ಬ್ಯಾಂಕ್ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ 4.53 ಲಕ್ಷ ರೂ ದರೋಡೆ: ಕೇವಲ ಅರ್ಧ ಗಂಟೆಯಲ್ಲಿ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು; Video
ಮಹಾರಾಷ್ಟ್ರದ ನಾಗ್ಪುರದಲ್ಲಿ ಸಿನಿಮಾ ಶೈಲಿಯ ಬ್ಯಾಂಕ್ ದರೋಡೆ ಯತ್ನವೊಂದು ನಡೆದಿದ್ದು, ಬ್ಯಾಂಕ್ ಸಿಬ್ಬಂದಿ ಕಣ್ಣಿಗೆ ಅಚ್ಚಖಾರ ಪುಡಿ ಎರಚಿ ₹4.53 ಲಕ್ಷ ಲೂಟಿ ಮಾಡಿದ್ದ ಕಳ್ಳನನ್ನು ಪೊಲೀಸರು ಕೇವಲ 30 ನಿಮಿಷಗಳಲ್ಲಿ ಸಿನಿಮೀಯ ಮಾದರಿಯಲ್ಲೇ ಬೆನ್ನಟ್ಟಿ ಹಿಡಿದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನಾಗ್ಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಗ್ಪುರದಲ್ಲಿ ಸಿನಿಮಾ ಶೈಲಿಯ ಬ್ಯಾಂಕ್ ದರೋಡೆ ಯತ್ನವೊಂದು ನಡೆದಿದ್ದು, ಬ್ಯಾಂಕ್ ಸಿಬ್ಬಂದಿ ಕಣ್ಣಿಗೆ ಅಚ್ಚಖಾರ ಪುಡಿ ಎರಚಿ ₹4.53 ಲಕ್ಷ ಲೂಟಿ ಮಾಡಿದ್ದ ಕಳ್ಳನನ್ನು ಪೊಲೀಸರು ಕೇವಲ 30 ನಿಮಿಷಗಳಲ್ಲಿ ಸಿನಿಮೀಯ ಮಾದರಿಯಲ್ಲೇ ಬೆನ್ನಟ್ಟಿ ಹಿಡಿದಿದ್ದಾರೆ. ನಾಗ್ಪುರದ ಸಕ್ಕರದರಾ ಪ್ರದೇಶದಲ್ಲಿರುವ ಎಸ್‌ಬಿಐ ಶಾಖೆಯಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಬಂಧಿತ ಆರೋಪಿಯನ್ನು ಸೂರಜ್ ಬೋಜ್‌ರಾಜ್ ಬೋರ್ಕರ್ ಎಂದು ಗುರುತಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ನಾಗ್ಪುರದ ಸಕ್ಕರದರಾ ವ್ಯಾಪ್ತಿಯ ಭಾಂಡೆ ಪ್ಲಾಟ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಶಾಖೆಯಲ್ಲಿ ಸಾಯಂಕಾಲ, ಬ್ಯಾಂಕ್ ಸಿಬ್ಬಂದಿ ಎಟಿಎಂನಿಂದ ನಗದು ಸಂಗ್ರಹಿಸಿ ತಂದು ಕ್ಯಾಶ್ ಕೌಂಟರ್‌ನಲ್ಲಿ ಇಡುತ್ತಿದ್ದಾಗ, ಗ್ರಾಹಕನ ಸೋಗಿನಲ್ಲಿ ಮುಖ ಮುಚ್ಚಿಕೊಂಡು ಬಂದಿದ್ದ ಆರೋಪಿಯು ಹಠಾತ್ತನೆ ಸುಮಾರು ಅರ್ಧ ಕೆಜಿಯಷ್ಟು ತಂದಿದ್ದ ಖಾರದ ಪುಡಿಯನ್ನು ಸಿಬ್ಬಂದಿಯ ಕಣ್ಣಿಗೆ ಎರಚಿದ್ದಾನೆ. ಕಣ್ಣು ಉರಿಯಿಂದ ಸಿಬ್ಬಂದಿ ಚೀರಾಡುತ್ತಿದ್ದಂತೆ ಕೌಂಟರ್ ಮೇಲಿದ್ದ ₹4.53 ಲಕ್ಷ ಹಣದ ಬ್ಯಾಗ್ ಅನ್ನು ಎಗರಿಸಿ ಆರೋಪಿ ಸೂರಜ್ ಬೋಜ್‌ರಾಜ್ ಬೋರ್ಕರ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಮುಂದುವರೆದು, ಕಳ್ಳತನ ನಡೆದ ತಕ್ಷಣ ಬ್ಯಾಂಕ್ ಸಿಬ್ಬಂದಿ ಜೋರಾಗಿ ಕೂಗಾಡಿ ಆತನನ್ನು ಬೆನ್ನಟ್ಟಿದ್ದಾರೆ. ಇದೇ ವೇಳೆ ಸುತ್ತಮುತ್ತ ಗಸ್ತಿನಲ್ಲಿದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೇವಲ 30 ನಿಮಿಷಗಳಲ್ಲಿ, ಬ್ಯಾಂಕ್‌ನಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಏತನ್ಮಧ್ಯೆ, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಸೂರಜ್ ಬೋರ್ಕರ್ ಷೇರು ಮಾರುಕಟ್ಟೆಯಲ್ಲಿ (Stock Market) ಭಾರಿ ಹಣ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದ ಎಂದು ತಿಳಿದುಬಂದಿದೆ. ಸಾಲ ತೀರಿಸಲು ಮತ್ತು ಸುಲಭವಾಗಿ ಹಣ ಗಳಿಸುವ ದುರಾಸೆಯಿಂದ ಈ ಕೃತ್ಯ ಎಸಗಿದ್ದಾನೆ.
ಆರೋಪಿಯ ಹಿನ್ನೆಲೆ ಏನು?
ಬಂಧಿತ ಆರೋಪಿಯನ್ನು 28 ವರ್ಷದ ಸೂರಜ್ ಭೋಜರಾಜ್ ಬೋರ್ಕರ್ ಎಂದು ಗುರುತಿಸಲಾಗಿದೆ. ಈತ ಬಿಎಸ್‌ಸಿ ಪದವೀಧರನಾಗಿದ್ದು, ಸದ್ಯ ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ ಹಾಗೂ ಶೇರ್ ಮಾರ್ಕೆಟ್‌ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದರಿಂದ ಈ ದರೋಡೆಗೆ ಸ್ಕೆಚ್ ಹಾಕಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಇಡೀ ದರೋಡೆಯ ದೃಶ್ಯಾವಳಿಗಳು ಬ್ಯಾಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



