ರಾಜ್ಯ

ಅಕ್ರಮ ಸಂಗ್ರಹಣೆ ವಿರುದ್ಧ ಸರ್ಕಾರ ಕಠಿಣ ಕ್ರಮ: ರಾಜ್ಯದಲ್ಲಿ LPG ಪೂರೈಕೆ ಹೆಚ್ಚಳ, ಗ್ರಾಹಕರು ನಿಟ್ಟುಸಿರು..!

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಕಳೆದ ಮೂರು ದಿನಗಳಲ್ಲಿ ರಾಜ್ಯದಾದ್ಯಂತ ಗೃಹ ಬಳಕೆಯ 11,41,657 ಎಲ್‌ಪಿಜಿ ಸಿಲಿಂಡರ್‌ಗಳು ಹಾಗೂ ವಾಣಿಜ್ಯ ಮತ್ತು ವಾಹನ ಬಳಕೆಯ 20,941 ಸಿಲಿಂಡರ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿದುಬಂದಿದೆ.

ಅಕ್ರಮ ಸಂಗ್ರಹಣೆ ವಿರುದ್ಧ ಸರ್ಕಾರ ಕಠಿಣ ಕ್ರಮ: ರಾಜ್ಯದಲ್ಲಿ LPG ಪೂರೈಕೆ ಹೆಚ್ಚಳ, ಗ್ರಾಹಕರು ನಿಟ್ಟುಸಿರು..!
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲದ ಕೊರತೆ ಬಗ್ಗೆ ಉಂಟಾಗಿದ್ದ ಆತಂಕದ ನಡುವೆ ಸರ್ಕಾರ ಅಕ್ರಮ ಸಂಗ್ರಹಣೆ ಮತ್ತು ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಈ ಮೂಲಕ ರಾಜ್ಯದಲ್ಲಿ ಎಲ್‌ಪಿಜಿ ಪೂರೈಕೆ ಹೆಚ್ಚಳವಾಗುವಂತೆ ಮಾಡಲಾಗಿದೆ. ಇದರಿಂದ ಆತಂಕಕ್ಕೊಳಗಾಗಿದ್ದ ಗ್ರಾಹಕರೂ ಕೂಡ ಸ್ವಲ್ಪ ಮಟ್ಟಿನ ನಿರಾಳ ದೊರೆತಂತಾಗಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಕಳೆದ ಮೂರು ದಿನಗಳಲ್ಲಿ ರಾಜ್ಯದಾದ್ಯಂತ ಗೃಹ ಬಳಕೆಯ 11,41,657 ಎಲ್‌ಪಿಜಿ ಸಿಲಿಂಡರ್‌ಗಳು ಹಾಗೂ ವಾಣಿಜ್ಯ ಮತ್ತು ವಾಹನ ಬಳಕೆಯ 20,941 ಸಿಲಿಂಡರ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿದುಬಂದಿದೆ.

ಸಾರ್ವಜನಿಕ ಸಾರಿಗೆ ಸೇವೆಗಳು, ವಿಶೇಷವಾಗಿ ಅನಿಲವನ್ನು ಬಳಸುವ ಆಟೋರಿಕ್ಷಾಗಳಿಗೆ ವ್ಯತ್ಯಯವಾಗದಂತೆ ನೋಡಿಕೊಳ್ಳಲು ವಾಹನ ಬಳಕೆಯ ಅನಿಲ ಪೂರೈಕೆಯನ್ನೂ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಅಕ್ರಮ ಸಂಗ್ರಹಣೆ, ಅಕ್ರಮ ತುಂಬಿಕೆ ಹಾಗೂ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಪ್ರಕರಣಗಳ ವಿರುದ್ಧ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ.

ದಾವಣಗೆರೆಯ ಎಪಿಎಂಸಿ ಪೊಲೀಸ್ ಠಾಣೆ ಮತ್ತು ಬೆಂಗಳೂರಿನ ಪೀಣ್ಯ, ಚಿಕ್ಕಜಾಲ ಮತ್ತು ಕೆಂಗೇರಿಯ ಪೊಲೀಸ್ ಠಾಣೆಗಳು ಹಾಗೂ ಕೋಲಾರದ ಆಂಡರ್ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಸೇರಿದಂತೆ ಒಟ್ಟು ಐದು ಎಫ್‌ಐಆರ್‌ಗಳು ದಾಖಲಾಗಿವೆ.

ಇದಲ್ಲದೆ, ಶಿವಮೊಗ್ಗ, ಯಾದಗಿರಿ, ದಾವಣಗೆರೆ, ಕೋಲಾರ, ರಾಯಚೂರು, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 514 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

ಇದೇ ವೇಳೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಅಕ್ರಮವಾಗಿ ಅನಿಲ ಸಿಲಿಂಡರ್‌ಗಳನ್ನು ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ್ದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಯ ಗೋದಾಮಿನಿಂದ 15 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಾದ್ಯಂತ ಮನೆಗಳಿಗೆ ಮತ್ತು ಅಗತ್ಯ ಸಾರ್ವಜನಿಕ ಸೇವೆಗಳಿಗೆ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಾಗ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.