ವಾಹನ ಪ್ರವೇಶ ನಿರ್ಬಂಧ, ಬೀದಿ ವ್ಯಾಪಾರಿಗಳ ತೆರವಿಗೆ ವಿರೋಧ: ಕೆ.ಆರ್ ಮಾರುಕಟ್ಟೆಯಲ್ಲಿ ರೈತರ ಪ್ರತಿಭಟನೆ, ಆಕ್ರೋಶ
ಮಾರುಕಟ್ಟೆಯಲ್ಲಿದ್ದ ಮುಕ್ತ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಲಾಗಿದೆ. ಸಗಟು ಮಾರುಕಟ್ಟೆ ಪ್ರದೇಶದಿಂದ ದೂರದಲ್ಲೇ ವಾಹನಗಳನ್ನು ನಿಲ್ಲಿಸುವಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಬೆಂಗಳೂರು: ಕೃಷಿ ಉತ್ಪನ್ನಗಳನ್ನು ಹೊತ್ತೊಯ್ಯುವ ವಾಹನಗಳ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಹಾಗೂ ಬೀದಿ ವ್ಯಾಪಾರಿಗಳ ತೆರವು ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಸದಸ್ಯರು ಮಂಗಳವಾರ ಕೆ.ಆರ್. ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಿಂದ ಕೆಲ ಗಂಟೆಗಳ ಕಾಲ ಕೆ.ಆರ್. ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಾರ-ವಹಿವಾಟು ಚಟುವಟಿಕೆಗಳು ಸ್ಥಗಿತಗೊಂಡವು.
ಹೊಸ ಪಾರ್ಕಿಂಗ್ ವ್ಯವಸ್ಥೆ ಜಾರಿಯಾದ ಬಳಿಕ ರೈತರು ಮತ್ತು ವ್ಯಾಪಾರಿಗಳು ತಮ್ಮ ಕೃಷಿ ಉತ್ಪನ್ನಗಳನ್ನು ಹೊತ್ತ ವಾಹನಗಳನ್ನು ಮಾರುಕಟ್ಟೆ ಆವರಣದೊಳಗೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಾರುಕಟ್ಟೆಯಲ್ಲಿದ್ದ ಮುಕ್ತ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಲಾಗಿದೆ. ಸಗಟು ಮಾರುಕಟ್ಟೆ ಪ್ರದೇಶದಿಂದ ದೂರದಲ್ಲೇ ವಾಹನಗಳನ್ನು ನಿಲ್ಲಿಸುವಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ ಎಂದು ಕೊಡಿಹಳ್ಳಿ ಚಂದ್ರಶೇಖರ್ ಅವರು ತಿಳಿಸಿದರು.
ರೈತರು ಮತ್ತು ವ್ಯಾಪಾರಿಗಳ ವಾಹನಗಳನ್ನು ಮಾರುಕಟ್ಟೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಹೆಚ್ಚುವರಿ ವೆಚ್ಚ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಹೊಸದಾಗಿ ಆರಂಭಿಸಿರುವ ಪಾರ್ಕಿಂಗ್ ವಲಯಕ್ಕೆ ಎಲ್ಲಾ ವಾಹನಗಳು ಹೋಗುವಂತೆ ಮಾಡಲು ಉದ್ದೇಶಪೂರ್ವಕವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವವರಿಗೆ ಲಾಭವಾಗುತ್ತಿದೆ ಎಂದು ಆರೋಪಿಸಿದರು.
ತುರ್ತು ಪರಿಸ್ಥಿತಿಯಲ್ಲಿ ಅಗ್ನಿಶಾಮಕ ವಾಹನಗಳು ಹಾಗೂ ಆಂಬುಲೆನ್ಸ್‌ಗಳು ಕೂಡ ಮಾರುಕಟ್ಟೆ ಪ್ರದೇಶಕ್ಕೆ ಸುಲಭವಾಗಿ ತಲುಪಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವುದರಿಂದ ಅವರ ಜೀವನೋಪಾಯಕ್ಕೂ ಹೊಡೆತ ಬಿದ್ದಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಪ್ರತಿಭಟನೆಯ ಬಳಿಕ ಸಂಘದ ಮುಖಂಡರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರನ್ನು ಭೇಟಿ ಮಾಡಿ, ರೈತರು ಹಾಗೂ ವ್ಯಾಪಾರಿಗಳ ವಾಹನಗಳಿಗೆ ಮಾರುಕಟ್ಟೆ ಪ್ರವೇಶದ ಮೇಲಿನ ನಿರ್ಬಂಧಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಮಾರುಕಟ್ಟೆ ಪ್ರದೇಶದಲ್ಲಿರುವ ಸಣ್ಣ ವ್ಯಾಪಾರಿಗಳು ಹಾಗೂ ಬೀದಿ ವ್ಯಾಪಾರಿಗಳಿಗೆ ಅಲ್ಪ ಮೊತ್ತದ ಶುಲ್ಕ ಪಡೆದು, ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಬೆಂಗಳೂರು ನಗರ ಕೇಂದ್ರ ಪಾಲಿಕೆಗೆ ಮನವಿ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



