ಸಿಕ್ಕಿಂ ಗಡಿಗೆ ಹೋದ ಭಾರತೀಯ ವೈದ್ಯನಿಗೆ 'ಚೀನಾ ರೋಮಿಂಗ್' ಶಾಕ್; ಭಾರತದಲ್ಲೇ ಇದ್ದರೂ 'Welcome to China' ಸಂದೇಶ; Telecom ಲೋಪ ಬಯಲು..!
ವೈದ್ಯರಾದ ಡಾ. ಸುಂದರ್ ಶಂಕರನ್ ಅವರು ಸಿಕ್ಕಿಂ ಪ್ರವಾಸದ ವೇಳೆ ಭಾರತ-ಚೀನಾ ಗಡಿಯ ಸಮೀಪದ ನಾಥು ಲಾ ಪಾಸ್‌ನಲ್ಲಿ ಕೆಲವೇ ನಿಮಿಷಗಳು ತಂಗಿದ್ದರು. ಆದರೆ, ಬಳಿಕ ಅವರಿಗೆ ಬಂದ ಮೊಬೈಲ್ ಬಿಲ್‌ನಲ್ಲಿ ಚೀನಾದಲ್ಲಿ ಸೇವೆ ಬಳಸಿದಂತೆ ಅಂತಾರಾಷ್ಟ್ರೀಯ ರೋಮಿಂಗ್ ಶುಲ್ಕ ವಿಧಿಸಲಾಗಿತ್ತು.

ಬೆಂಗಳೂರು: ಸಿಕ್ಕಿಂನ ನಾಥು ಲಾ ಪಾಸ್‌ಗೆ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳಿದ್ದ ಭಾರತೀಯ ವೈದ್ಯರೊಬ್ಬರಿಗೆ ಅವರು ಚೀನಾಕ್ಕೆ ತೆರಳಿದ್ದಾರೆಯೆಂಬ ನೆಪದಲ್ಲಿ ಅಂತಾರಾಷ್ಟ್ರೀಯ ರೋಮಿಂಗ್ ಶುಲ್ಕ ವಿಧಿಸಿರುವ ಘಟನೆ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆ ಗಡಿ ಪ್ರದೇಶಗಳಲ್ಲಿ ಟೆಲಿಕಾಂ ಜಾಲದ ದುರ್ಬಲತೆ ಮತ್ತು ಗ್ರಾಹಕರಿಗೆ ಆಗುವ ಅನ್ಯಾಯದ ಕುರಿತ ಚರ್ಚೆ ಮುನ್ನೆಲೆಗೆ ತಂದಿದೆ.
ವೈದ್ಯರಾದ ಡಾ. ಸುಂದರ್ ಶಂಕರನ್ ಅವರು ಸಿಕ್ಕಿಂ ಪ್ರವಾಸದ ವೇಳೆ ಭಾರತ-ಚೀನಾ ಗಡಿಯ ಸಮೀಪದ ನಾಥು ಲಾ ಪಾಸ್‌ನಲ್ಲಿ ಕೆಲವೇ ನಿಮಿಷಗಳು ತಂಗಿದ್ದರು. ಆದರೆ, ಬಳಿಕ ಅವರಿಗೆ ಬಂದ ಮೊಬೈಲ್ ಬಿಲ್‌ನಲ್ಲಿ ಚೀನಾದಲ್ಲಿ ಸೇವೆ ಬಳಸಿದಂತೆ ಅಂತಾರಾಷ್ಟ್ರೀಯ ರೋಮಿಂಗ್ ಶುಲ್ಕ ವಿಧಿಸಲಾಗಿತ್ತು. ತಾವು ಭಾರತ ಭೂಭಾಗದೊಳಗೇ ಇದ್ದರೂ ಈ ರೀತಿಯ ಬಿಲ್ ಬಂದಿರುವುದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI)ದ ಗಮನ ಸೆಳೆದಿದ್ದಾರೆ.
“ನಾನು ಈ ವರ್ಷ ಚೀನಾಕ್ಕೆ ಹೋಗಿಲ್ಲ. ಸಿಕ್ಕಿಂನ ಚೀನಾ ಗಡಿಯ ಬಳಿ ಇದ್ದೆ ಎಂಬುದು ಸತ್ಯ. ಆದರೆ, ಭಾರತದಲ್ಲೇ ಇದ್ದಾಗ ಚೀನಾ ರೋಮಿಂಗ್ ಶುಲ್ಕ ಪಾವತಿಸಬೇಕಾದ ಪರಿಸ್ಥಿತಿ ಏಕೆ? ಭಾರತೀಯ ಟೆಲಿಕಾಂ ಜಾಲ ಇಷ್ಟು ದುರ್ಬಲವಾಗಿದೆಯೇ? ಚೀನಾದ ನೆಟ್‌ವರ್ಕ್ ಸಿಗ್ನಲ್ ಹಿಡಿದ ಕಾರಣಕ್ಕೆ ನನಗೆ ಅಂತಾರಾಷ್ಟ್ರೀಯ ರೋಮಿಂಗ್ ಶುಲ್ಕ ವಿಧಿಸಲಾಗಿದೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಡಾ. ಶಂಕರನ್ ಅವರ ಈ ಪೋಸ್ಟ್ ವೈರಲ್ ಆಗಿದ್ದು, ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು 2015ರಲ್ಲಿ ಅಸ್ಸಾಂ ಮತ್ತು ಮೇಘಾಲಯ ಪ್ರವಾಸದ ವೇಳೆ ತಮ್ಮ ತಂಡದ ಹಲವರಿಗೆ “Welcome to Bangladesh” ಎಂಬ ಸಂದೇಶ ಬಂದಿದ್ದು, ಅಂತಾರಾಷ್ಟ್ರೀಯ ರೋಮಿಂಗ್ ಶುಲ್ಕ ವಿಧಿಸಲಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ಇನ್ನೊಬ್ಬರು ಗಡಿ ಪ್ರದೇಶಗಳಲ್ಲಿ ಈ ರೀತಿಯ ಘಟನೆಗಳು ಹಲವು ಬಾರಿ ನಡೆದಿದ್ದು, ಸೇವಾ ಪೂರೈಕೆದಾರರನ್ನು ಸಂಪರ್ಕಿಸಿದರೆ ಹಣ ಮರುಪಾವತಿ ಸಿಗುತ್ತದೆ ಎಂದು ಹೇಳಿದ್ದಾರೆ.
ಗಡಿ ಪ್ರದೇಶಗಳಲ್ಲಿ ಕೆಲವೊಮ್ಮೆ ನೆರೆ ರಾಷ್ಟ್ರಗಳ ಮೊಬೈಲ್ ಸಿಗ್ನಲ್‌ಗಳು ಭಾರತೀಯ ನೆಟ್‌ವರ್ಕ್‌ಗಿಂತ ಹೆಚ್ಚು ಬಲವಾಗಿ ಕಾರ್ಯನಿರ್ವಹಿಸುವ ಕಾರಣ, ಬಳಕೆದಾರರ ಮೊಬೈಲ್‌ಗಳು ಸ್ವಯಂಚಾಲಿತವಾಗಿ ವಿದೇಶಿ ಜಾಲಕ್ಕೆ ಸಂಪರ್ಕ ಸಾಧಿಸುವ ಸಾಧ್ಯತೆ ಇದೆ. ಇದರಿಂದ ಬಳಕೆದಾರರಿಗೆ ತಿಳಿಯದೆಯೇ ಅಂತಾರಾಷ್ಟ್ರೀಯ ರೋಮಿಂಗ್ ಶುಲ್ಕ ವಿಧಿಸಲಾಗುತ್ತದೆ.
ಡಾ. ಶಂಕರನ್ ಅವರು ತಮ್ಮ ಟೆಲಿಕಾಂ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿದ ಬಳಿಕ ವಿಧಿಸಲಾಗಿದ್ದ ಶುಲ್ಕವನ್ನು ಮರುಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, “ಗಡಿಗೆ ಭೇಟಿ ನೀಡಿದ ಕಾರಣಕ್ಕೆ ಅಂತಾರಾಷ್ಟ್ರೀಯ ರೋಮಿಂಗ್ ಶುಲ್ಕ ಹೇಗೆ ವಿಧಿಸಬಹುದು?” ಎಂದು ಪ್ರಶ್ನಿಸಿದ್ದಾರೆ.
ಸಿಕ್ಕಿಂ ಸೇರಿದಂತೆ ಗಡಿ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ, ಭಾರತೀಯ ಟೆಲಿಕಾಂ ಕಂಪನಿಗಳು ಇಂತಹ ಅನಗತ್ಯ ಶುಲ್ಕಗಳಿಂದ ಗ್ರಾಹಕರನ್ನು ರಕ್ಷಿಸಲು ಸಮರ್ಪಕ ವ್ಯವಸ್ಥೆ ಹೊಂದಿದ್ದಾರೆಯೇ ಎಂಬ ಪ್ರಶ್ನೆ ಈಗ ಮತ್ತೆ ಚರ್ಚೆಗೆ ಬಂದಿದೆ. TRAI ಈ ಕುರಿತು ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



