ರಾಜ್ಯ

'ಕೃಷ್ಣ' ಹೆಸರು ನದಿಯಿಂದ ಪ್ರೇರಿತವಾದದ್ದು, ದೇವರಿಂದಲ್ಲ; 'ಕೇಸರೀಕರಣ' ಆರೋಪಕ್ಕೆ NCERT ತಿರುಗೇಟು..!

ಪಠ್ಯಪುಸ್ತಕದ ಎಲ್ಲಿಯೂ ಸಸ್ಯಾಹಾರವನ್ನು ಸಮರ್ಥಿಸಿಲ್ಲ ಅಥವಾ ಮಾಂಸಾಹಾರವನ್ನು ವಿರೋಧಿಸಿಲ್ಲ. ಆರನೇ ಅಧ್ಯಾಯವಾದ 'ಆರೋಗ್ಯವೇ ಭಾಗ್ಯ'ದಲ್ಲಿ ಸಮತೋಲಿತ ಆಹಾರದ ಮಹತ್ವವನ್ನು ವಿವರಿಸಲಾಗಿದೆ.

'ಕೃಷ್ಣ' ಹೆಸರು ನದಿಯಿಂದ ಪ್ರೇರಿತವಾದದ್ದು, ದೇವರಿಂದಲ್ಲ; 'ಕೇಸರೀಕರಣ' ಆರೋಪಕ್ಕೆ NCERT ತಿರುಗೇಟು..!
NCERT ಪುಸ್ತಕ
Published On :

ಬೆಂಗಳೂರು: ಆರನೇ ತರಗತಿಯ ಮೂರನೇ ಭಾಷೆಯ ಕನ್ನಡ ಪಠ್ಯಪುಸ್ತಕದಲ್ಲಿ ಕರ್ನಾಟಕದ ಆಹಾರ ಸಂಸ್ಕೃತಿಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂಬ ಆರೋಪಗಳ ನಡುವೆಯೇ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಪಠ್ಯಪುಸ್ತಕದಲ್ಲಿ ಯಾವುದೇ ಆಹಾರ ಪದ್ಧತಿಯ ವಿರುದ್ಧ ತಾರತಮ್ಯ ಮಾಡಿಲ್ಲ ಮತ್ತು ಸಸ್ಯಾಹಾರವನ್ನು ಮಾತ್ರ ಉತ್ತೇಜಿಸಲಾಗಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಎನ್‌ಸಿಇಆರ್‌ಟಿ ಹೇಳಿದೆ.

"ಪಠ್ಯಪುಸ್ತಕದ ಎಲ್ಲಿಯೂ ಸಸ್ಯಾಹಾರವನ್ನು ಸಮರ್ಥಿಸಿಲ್ಲ ಅಥವಾ ಮಾಂಸಾಹಾರವನ್ನು ವಿರೋಧಿಸಿಲ್ಲ. ಆರನೇ ಅಧ್ಯಾಯವಾದ 'ಆರೋಗ್ಯವೇ ಭಾಗ್ಯ'ದಲ್ಲಿ ಸಮತೋಲಿತ ಆಹಾರದ ಮಹತ್ವವನ್ನು ವಿವರಿಸಲಾಗಿದೆ. ಉತ್ತಮ ಆರೋಗ್ಯಕ್ಕಾಗಿ ಸಮತೋಲಿತ ಆಹಾರ, ವ್ಯಾಯಾಮ ಮತ್ತು ಸ್ವಚ್ಛತೆ ಅಗತ್ಯವೆಂದು ಆರಂಭದಲ್ಲೇ ಉಲ್ಲೇಖಿಸಲಾಗಿದೆ" ಎಂದು ತಿಳಿಸಿದೆ.

ದೇಹಕ್ಕೆ ಹಾಲು, ಹಸಿರು ಸೊಪ್ಪು, ತರಕಾರಿ, ಹಣ್ಣು ಸೇರಿದಂತೆ ವಿವಿಧ ಪೌಷ್ಟಿಕ ಆಹಾರಗಳು ಅಗತ್ಯವಾಗಿದ್ದು, ಅವುಗಳನ್ನು ಪ್ರತಿನಿತ್ಯದ ಆಹಾರದಲ್ಲಿ ಸೇರಿಸಬೇಕು ಎಂದು ಪಾಠದಲ್ಲಿ ತಿಳಿಸಲಾಗಿದೆ. ಅಲ್ಲದೆ, 63ನೇ ಪುಟದಲ್ಲಿರುವ ಚಿತ್ರದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ವಿಧದ ಆಹಾರಗಳನ್ನು ತೋರಿಸಲಾಗಿದೆ ಎಂದು ಹೇಳಿದೆ.

ಆದರೆ, ಎನ್‌ಸಿಇಆರ್‌ಟಿ ನೀಡಿರುವ ಈ ಸ್ಪಷ್ಟನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಚಿತ್ರದಲ್ಲಿ ಮೊಟ್ಟೆಯನ್ನು ಹೊರತುಪಡಿಸಿ ಮೀನು, ಮಾಂಸ ಅಥವಾ ಇತರ ಯಾವುದೇ ಮಾಂಸಾಹಾರದ ಚಿತ್ರಗಳಿಲ್ಲ. ಇಂತಹ ಸುಳ್ಳು ವಿವರಣೆಯನ್ನು ಎನ್‌ಸಿಇಆರ್‌ಟಿ ನೀಡಿರುವುದು ಆಘಾತಕಾರಿ ಎಂದು ಆರೋಪಿಸಿದೆ.

ಇದೇ ವೇಳೆ ಪಠ್ಯಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಟ್ಟಿರುವುದು ಪಠ್ಯಕ್ರಮವನ್ನು ಕೇಸರೀಕರಣಗೊಳಿಸುವ ಪ್ರಯತ್ನ ಎಂಬ ಆರೋಪವನ್ನೂ ಎನ್‌ಸಿಇಆರ್‌ಟಿ ತಳ್ಳಿಹಾಕಿದೆ.

"ಕೃಷ್ಣ ಎಂಬ ಹೆಸರು ದೇವರು ಶ್ರೀಕೃಷ್ಣನನ್ನು ಉಲ್ಲೇಖಿಸಿ ಇಡಲಾಗಿಲ್ಲ. ಕರ್ನಾಟಕದ ಮೂಲಕ ಹರಿಯುವ ಭಾರತದ ಪ್ರಮುಖ ನದಿಗಳಲ್ಲೊಂದಾದ ಕೃಷ್ಣಾ ನದಿಯಿಂದ ಈ ಹೆಸರನ್ನು ಆಯ್ಕೆ ಮಾಡಲಾಗಿದೆ" ಎಂದೂ ಎನ್‌ಸಿಇಆರ್‌ಟಿ ಸ್ಪಷ್ಟಪಡಿಸಿದೆ.

ಆದರೆ, ಈ ಸ್ಪಷ್ಟತೆಯನ್ನೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒಪ್ಪಿಲ್ಲ. "ಕರ್ನಾಟಕದ ಜೀವನಾಡಿ ಕಾವೇರಿ. ಕನ್ನಡ ಭಾಷೆಯನ್ನು ಕಲಿಸಲು ಪ್ರಕಟಿಸಿರುವ ಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಡುವುದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-2020)ಯನ್ನು ಹಿಂಬಾಗಿಲಿನಿಂದ ಜಾರಿಗೊಳಿಸುವ ಕುತಂತ್ರವಾಗಿದೆ. ಕನ್ನಡದ ಸಾಂಸ್ಕೃತಿಕ ಇತಿಹಾಸ ಅರಿಯದವರಪ ಇಂತಹ ನಿರ್ಧಾರ ಕೈಗೊಳ್ಳಬಹುದು" ಎಂದು ಕಿಡಿಕಾರಿದೆ.

ಪಠ್ಯಪುಸ್ತಕದ ವಿಷಯ ಮತ್ತು ಹೆಸರಿನ ಕುರಿತು ಎನ್‌ಸಿಇಆರ್‌ಟಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಡುವಿನ ಭಿನ್ನಾಭಿಪ್ರಾಯ ಮುಂದುವರಿದಿದ್ದು, ಈ ವಿಚಾರ ಹೊಸ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.