ಆದಾಯ ಮೀರಿ ಆಸ್ತಿ ಗಳಿಕೆ: ಲೋಕಾಯುಕ್ತ ಬಲೆಗೆ ಉಡುಪಿ ಅಬಕಾರಿ ಡಿಸಿ; 8.69 ಕೋಟಿ ರೂ ಆಸ್ತಿ ಪತ್ತೆ..!
ಸ್ಥಿರ ಆಸ್ತಿಗಳ ಜೊತೆಗೆ, ಲೋಕಾಯುಕ್ತ ಪೊಲೀಸರು 2,66,90,001 ರೂ. ಮೌಲ್ಯದ ಚರಾಸ್ತಿಗಳನ್ನು ಸಹ ಪತ್ತೆಹಚ್ಚಿದ್ದಾರೆ.

ಉಡುಪಿ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ (DC) ಶ್ರೀನಿವಾಸ್ ಟಿ. ಎಂ. ಅವರಿಗೆ ಸಂಬಂಧಿಸಿದ 15 ವಿವಿಧ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದಾರೆ.
ಮಾರ್ಚ್ 11 ರಂದು ಶ್ರೀನಿವಾಸ್ ಅವರ ನಿವಾಸ, ಕಚೇರಿ ಮತ್ತು ಸಂಬಂಧಿಕರಿಗೆ ಸೇರಿದ ಮನೆಗಳು ಸೇರಿದಂತೆ 15 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಶೋಧ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಒಟ್ಟು 8 ಕೋಟಿ 69 ಲಕ್ಷ ರೂಪಾಯಿ ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದೆ. ಇವುಗಳಲ್ಲಿ 11 ನಿವೇಶನಗಳು, ಆರು ವಸತಿ ಮನೆಗಳು ಇದ್ದು, ಅಧಿಕಾರಿ ಮತ್ತು ಅವರ ಕುಟುಂಬ ಸದಸ್ಯರು ಒಡೆತನ ಹೊಂದಿದ್ದಾರೆ ಎನ್ನಲಾದ ಸುಮಾರು 31 ಎಕರೆ ಕೃಷಿ ಭೂಮಿ ಸೇರಿವೆ.
ಸ್ಥಿರ ಆಸ್ತಿಗಳ ಜೊತೆಗೆ, ಲೋಕಾಯುಕ್ತ ಪೊಲೀಸರು 2,66,90,001 ರೂ. ಮೌಲ್ಯದ ಚರಾಸ್ತಿಗಳನ್ನು ಸಹ ಪತ್ತೆಹಚ್ಚಿದ್ದಾರೆ. ಈ ಚರಾಸ್ತಿಗಳಲ್ಲಿ 3,95,941 ರೂ. ನಗದು, 1,47,50,506 ರೂ. ಮೌಲ್ಯದ ಚಿನ್ನಾಭರಣಗಳು, 17,00,000 ರೂ. ಮೌಲ್ಯದ ವಾಹನಗಳು, ಒಟ್ಟು 25,75,000 ರೂ. ಬ್ಯಾಂಕ್ ಠೇವಣಿಗಳು ಮತ್ತು 72,68,554 ರೂ. ಅಂದಾಜು ಇತರ ಬೆಲೆಬಾಳುವ ವಸ್ತುಗಳು ಸೇರಿವೆ.
ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಶ್ರೀನಿವಾಸ್ ಟಿ. ಎಂ. ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ.
ಆದಾಯಕ್ಕೂ ಮೀರಿ ಶ್ರೀನಿವಾಸ್ ಅವರು ಆಸ್ತಿ ಗಳಿಕೆ ಕುರಿತು ಅನುಮಾನಗಳು ವ್ಯಕ್ತವಾಗಿತ್ತು. ಸರ್ಕಾರಿ ಸೇವೆಯ ಅವಧಿಯಲ್ಲಿ ಅಕ್ರಮವಾಗಿ ಆಸ್ತಿ ಮಾಡಿದ್ದಾರೆಂಬ ವಿಶ್ವಾಸಾರ್ಹ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳು ಹಾಗೂ ಹಣಕಾಸು ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲಿಸುತ್ತಿದ್ದು, ಆಸ್ತಿಗಳ ನಿಜವಾದ ಮಾಲೀಕತ್ವದ ಬಗ್ಗೆ ತನಿಖೆ ಮುಂದುವರಿದಿದೆ. ಈ ಸಂಬಂಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



