ಕರ್ನಾಟಕಕ್ಕೆ ಮುಂಗಾರು ಎಂಟ್ರಿ: ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ; yellow-orange ಅಲರ್ಟ್!
ಮುಂದಿನ ಎರಡು-ಮೂರು ದಿನಗಳಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡು ಸಂಪೂರ್ಣ ಅರಬ್ಬಿ ಸಮುದ್ರ, ಮಹಾರಾಷ್ಟ್ರದ ಕೆಲವು ಭಾಗಗಳು, ಆಂಧ್ರಪ್ರದೇಶ, ಕರ್ನಾಟಕದ ಇನ್ನಷ್ಟು ಪ್ರದೇಶಗಳು, ತಮಿಳುನಾಡು ಹಾಗೂ ಬಂಗಾಳ ಕೊಲ್ಲಿಯ ವ್ಯಾಪ್ತಿಗೆ ವಿಸ್ತರಿಸಲು ಅನುಕೂಲಕರ ವಾತಾವರಣವಿದೆ.

ಬೆಂಗಳೂರು: ಕರ್ನಾಟಕಕ್ಕೆ ನೈಋತ್ಯ ಮುಂಗಾರು ಅಧಿಕೃತವಾಗಿ ಪ್ರವೇಶಿಸಿದ್ದು, ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಿಸಿದೆ.
ಜೂನ್ 4ರಂದು ಕೇರಳ ಮತ್ತು ಕರ್ನಾಟಕಕ್ಕೆ ನೈಋತ್ಯ ಮುಂಗಾರು ಪ್ರವೇಶಿಸಿದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಎನ್. ಪುವಿಯರಸನ್ ಅವರು ಮಾತನಾಡಿ, ನೈಋತ್ಯ ಮುಂಗಾರು ಅರಬ್ಬಿ ಸಮುದ್ರದ ಕೆಲವು ಭಾಗಗಳು, ಲಕ್ಷದ್ವೀಪ, ಕೇರಳ, ಮಾಹೆ, ಕರ್ನಾಟಕದ ಕೆಲವು ಪ್ರದೇಶಗಳು, ತಮಿಳುನಾಡು, ಕೊಮೊರಿನ್ ಪ್ರದೇಶ ಹಾಗೂ ಬಂಗಾಳ ಕೊಲ್ಲಿಯ ಭಾಗಗಳಿಗೆ ವಿಸ್ತರಿಸಿದೆ.
ಮುಂದಿನ ಎರಡು-ಮೂರು ದಿನಗಳಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡು ಸಂಪೂರ್ಣ ಅರಬ್ಬಿ ಸಮುದ್ರ, ಮಹಾರಾಷ್ಟ್ರದ ಕೆಲವು ಭಾಗಗಳು, ಆಂಧ್ರಪ್ರದೇಶ, ಕರ್ನಾಟಕದ ಇನ್ನಷ್ಟು ಪ್ರದೇಶಗಳು, ತಮಿಳುನಾಡು ಹಾಗೂ ಬಂಗಾಳ ಕೊಲ್ಲಿಯ ವ್ಯಾಪ್ತಿಗೆ ವಿಸ್ತರಿಸಲು ಅನುಕೂಲಕರ ವಾತಾವರಣವಿದೆ ಎಂದು ತಿಳಿಸಿದ್ದಾರೆ.
ಹವಾಮಾನ ಇಲಾಖೆಯ ಮಾಹಿತಿಯಂತೆ, ಗೋವಾ ಸಮೀಪದ ಪೂರ್ವ-ಮಧ್ಯ ಅರಬ್ಬಿ ಸಮುದ್ರ ಭಾಗದಲ್ಲಿ ಮೇಲ್ಮಟ್ಟದ ವಾಯುಭಾರ ಕುಸಿತ (ಸೈಕ್ಲೋನಿಕ್ ಸರ್ಕ್ಯುಲೇಷನ್) ಉಂಟಾಗಿದೆ. ಜೊತೆಗೆ ಕೊಂಕಣ ಮತ್ತು ಗೋವಾ ಮೂಲಕ ಮರಾಠವಾಡದಿಂದ ಮಧ್ಯ ಅರಬ್ಬಿ ಸಮುದ್ರದವರೆಗೆ ತಗ್ಗು ಪ್ರದೇಶ (ಟ್ರಫ್) ನಿರ್ಮಾಣವಾಗಿದೆ.
ದಕ್ಷಿಣ ತೆಲಂಗಾಣ ಹಾಗೂ ಕರಾವಳಿ ಆಂಧ್ರಪ್ರದೇಶದ ಸುತ್ತಮುತ್ತಲೂ, ಉತ್ತರ ಅಂಡಮಾನ್ ಸಮುದ್ರ ಪ್ರದೇಶದಲ್ಲಿಯೂ ಮೇಲ್ಮಟ್ಟದ ವಾಯುಭಾರ ಕುಸಿತಗಳು ಸಕ್ರಿಯವಾಗಿದ್ದು, ಇವು ಮಳೆಯ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮುಂಗಾರು ಮೇ 26 ಅಥವಾ 27ರಂದು ಕೇರಳ ಪ್ರವೇಶಿಸಲಿದೆ ಎಂದು ಈ ಮೊದಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಮುಂಗಾರು ತಡವಾಗಿ ಆರಂಭವಾಗಿದೆ. ಈ ವರ್ಷ ಎಲ್ ನಿನೋ ಪರಿಣಾಮದಿಂದ ಮುಂಗಾರು ದುರ್ಬಲವಾಗುವ ಸಾಧ್ಯತೆಯಿದೆ ಎಂದೂ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಆದಾಗ್ಯೂ, ಮುಂಗಾರು ಪ್ರವೇಶದೊಂದಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಚಟುವಟಿಕೆಗಳು ಹೆಚ್ಚಾಗಲಿದ್ದು, ರೈತರು ಹಾಗೂ ಸಾರ್ವಜನಿಕರು ಹವಾಮಾನ ಇಲಾಖೆಯ ಮುನ್ಸೂಚನೆಗಳತ್ತ ಗಮನ ಹರಿಸುವಂತೆ ಸೂಚಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



