ರಾಜ್ಯ

IAS, IPS ಅಧಿಕಾರಿಗಳ ವರ್ಗಾವಣೆ: ಗುಪ್ತಚರ ವಿಭಾಗದ ನೂತನ ಮುಖ್ಯಸ್ಥರಾಗಿ ಚಂದ್ರಗುಪ್ತ ನೇಮಕ

ಇಲ್ಲಿಯವರೆಗೆ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಲಾಭು ರಾಮ್ ಅವರ ಸ್ಥಾನಕ್ಕೆ ಚಂದ್ರಗುಪ್ತ ಅವರನ್ನು ನೇಮಿಸಲಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ ಮಾಹಿತಿ ಸಂಗ್ರಹದ ಪ್ರಮುಖ ಹೊಣೆಗಾರಿಕೆ ಅವರ ಹೆಗಲೇರಿದೆ.

IAS, IPS ಅಧಿಕಾರಿಗಳ ವರ್ಗಾವಣೆ: ಗುಪ್ತಚರ ವಿಭಾಗದ ನೂತನ ಮುಖ್ಯಸ್ಥರಾಗಿ ಚಂದ್ರಗುಪ್ತ ನೇಮಕ
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯ ಸರ್ಕಾರ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ನಡೆಸಿದ್ದು, ಹಲವು ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹೊಸ ಜವಾಬ್ದಾರಿಗಳನ್ನು ನೀಡಿದೆ.

ಈ ವರ್ಗಾವಣೆಗಳಲ್ಲಿ ಪ್ರಮುಖವಾಗಿ ರಾಜ್ಯ ಗುಪ್ತಚರ ವಿಭಾಗದ (ಇಂಟೆಲಿಜೆನ್ಸ್) ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಚಂದ್ರಗುಪ್ತ ಅವರನ್ನು ನೇಮಕ ಮಾಡಲಾಗಿದೆ.

ಇಲ್ಲಿಯವರೆಗೆ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಲಾಭು ರಾಮ್ ಅವರ ಸ್ಥಾನಕ್ಕೆ ಚಂದ್ರಗುಪ್ತ ಅವರನ್ನು ನೇಮಿಸಲಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ ಮಾಹಿತಿ ಸಂಗ್ರಹದ ಪ್ರಮುಖ ಹೊಣೆಗಾರಿಕೆ ಅವರ ಹೆಗಲೇರಿದೆ.

ಇದರ ಜೊತೆಗೆ, ಮುಖ್ಯಮಂತ್ರಿ ಕಚೇರಿಯಲ್ಲಿ ಹೊಸ ಹುದ್ದೆಯೊಂದನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ (ಕಾರ್ಯಕ್ರಮ ಮತ್ತು ಯೋಜನಾ ಅನುಷ್ಠಾನ) ಎಂಬ ಹೊಸ ಹುದ್ದೆ ರಚಿಸಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವಿಶೇಷ ಆಯುಕ್ತರಾಗಿದ್ದ ಮುನೀಶ್ ಮೌದ್ಗಿಲ್ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ. ಈ ಹುದ್ದೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯಷ್ಟೇ ಸ್ಥಾನಮಾನ ಮತ್ತು ಅಧಿಕಾರಗಳನ್ನು ನೀಡಲಾಗಿದೆ.

ಹಿರಿಯ ಐಎಎಸ್ ಅಧಿಕಾರಿ ಅಂಜುಮ್ ಪರ್ವೇಜ್ ಅವರನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ದೀಪಾ ಚೋಳನ್ ಅವರನ್ನು ಸಾರಿಗೆ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಸಾರಿಗೆ ಇಲಾಖೆಯ ಕಾರ್ಯದರ್ಶಿಯಾಗಿದ್ದ ಎನ್ ವಿ ಪ್ರಸಾದ್ ಅವರ ಸ್ಥಾನವನ್ನು ಅವರು ಅಲಂಕರಿಸಲಿದ್ದಾರೆ.

2008ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಕಾವೇರಿ ಬಿ ಬಿ ಅವರನ್ನು ನಗರಾಭಿವೃದ್ಧಿ ಇಲಾಖೆಯ ಹೊಸ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಇನ್ನೂ, ಎಂ ವಿ ವೆಂಕಟೇಶ್ ಅವರನ್ನು ಸಹಕಾರ ಸಂಘಗಳ ನಿಬಂಧಕರಾಗಿ (Registrar of Co-operative Societies) ನೇಮಕ ಮಾಡಲಾಗಿದೆ. ಸೆಲ್ವಮಣಿ ಆರ್ ಅವರಿಗೆ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರ ಜವಾಬ್ದಾರಿ ನೀಡಲಾಗಿದೆ.

ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲೂ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಣಬ್ ಮೊಹಂತಿ ಅವರನ್ನು ಅಪರಾಧ ತನಿಖಾ ಇಲಾಖೆ (CID), ವಿಶೇಷ ಘಟಕಗಳು ಹಾಗೂ ಆರ್ಥಿಕ ಅಪರಾಧ ವಿಭಾಗದ ಡಿಜಿಪಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ ಸೈಬರ್ ಕ್ರೈಂ ವಿಭಾಗದ ಡಿಜಿಪಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ.

ರಾಜ್ಯದಲ್ಲಿ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಕಚೇರಿಯಲ್ಲಿ ಹೊಸ ಹುದ್ದೆ ಸೃಷ್ಟಿಸಿರುವುದು ಹಾಗೂ ಗುಪ್ತಚರ ವಿಭಾಗಕ್ಕೆ ಹೊಸ ಮುಖ್ಯಸ್ಥರ ನೇಮಕ ರಾಜ್ಯ ಆಡಳಿತದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.