ಕೈಕೊಟ್ಟ ಮುಂಗಾರು: ರಾಜ್ಯದ 16 ಜಿಲ್ಲೆಗಳಲ್ಲಿ ಶೇ.50ಕ್ಕಿಂತ ಕಡಿಮೆ ಮಳೆ; ಮಲೆನಾಡಿನಲ್ಲೂ ಬರದ ಛಾಯೆ, ಬೆಳೆ ನಷ್ಟದ ಆತಂಕ
ಕೃಷಿ ಇಲಾಖೆ ಸಂಗ್ರಹಿಸಿರುವ ಜಿಲ್ಲಾವಾರು ಅಂಕಿ-ಅಂಶಗಳ ಪ್ರಕಾರ, ಜೂನ್ 26ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿಗೆ ಅಗತ್ಯವಿರುವಷ್ಟು ಮಳೆಯಾಗಿಲ್ಲ ಎಂದು ತಿಳಿದುಬಂದಿದ್ದು, ಇದು ರೈತರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ಕಾರವಾರ: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ರಾಜ್ಯದ 31 ಜಿಲ್ಲೆಗಳ ಪೈಕಿ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಶೇ.50ಕ್ಕಿಂತ ಕಡಿಮೆ ಮಳೆಯಾಗಿದೆ.
ಆತಂಕಕಾರಿ ಸಂಗತಿಯೆಂದರೆ, ಸಾಮಾನ್ಯವಾಗಿ ಅಧಿಕ ಮಳೆ ಪಡೆಯುವ ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಶೇ.40ಕ್ಕಿಂತ ಕಡಿಮೆ ಪ್ರಮಾಣದ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಭಾರೀ ಹೊಡೆತ ಬೀಳುವ ಆತಂಕ ಎದುರಾಗಿದೆ.
ಕೃಷಿ ಇಲಾಖೆ ಸಂಗ್ರಹಿಸಿರುವ ಜಿಲ್ಲಾವಾರು ಅಂಕಿ-ಅಂಶಗಳ ಪ್ರಕಾರ, ಜೂನ್ 26ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿಗೆ ಅಗತ್ಯವಿರುವಷ್ಟು ಮಳೆಯಾಗಿಲ್ಲ ಎಂದು ತಿಳಿದುಬಂದಿದ್ದು, ಇದು ರೈತರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ಅತಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಗಳ ಪೈಕಿ ಶಿವಮೊಗ್ಗದಲ್ಲಿ ಸಾಮಾನ್ಯ ಮಳೆಯ ಶೇ.36 ಮಾತ್ರ ದಾಖಲಾಗಿದ್ದು, ಶೇ.64ರಷ್ಟು ಕೊರತೆ ಕಂಡುಬಂದಿದೆ. ಕೊಡಗಿನಲ್ಲಿ ಶೇ.39ರಷ್ಟು ಮಾತ್ರ ಮಳೆಯಾಗಿದ್ದು, ಶೇ.61ರಷ್ಟು ಕೊರತೆ ದಾಖಲಾಗಿದೆ. ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಸುಮಾರು ಶೇ.60ರಷ್ಟು ಮಳೆ ಕೊರತೆ ಉಂಟಾಗಿದೆ.
ಜೂನ್ 26ರವರೆಗೆ ದಕ್ಷಿಣ ಕನ್ನಡದಲ್ಲಿ ಸಾಮಾನ್ಯವಾಗಿ 766 ಮಿ.ಮೀ. ಮಳೆಯಾಗಬೇಕಿದ್ದರೆ, ಕೇವಲ 306 ಮಿ.ಮೀ. ಮಳೆಯಾಗಿದೆ. ಚಿಕ್ಕಮಗಳೂರಿನಲ್ಲಿ 264 ಮಿ.ಮೀ. ಬದಲಿಗೆ 105 ಮಿ.ಮೀ., ಕೊಡಗಿನಲ್ಲಿ 429 ಮಿ.ಮೀ. ಬದಲಿಗೆ 168 ಮಿ.ಮೀ., ಶಿವಮೊಗ್ಗದಲ್ಲಿ 383 ಮಿ.ಮೀ. ಬದಲಿಗೆ 138 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ.
ವಿಜಯನಗರ ಜಿಲ್ಲೆಯಲ್ಲಿ 71 ಮಿ.ಮೀ. ಸಾಮಾನ್ಯ ಮಳೆಯ ಬದಲಿಗೆ ಕೇವಲ 29 ಮಿ.ಮೀ. ಮಳೆಯಾಗಿ ಶೇ.59ರಷ್ಟು ಕೊರತೆ ಉಂಟಾಗಿದೆ.
ಇನ್ನು ಉಡುಪಿಯಲ್ಲಿ ಜೂನ್ 26ರ ವೇಳೆಗೆ ಸಾಮಾನ್ಯವಾಗಿ 923 ಮಿ.ಮೀ. ಮಳೆಯಾಗಬೇಕಿದ್ದರೆ, ಈ ಬಾರಿ 424 ಮಿ.ಮೀ. ಮಾತ್ರ ದಾಖಲಾಗಿದ್ದು, ಶೇ.54ರಷ್ಟು ಕೊರತೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲೂ ಶೇ.54ರಷ್ಟು ಮಳೆ ಕೊರತೆ ದಾಖಲಾಗಿದೆ.
ಹಾವೇರಿ, ಉತ್ತರ ಕನ್ನಡ ಹಾಗೂ ಮೈಸೂರು ಜಿಲ್ಲೆಗಳಲ್ಲೂ ಸುಮಾರು ಶೇ.53ರಷ್ಟು ಮಳೆ ಕೊರತೆ ಕಂಡುಬಂದಿದೆ. ಮೈಸೂರಿನಲ್ಲಿ 82 ಮಿ.ಮೀ. ಬದಲಿಗೆ 38 ಮಿ.ಮೀ., ಹಾವೇರಿಯಲ್ಲಿ 99 ಮಿ.ಮೀ. ಬದಲಿಗೆ 47 ಮಿ.ಮೀ. ಹಾಗೂ ಉತ್ತರ ಕನ್ನಡದಲ್ಲಿ 564 ಮಿ.ಮೀ. ಬದಲಿಗೆ ಕೇವಲ 264 ಮಿ.ಮೀ. ಮಳೆಯಾಗಿದೆ.
ಇದಕ್ಕೆ ವಿರುದ್ಧವಾಗಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಮಂಡ್ಯ, ಬಳ್ಳಾರಿ, ಕೋಲಾರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು, ಚಾಮರಾಜನಗರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗಿದೆ.
ಇನ್ನು ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕ್ರಮವಾಗಿ ಶೇ.28 ಮತ್ತು ಶೇ.33ರಷ್ಟು ಅಧಿಕ ಮಳೆ ದಾಖಲಾಗಿದೆ. ತುಮಕೂರಿನಲ್ಲಿ ಸಾಮಾನ್ಯ 60 ಮಿ.ಮೀ. ಬದಲಿಗೆ 80 ಮಿ.ಮೀ. ಹಾಗೂ ಚಿಕ್ಕಬಳ್ಳಾಪುರದಲ್ಲಿ 55 ಮಿ.ಮೀ. ಬದಲಿಗೆ 71 ಮಿ.ಮೀ. ಮಳೆಯಾಗಿದೆ.
ಈ ಕುರಿತು ಉತ್ತರ ಕನ್ನಡ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವ್ಕರ್ ಪ್ರತಿಕ್ರಿಯಿಸಿ, "ಮಳೆ ಕೊರತೆ ಇದೇ ರೀತಿ ಮುಂದುವರಿದರೆ ಬೆಳೆಗಳಿಗೆ ತೀವ್ರ ಹಾನಿಯಾಗುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



