ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಕ್ಕೂ ಯೋಗಾಭ್ಯಾಸ ವಿಸ್ತರಣೆ, ಯೋಗ ಗುರುಗಳ ನೇಮಕ: ಆರೋಗ್ಯ ಸಚಿವ ಯು.ಟಿ ಖಾದರ್; Video
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅಗತ್ಯವಾಗಿದ್ದು, ನಾವು ಮಾತ್ರವಲ್ಲ ಎಲ್ಲರೂ ಯೋಗವನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಾಗ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಯು ಟಿ ಖಾದರ್ ಹೇಳಿದರು.

ಬೆಂಗಳೂರು: ಆರೋಗ್ಯಕರವಾದ ಸಮಾಜದ ನಿರ್ಮಾಣಕ್ಕೆ ಯೋಗಾಭ್ಯಾಸ ಮಾಡುವುದು ಅತ್ಯಂತ ಅಗತ್ಯ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಇಂದು ರಾಜ್ಯದ ಆಡಳಿತ ಶಕ್ತಿಕೇಂದ್ರ ವಿಧಾನಸೌಧ ಮುಂದೆ ಸರ್ಕಾರದ ಆಯುಷ್ ಇಲಾಖೆ ವತಿಯಿಂದ 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಎಂಬ ಘೋಷವಾಕ್ಯದಡಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅಗತ್ಯವಾಗಿದ್ದು, ನಾವು ಮಾತ್ರವಲ್ಲ ಎಲ್ಲರೂ ಯೋಗವನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಾಗ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇಂದು ಯೋಗ ನಮ್ಮ ದೇಶ ಮಾತ್ರವಲ್ಲ ವಿದೇಶಕ್ಕೂ ಹಬ್ಬಿದೆ. ಯೋಗ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ, ಪ್ರತಿದಿನವೂ ಯೋಗದಿನವಾಗಬೇಕು ಎಂದರು.
ನಾವು ಮುಂದಿನ ಪೀಳಿಗೆಗೆ ಯೋಗ ಮಾಡುವುದನ್ನು ವರ್ಗಾಯಿಸಬೇಕು. ಗ್ರಾಮ ಗ್ರಾಮಕ್ಕೂ ಯೋಗ ವಿಸ್ತರಿಸುತ್ತೇವೆ. ಈಗಾಗಲೇ ಹಲವು ಗ್ರಾಮದಲ್ಲಿ ಯೋಗ ಗುರುಗಳಿದ್ದಾರೆ. ಇದನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕಿದೆ. ಸಿಎಂ ಮುಂಬೈಯಲ್ಲಿದ್ದಾರೆ. ಡಿಸಿಎಂಗೆ ಅನಾರೋಗ್ಯ ಅದಕ್ಕೆ ಕಾರ್ಯಕ್ರಮಕ್ಕೆ ಬಂದಿಲ್ಲ. ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ರಾಜ್ಯಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ಸಚಿವ ಖಾದರ್ ತಿಳಿಸಿದರು.
ಇದೇ ವೇಳೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯ ಕೋರಿ ಮಾತನಾಡಿದರು. ಯೋಗ, ಸಾವಿರಾರು ವರ್ಷಗಳ ಪುರಾತನವಾದದ್ದು, ಮಾನವನ ಆರೋಗ್ಯಕ್ಕೆ ಮಾರ್ಗ ತೋರಿಸಿದ್ದು ಯೋಗ. ಮನಸ್ಸು, ಶರೀರದ ಏಕತೆಗೆ ಯೋಗ ಮುಖ್ಯ. ಇಂದು ಜಗತ್ತು ಸ್ಪರ್ಧೆಗೆ ಬಿದ್ದಿದೆ.
ಇದರಿಂದ ಮಾನಸಿಕ ಮತ್ತು ಶರೀರದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮೋದಿಯವರು ಅಂತರಾಷ್ಟ್ರೀಯ ಯೋಗ ದಿನ ಅಂತ 12 ವರ್ಷಗಳ ಹಿಂದೆ ಘೋಷಣೆ ಮಾಡಿದರು. ಯುವ ಸಮೂಹ ಪ್ರತಿದಿನ ಯೋಗಕ್ಕೆ ಸಮಯ ಮೀಸಲಿಡಬೇಕು. ಉತ್ತಮ ಆರೋಗ್ಯಕ್ಕಾಗಿ ಯೋಗ ಎಂಬ ಘೋಷಣೆ ಅನ್ವಯ ಯೋಗ ದಿನ ಆಚರಿಸಲಾಗುತ್ತದೆ. ಯೋಗವನ್ನು ಜೀವನದ ಅಂಗವಾಗಿ ಮಾಡಿಕೊಳ್ಳಬೇಕಾಗಿದೆ. ಈ ಕುರಿತು ಕರ್ನಾಟಕ ಸರ್ಕಾರ ಯೋಗದ ಪ್ರಚಾರ ಹಾಗೂ ಜಾಗೃತಿ ಮೂಡಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಟಿಯರಾದ ಸುಧಾರಾಣಿ, ಹರಿಪ್ರಿಯಾ, ನಟ ವಶಿಷ್ಠ ಸಿಂಹ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಯೋಗ ಸಂಘಟನೆಗಳಿಂದ ಯೋಗ ಪ್ರದರ್ಶನ
ಆಯುಷ್ ಇಲಾಖೆಯಿಂದ ಇಂದು 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಗಿದೆ. ವಿಧಾನಸೌಧ ಮುಂಭಾಗದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಹಲವು ಯೋಗ ಸಂಘಟನೆಗಳಿಂದ ಯೋಗ ಪ್ರದರ್ಶನ ನಡೆದಿದೆ.
ಮಲ್ಲಗಂಭ ಪ್ರದರ್ಶನ
ಯೋಗ ಪಟುಗಳ ಗಮನ ಸೆಳೆದ ಮಲ್ಲಗಂಭ ಪ್ರದರ್ಶನ, ಬೆಳಗಾವಿ ಮಲ್ಲಗಂಭ ಅಕಾಡೆಮಿಯಿಂದ ಪ್ರದರ್ಶನ ನಡೆದಿದ್ದು, ಏಳುಬಾರಿ ವಿಶ್ವದಾಖಲೆ ಮಾಡಿರುವ ಅಕಾಡೆಮಿ ಹಲವು ದೇಶಗಳಲ್ಲಿ ಪ್ರದರ್ಶನ ನೀಡಿದೆ. ಸರ್ಕಾರಿ ಶಾಲೆಯ ಶಿಕ್ಷಕರ ನೇತೃತ್ವದ ಸರ್ಕಾರಿ ಶಾಲಾ ಮಕ್ಕಳ ಮಲ್ಲಗಂಭ ತಂಡ ಇಂದು ವಿಧಾನಸೌಧದ ಮುಂಭಾಗ ಮಲ್ಲಗಂಭ ಪ್ರದರ್ಶನ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



