ಹೈಕಮಾಂಡ್ ಬಾಗಿಲಿನಲ್ಲಿ ಕಾಡಿ-ಬೇಡಿ, ಅತ್ತು-ಕರೆದು ಸಿಎಂ ಸೀಟು ಗಿಟ್ಟಿಸಿಕೊಂಡ DKS! ಹನಿಮೂನ್ ಪೀರಿಯಡ್ ಕೂಡಾ ಕೊಡ್ತಿಲ್ಲ; ಆರ್. ಅಶೋಕ್ ಲೇವಡಿ
'ಅಶೋಕ್ ಕಸ ಮಾಫಿಯಾ ಗ್ಯಾಂಗ್‌ನ ವಕ್ತಾರ. ನಾನು ಸಿಎಂ ಆಗಿರುವುದನ್ನು ಸಹಿಸಲಾಗದೇ ಅಸೂಯೆ ರಾಜಕೀಯ ಮಾಡ್ತಿದ್ದಾರೆ ಎಂದು ಮುಖ್ಯಮಂತ್ರಿ ಈ ಹಿಂದೆ ಹೇಳಿದ್ದರು. ಈ ಹೇಳಿಕೆಗೆ ಈಗ ಅಶೋಕ್ ತಿರುಗೇಟು ನೀಡಿದ್ದಾರೆ.

ಬೆಂಗಳೂರು: 'ಕಸದ ಟೆಂಡರ್ ನಲ್ಲಿ 10 ಸಾವಿರ ಕೋಟಿ ಕಿಕ್ ಬ್ಯಾಕ್ ಆರೋಪ ವಿಚಾರದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಣ ವಾಕ್ಸಮರ ತೀವ್ರಗೊಂಡಿದೆ.
'ಅಶೋಕ್ ಕಸ ಮಾಫಿಯಾ ಗ್ಯಾಂಗ್‌ನ ವಕ್ತಾರ. ನಾನು ಸಿಎಂ ಆಗಿರುವುದನ್ನು ಸಹಿಸಲಾಗದೇ ಅಸೂಯೆ ರಾಜಕೀಯ ಮಾಡ್ತಿದ್ದಾರೆ ಎಂದು ಮುಖ್ಯಮಂತ್ರಿ ಈ ಹಿಂದೆ ಹೇಳಿದ್ದರು. ಈ ಹೇಳಿಕೆಗೆ ಈಗ ಅಶೋಕ್ ತಿರುಗೇಟು ನೀಡಿದ್ದಾರೆ.
ಹೈಕಮಾಂಡ್ ಬಾಗಿಲಿನಲ್ಲಿ ಕಾಡಿ-ಬೇಡಿ, ಅತ್ತು- ಕರೆದು ಸಿಎಂ ಸೀಟು ಗಿಟ್ಟಿಸಿಕೊಂಡ ಡಿಕೆ ಶಿವಕುಮಾರ್ ಗೆ ವಿರೋಧ ಪಕ್ಷಗಳು ಕನಿಷ್ಠ ಹನಿಮೂನ್ ಪೀರಿಯಡ್ ಕೂಡಾ ಕೊಡ್ತಿಲ್ಲ ಅಂತಾ ಲೇವಡಿ ಮಾಡಿದ್ದಾರೆ.
ಹೌದು. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಅರು ಪೋಸ್ಟ್ ಮಾಡಿದ್ದು, ಸಿಎಂ ಡಿಕೆ ಶಿವಕುಮಾರ್ ಅವರೇ, ಹೌದು, ನಾನು ಏಜೆಂಟ್ ಆಗಿಯೇ ಮಾತನಾಡುತ್ತಿದ್ದೇನೆ! ಆದರೆ ನಿಮ್ಮ ತರಹ ಯಾವುದೋ "ಮಾಫಿಯಾ" ಹಿತಾಸಕ್ತಿ ಕಾಯುವ ಕಮಿಷನ್ ಏಜೆಂಟ್ ಆಗಿ ಅಲ್ಲ. ಕರ್ನಾಟಕದ ಏಳೂವರೆ ಕೋಟಿ ಕನ್ನಡಿಗರ ಹಕ್ಕಿಗಾಗಿ, ಬೆಂಗಳೂರಿನ ಒಂದೂವರೆ ಕೋಟಿ ನಾಗರಿಕರ ಧ್ವನಿಯಾಗಿ ನಿಂತಿರುವ ಜನತಾ ಏಜೆಂಟ್ ನಾನು. ವಿಪಕ್ಷ ನಾಯಕನಾಗಿ ನಿಮ್ಮ ಲೂಟಿ-ದಂದೆಯನ್ನು ಪ್ರಶ್ನಿಸುವುದು ನನ್ನ ಸಂವಿಧಾನಬದ್ಧ ಕರ್ತವ್ಯ, ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದು ಕಿಡಿಕಾರಿದ್ದಾರೆ.
ಹೈಕಮಾಂಡ್ ಬಾಗಿಲಲ್ಲಿ ಕಾಡಿ-ಬೇಡಿ ಸಿಎಂ ಸೀಟು: ಹೈಕಮಾಂಡ್ ಬಾಗಿಲಲ್ಲಿ ಕಾಡಿ-ಬೇಡಿ, ಅತ್ತು-ಕರೆದು, ಕೊನೆಗೂ ಸಿಎಂ ಸೀಟು ಗಿಟ್ಟಿಸಿಕೊಂಡಿರುವ ತಮಗೆ ವಿಪಕ್ಷಗಳು ಕನಿಷ್ಠ 'ಹನಿಮೂನ್ ಪೀರಿಯಡ್' ಕೂಡ ಕೊಡ್ತಿಲ್ಲವಲ್ಲ ಅನ್ನೋ ಹತಾಶೆ, ಭಯ, ಆತಂಕ ನನಗೆ ಅರ್ಥವಾಗುತ್ತದೆ. ಆದರೆ ನಿಮ್ಮ ಸ್ವಂತ ಪಕ್ಷದ ಶಾಸಕರೇ ದಿನಬೆಳಗಾದರೆ ಮಾಧ್ಯಮಗಳ ಮುಂದೆ ನಿಮ್ಮ ವಿರುದ್ಧ ಅಸಮಾಧಾನದ ಜಾಗಟೆ ಬಾರಿಸುತ್ತಾ, ದೆಹಲಿಗೆ ದಂಡೆತ್ತಿ ಹೋಗುತ್ತಿರುವಾಗ ನಿಮಗೆ ಹನಿಮೂನ್ ಪೀರಿಯಡ್ ಎಲ್ಲಿಂದ ಸಿಗಬೇಕು ಡಿ.ಕೆ.ಶಿವಕುಮಾರ್ ಅವರೇ? ನಿಮ್ಮ ಮನೆಯಲ್ಲೇ ಬೆಂಕಿ ಉರಿಯುತ್ತಿರುವಾಗ ನನ್ನ ಮೇಲೆ ರಾಜಕೀಯ ಗೂಬೆ ಕೂರಿಸಬೇಡಿ ಎಂದಿದ್ದಾರೆ.
"ನಮ್ಮ ಪಾರದರ್ಶಕತೆ, ಕಾರ್ಯವೈಖರಿ ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ" ಎಂಬ ನಿಮ್ಮ ಹೇಳಿಕೆ ಶತಮಾನದ ಅತಿ ದೊಡ್ಡ ಹಾಸ್ಯ! ನಿಮ್ಮ ಹಿನ್ನೆಲೆ ಏನು, ನಿಮ್ಮ 'ಆಡಳಿತ ವೈಖರಿ'ಯ ಅಸಲಿ ಚರಿತ್ರೆ ಏನು, ತಾವು ಕಟ್ಟಿಕೊಂಡಿರುವ "ಪಾರದರ್ಶಕ ಸಾಮ್ರಾಜ್ಯ" ಎಂಥದ್ದು ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತಿದೆ. ನಿಮ್ಮಿಂದ ಪಾರದರ್ಶಕತೆಯ ಪಾಠ ಕಲಿಯುವ ದೌರ್ಭಾಗ್ಯ ಕನ್ನಡಿಗರಿಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಟೆಂಡರ್ ನಿಯಮಗಳ ಅಕ್ರಮವನ್ನು ಮುಚ್ಚಿಹಾಕಲು ನೀವೇ ಸ್ವತಃ ಉನ್ನತ ಮಟ್ಟದ ಸಮಿತಿ ರಚಿಸಿ, ವರದಿ ನೀಡಲು ಕೊಟ್ಟಿದ್ದ ಒಂದು ವಾರದ ಗಡುವು ಇಂದಿಗೆ ಮುಕ್ತಾಯವಾಗಿದೆ. ತಾಕತ್ತಿದ್ದರೆ, ನಿಮ್ಮಲ್ಲಿ ಕಿಂಚಿತ್ತಾದರೂ ಪಾರದರ್ಶಕತೆ ಉಳಿದಿದ್ದರೆ, ಆ ವರದಿಯನ್ನು ಅಡಗಿಸಿಡದೆ ತಕ್ಷಣ ಬಹಿರಂಗಪಡಿಸಿ! ವರದಿಯನ್ನು ಇಡೀ ರಾಜ್ಯದ ಜನರ ಮುಂದಿಡಿ. ನಿಮ್ಮ "ಅಸಲಿ ಮುಖವಾಡ" ಕಳಚಿ ಬೀಳಲಿ, ಯಾರ ಕಾರ್ಯವೈಖರಿ ಎಂಥದ್ದು ಅಂತ ಜನರೇ ತೀರ್ಮಾನಿಸಲಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



