ರಾಜ್ಯ

20 ಲಕ್ಷ ರೂ ದರೋಡೆ ಆರೋಪ: 'ನನಗೆ ಏನೂ ಗೊತ್ತಿಲ್ಲ' ಎಂದ CID ಇನ್ಸ್‌ಪೆಕ್ಟರ್; ನ್ಯಾಯಾಂಗ ಬಂಧನಕ್ಕೆ ರವಾನೆ

ಶನಿವಾರ ಮಹೇಶ್ ಕನಕಗಿರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

20 ಲಕ್ಷ ರೂ ದರೋಡೆ ಆರೋಪ: 'ನನಗೆ ಏನೂ ಗೊತ್ತಿಲ್ಲ' ಎಂದ CID ಇನ್ಸ್‌ಪೆಕ್ಟರ್; ನ್ಯಾಯಾಂಗ ಬಂಧನಕ್ಕೆ ರವಾನೆ
ಸಂಗ್ರಹ ಚಿತ್ರ
Published On :

ಬೆಂಗಳೂರು: 20 ಲಕ್ಷ ರೂ. ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಸಿಐಡಿ (CID) ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಚಾರಣೆ ವೇಳೆ ತಾನು ದರೋಡೆ ಪ್ರಕರಣದಲ್ಲಿ ಯಾವುದೇ ಪಾತ್ರ ಹೊಂದಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

ಸಿಐಡಿಯ ನರಹತ್ಯೆ ಮತ್ತು ಕಳ್ಳತನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ್ ಕನಕಗಿರಿ ಅವರನ್ನು ರಿಯಲ್ ಎಸ್ಟೇಟ್ ಏಜೆಂಟರಾದ ಕುಪೇಂದ್ರ ರೆಡ್ಡಿ ಹಾಗೂ ವಸಂತ್ ಕುಮಾರ್ ಜೊತೆಗೆ ಶುಕ್ರವಾರ ಬಂಧಿಸಲಾಗಿತ್ತು.

ಕೇರಳ ಮೂಲದ ಮೂವರು ಉದ್ಯಮಿಗಳಿಂದ ಬೆಂಗಳೂರಿನ ಹೋಟೆಲ್‌ನಲ್ಲಿ 20 ಲಕ್ಷ ರೂ. ದರೋಡೆ ನಡೆಸಿದ ಆರೋಪ ಇವರ ಮೇಲಿದೆ.

ಶನಿವಾರ ಮಹೇಶ್ ಕನಕಗಿರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ವಿಚಾರಣೆ ವೇಳೆ, “ನನಗೆ ಕುಪೇಂದ್ರ ರೆಡ್ಡಿ ಪರಿಚಯವಿದ್ದ ಕಾರಣ ಅವರೊಂದಿಗೆ ತೆರಳಿದ್ದೆ. ದರೋಡೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಪೊಲೀಸರು ತಿಳಿಸಿದ ಬಳಿಕವೇ ಘಟನೆಯ ಬಗ್ಗೆ ಗೊತ್ತಾಯಿತು,” ಎಂದು ಕನಕಗಿರಿ ಹೇಳಿರುವುದಾಗಿ ತಿಳಿದುಬಂದಿದೆ.

ಇದೇ ವೇಳೆ ತನ್ನ ಪೊಲೀಸ್ ಗುರುತಿನ ಚೀಟಿ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಇಟ್ಟಿದ್ದು, ಅದನ್ನು ಆರೋಪಿಗಳು ತೆಗೆದುಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ಆದರೆ, ಉಳಿದ ಇಬ್ಬರು ಆರೋಪಿಗಳು ಮಾತ್ರ ದರೋಡೆ ಕುರಿತು ಇನ್ಸ್‌ಪೆಕ್ಟರ್‌ಗೆ ಸಂಪೂರ್ಣ ಮಾಹಿತಿ ಇತ್ತು ಹಾಗೂ ಅವರ ಸೂಚನೆಯ ಮೇರೆಗೆ ಕೃತ್ಯ ಎಸಗಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲು ಪೊಲೀಸರು ಇನ್ಸ್‌ಪೆಕ್ಟರ್‌ನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಕರೆ ವಿವರಗಳು (Call Records) ಮತ್ತು ಚಾಟ್‌ಗಳ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದಿದ್ದು, ಡಿಜಿಟಲ್ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.