಬ್ರವರಿ 24ರ ಸುರಕ್ಷತಾ ಪರಿಶೀಲನಾ ವರದಿಯಲ್ಲಿ VSR ಕಂಪನಿಯ ವಿಮಾನಗಳು ಸುರಕ್ಷಿತವಾಗಿಲ್ಲ ಎಂದು ಹೇಳಿ ನೆಲಕ್ಕಿಳಿಸಿದ್ದುದನ್ನೂ ಅವರು ಉಲ್ಲೇಖಿಸಿದ್ದಾರೆ.
ವಿಮಾನವು 5,000 ಗಂಟೆಗಳ ಎಂಜಿನ್ ಮಿತಿಗೆ ಸಮೀಪವಾಗಿದ್ದರೂ, ಅದನ್ನು ಹಾರಾಟಕ್ಕೆ ಬಳಸಲಾಗಿದೆ. ಅಧಿಕೃತ ದಾಖಲೆಗಳಲ್ಲಿ ವಿಮಾನದ ಹಾರಾಟ ಗಂಟೆಗಳನ್ನು ಕಡಿಮೆ ತೋರಿಸಲಾಗಿದ್ದು, ವಾಸ್ತವದಲ್ಲಿ 8,000 ಗಂಟೆಗಳಿಗೂ ಹೆಚ್ಚು ಹಾರಾಟ ನಡೆಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ವಿಮಾನದ ಪೈಲಟ್ ಸುಮಿತ್ ಕಪೂರ್ ಈ ಹಿಂದೆ ಎರಡು ಬಾರಿ ಮದ್ಯಪಾನ ಮಾಡಿ ಸಿಕ್ಕಿಬಿದ್ದಿದ್ದ ಅವರನ್ನ ಅಮಾನತು ಮಾಡಿದ್ದರು. ಆದರೂ ಅದೇ ಪೈಲಟ್‌ರನ್ನ ನೇಮಿಸಲಾಗಿದೆ. ಇಂತಹ ಇತಿಹಾಸವಿದ್ದರೂ ಉಪಮುಖ್ಯಮಂತ್ರಿಗಳ ವಿಮಾನಕ್ಕೆ ಅವರನ್ನೇ ಪೈಲಟ್ ಆಗಿ ನೇಮಿಸಿದ್ದು ಯಾಕೆ? ಪೈಲಟ್ ತಂಡವನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಅಪಘಾತಕ್ಕೂ ಮುನ್ನ ಕೊನೆಯ ಕ್ಷಣಗಳಲ್ಲಿ ಸಹಪೈಲಟ್ “Oh S**t” ಎಂದು ಹೇಳಿದ ಆಡಿಯೋ ಬಹಿರಂಗವಾಗಿದೆ. ಆದರೆ, ಮುಖ್ಯ ಪೈಲಟ್ ಯಾವುದೇ ಪ್ರತಿಕ್ರಿಯೆ ನೀಡದಿರುವುದು, ತುರ್ತು ಕ್ರಮ ಕೈಗೊಳ್ಳದಿರುವುದು ಗಂಭೀರ ಅನುಮಾನ ಹುಟ್ಟಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರಿನಲ್ಲಿ ಘಟನೆ ನಡೆಯದಿದ್ದರೂ ದೂರನ್ನು ಸ್ವೀಕರಿಸಿ 'ಝಿರೋ ಎಫ್ಐಆರ್' ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್ ಪೊಲೀಸರು, ಈಗ ಈ ಪ್ರಕರಣವನ್ನು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



