ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ: ವಿದ್ಯುತ್ ಪೂರೈಕೆಗೆ ಇಂತಹ ಯೋಜನೆ ಅಗತ್ಯ ಎಂದ ಡಿಕೆಶಿ; ಸಚಿವ ಮಂಕಾಳ್ ವೈದ್ಯ ಮೌನ ಪ್ರಶ್ನಿಸಿದ BJP
ಡಿಕೆ ಶಿವಕುಮಾರ್ ಅವರು ಯೋಜನೆ ಬಗ್ಗೆ ಒಂದು ಮಾತು ಕೂಡ ಹೇಳಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ. ಕೆಲಸವಿಲ್ಲದವರು ವಿವಾದ ಸೃಷ್ಟಿಸುತ್ತಿದ್ದಾರೆ.

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸ್ತಾವಿತ ಶರಾವತಿ ಪಂಪ್ಡ್ ಸ್ಟೋರೇಜ್ ಪವರ್ ಪ್ರಾಜೆಕ್ಟ್ ಕುರಿತು ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ.
ಯೋಜನೆ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆಯ ನಂತರ ವಿವಾದ ಉಲ್ಬಣಗೊಂಡಿದ್ದು, ಜಿಲ್ಲಾ ಸಚಿವ ಮಂಕಾಳ್ ವೈದ್ಯ ಮೌನವನ್ನು ಬಿಜೆಪಿ ಪ್ರಶ್ನೆ ಮಾಡಿದೆ.
ಮಂಗಳವಾರ ಹೈಕೋರ್ಟ್ ವಿಭಾಗೀಯ ಪೀಠವು ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಭಾಗದಲ್ಲಿರುವ ಶರಾವತಿ ಲಯನ್-ಟೈಲ್ಡ್ ಮಕಾಕ್ ಅಭಯಾರಣ್ಯದಲ್ಲಿ ಯಾವುದೇ ಯೋಜನಾ ಕಾರ್ಯಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆದೇಶ ನೀಡಿದೆ.
ಕರಾವಳಿ ಉತ್ಸವದ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಈ ಯೋಜನೆಯಿಂದ ಅರಣ್ಯ ಅಥವಾ ವನ್ಯಜೀವಿಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಿದ್ದರು. ಜಗತ್ತಿನ ಹಲವು ದೇಶಗಳಲ್ಲಿ ಇದೇ ರೀತಿಯ ಯೋಜನೆಗಳನ್ನು ಕಂಡಿದ್ದೇನೆ. ಆದ್ದರಿಂದ ಸ್ಥಳೀಯರು ವ್ಯಕ್ತಪಡಿಸುತ್ತಿರುವ ಆತಂಕ ಅಸಂಬದ್ಧವೆಂದು ಅವರು ಅಭಿಪ್ರಾಯಪಟ್ಟಿದ್ದರು. ಆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಕೂಡ ಉಪಸ್ಥಿತರಿದ್ದರು.
ಆದರೆ ಈ ಹೇಳಿಕೆಗಳ ನಂತರ ಸ್ಥಳೀಯ ಬಿಜೆಪಿ ನಾಯಕರು ಮಂಕಾಳ್ ವೈದ್ಯರ ಮೌನವನ್ನು ಪ್ರಶ್ನಿಸಿದ್ದಾರೆ. “ಈ ಯೋಜನೆ ಜಾರಿಗೆ ಬರುವುದಿಲ್ಲ ಎಂದು ಮೊದಲು ಹೇಳಿದ್ದ ಸಚಿವರು ಈಗೇಕೆ ಮೌನವಾಗಿದ್ದಾರೆ? ಸರ್ಕಾರದ ನಿಲುವು ಅವರ ಹೇಳಿಕೆಗೆ ವಿರುದ್ಧವಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಇದೇ ವಿಚಾರವನ್ನು ಗುರುವಾರ ಹೊನ್ನಾವರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ವಿರೋಧ ಹೋರಾಟ ಸಮಿತಿ ಆಯೋಜಿಸಿದ್ದ ಸಭೆಯಲ್ಲೂ ಪ್ರಸ್ತಾಪಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪರಿಸರ ಹೋರಾಟಗಾರ ಮಸ್ತಪ್ಪ ನಾಯ್ಕ್, ಪಶ್ಚಿಮ ಘಟ್ಟ ಮತ್ತು ಸ್ಥಳೀಯ ಜನರ ಜೀವನಕ್ಕೆ ಹಾನಿಯಾಗುವಂತಹ ಯೋಜನೆ ಬಗ್ಗೆ ರಾಜಕೀಯ ಮಾಡಬಾರದು ಎಂದು ಹೇಳಿದರು.
ಇದು ರಾಜಕೀಯ ಮಾಡುವ ಸಮಯವಲ್ಲ. ಮೊದಲು ಪರಿಸರ ಮತ್ತು ಜನರ ಹಿತದ ಬಗ್ಗೆ ಚಿಂತಿಸಬೇಕು,” ಎಂದು ಅವರು ಹೇಳಿದರು. ಜೊತೆಗೆ ಕೇಂದ್ರ ಸರ್ಕಾರವೂ ಈ ಯೋಜನೆ ತಡೆಯಲು ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನಡುವೆ ಕುಮಟಾ ಶಾಸಕ ದಿನಕರ್ ಶೆಟ್ಟಿ ಕೂಡ ಜನರೊಂದಿಗೆ ನಿಂತು ಯೋಜನೆಗೆ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದರು. “ಜನರ ಹಿತದೃಷ್ಟಿಯಿಂದ ಈ ಯೋಜನೆ ಬರಬಾರದು. ಜನರೊಂದಿಗೆ ನಾನೂ ಹೋರಾಟದಲ್ಲಿ ಭಾಗಿಯಾಗುತ್ತೇನೆ,” ಎಂದು ಅವರು ಸ್ಪಷ್ಟಪಡಿಸಿದರು.
ಈ ನಡುವೆ ವಿವಾದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯೋಜನೆ ಕುರಿತು ಯಾವುದೇ ಹೇಳಿಕೆ ನೀಡಿಲ್ಲ ಎಂದು ತಿಳಿಸಿದ್ದಾರೆ.
“ಡಿಕೆ ಶಿವಕುಮಾರ್ ಅವರು ಯೋಜನೆ ಬಗ್ಗೆ ಒಂದು ಮಾತು ಕೂಡ ಹೇಳಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ. ಕೆಲಸವಿಲ್ಲದವರು ವಿವಾದ ಸೃಷ್ಟಿಸುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಆದರೆ, ಕೆಲವು ಸ್ಥಳೀಯ ವೆಬ್‌ಸೈಟ್‌ಗಳು ಮತ್ತು ಸುದ್ದಿ ವಾಹಿನಿಗಳು ಡಿ.ಕೆ. ಶಿವಕುಮಾರ್ ಹೇಳಿಕೆಗಳ ವಿಡಿಯೋ ಕ್ಲಿಪ್‌ಗಳನ್ನು ಪ್ರಸಾರ ಮಾಡುತ್ತಿರುವುದರಿಂದ, ಈ ವಿಷಯ ಮತ್ತಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



