ಮುಂಗಾರು ಹಿಂತೆಗೆತ ಆರಂಭ; Arnab ಚಂಡಮಾರುತ ಭೀತಿ; ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ!
ಸೆಪ್ಟೆಂಬರ್ 19ರಂದು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಿಂದ ಮುಂಗಾರು ಹಿಂತೆಗೆತ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ನವದೆಹಲಿ: ದೇಶಾದ್ಯಂತ ಮಳೆ ಕೊರತೆ ನಡುವೆಯೇ ನೈಋತ್ಯ ಮುಂಗಾರು ದೇಶದ ವಾಯವ್ಯ ಭಾಗದಿಂದ ಹಿಂತೆಗೆದುಕೊಳ್ಳಲು ಆರಂಭಿಸಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸೆಪ್ಟೆಂಬರ್ 19ರಂದು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಿಂದ ಮುಂಗಾರು ಹಿಂತೆಗೆತ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದ್ದು, ಈ ಹಿಂತೆಗೆತ ಸಾಮಾನ್ಯ ದಿನಾಂಕವಾದ ಸೆಪ್ಟೆಂಬರ್ 17ರ ಸಮೀಪದಲ್ಲೇ ಆರಂಭವಾಗಿದೆ ಎಂದು ಹೇಳಿದೆ.
ಆದರೆ ಮುಂಗಾರು ಸಂಪೂರ್ಣವಾಗಿ ಅಂತ್ಯಗೊಳ್ಳುವ ಮುನ್ನ ದೇಶದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯ ಸಾಧ್ಯತೆ ಮುಂದುವರಿದಿದೆ. ಉತ್ತರ ಅಂಡಮಾನ್ ಸಮುದ್ರದಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪ್ರದೇಶವು ಸೆಪ್ಟೆಂಬರ್ 21ರ ವೇಳೆಗೆ ವಾಯುಭಾರ ಕುಸಿತವಾಗಿ, ಸೆಪ್ಟೆಂಬರ್ 22ರ ವೇಳೆಗೆ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಲವು ರಾಜ್ಯಗಳಲ್ಲಿ ಮಳೆ ಸಾಧ್ಯತೆ
ಸೆಪ್ಟೆಂಬರ್ 23ರ ಸುಮಾರಿಗೆ ದಕ್ಷಿಣ ಒಡಿಶಾ–ಉತ್ತರ ಆಂಧ್ರ ಕರಾವಳಿಯನ್ನು ದಾಟುವ ನಿರೀಕ್ಷೆಯಿದ್ದು, ಒಡಿಶಾ, ಪಶ್ಚಿಮ ಬಂಗಾಳದ ಗಂಗಾ ಬಯಲು ಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ, ಸಿಕ್ಕಿಂ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ಮುಂದಿನ ವಾರ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯನ್ನು IMD ಸೂಚಿಸಿದೆ.
ಒಟ್ಟಿನಲ್ಲಿ, 2026ರ ಮುಂಗಾರು ಹಂಗಾಮಿನಲ್ಲಿ ದೇಶದ ಒಟ್ಟಾರೆ ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದು, ವಿಶೇಷವಾಗಿ ದಕ್ಷಿಣ ಮತ್ತು ಈಶಾನ್ಯ ಭಾರತದ ಹಲವು ಪ್ರದೇಶಗಳು ಮಳೆ ಕೊರತೆ ಎದುರಿಸಿವೆ. ಮುಂಗಾರು ಹಿಂತೆಗೆತ ಆರಂಭವಾದರೂ, ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಹವಾಮಾನ ವ್ಯವಸ್ಥೆಗಳಿಂದ ಕೆಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣದಲ್ಲಿ ಸುಧಾರಣೆ ಕಾಣುವ ಸಾಧ್ಯತೆಯಿದೆ.
ಮುಂದಿನ ವಾರ ಒಣಗಾಳಿ ಪ್ರವೇಶ
ಮುಂದಿನ ವಾರ ವಾಯವ್ಯ ಹಾಗೂ ಪಶ್ಚಿಮ ಭಾರತದತ್ತ ಭಾರಿ ಪ್ರಮಾಣದ ಒಣಗಾಳಿ ಪ್ರವೇಶಿಸುವ ನಿರೀಕ್ಷೆಯಿದೆ. ಈ ಒಣಗಾಳಿ ವಾಯವ್ಯ ಭಾರತದಲ್ಲಿರುವ ಉಳಿದ ತೇವಾಂಶವನ್ನು ಕಡಿಮೆ ಮಾಡಿ, ಮುಂಗಾರು ಹಿಂತಿರುಗುವ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸುವ ಸಾಧ್ಯತೆಯಿದೆ. ಮಧ್ಯ ಮತ್ತು ಪೂರ್ವ ಭಾರತದಿಂದ ಮುಂಗಾರು ಹಿಂತಿರುಗುವಿಕೆ ಸೆಪ್ಟೆಂಬರ್ 30ರವರೆಗೆ ಆರಂಭವಾಗದಿರಬಹುದು ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಈ ಪ್ರದೇಶಗಳಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪ್ರದೇಶಗಳು ದುರ್ಬಲಗೊಂಡ ಬಳಿಕ ಮುಂಗಾರು ವಾಪಸ್ ಪ್ರಯಾಣ ಆರಂಭಿಸುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಸದ್ಯ ನೈಋತ್ಯ ಮುಂಗಾರು ಹಿಂತಿರುಗುತ್ತಿರುವ ರೇಖೆಯು ರಾಜಸ್ಥಾನದ ರಾಮಗಢ, ಮೋಹನ್‌ಗಢ, ಫಲೋದಿ ಮತ್ತು ಖಾಜುವಾಲಾ ಮೂಲಕ ಹಾದುಹೋಗುತ್ತಿದೆ.
‘Arnab’ ಚಂಡಮಾರುತ ಭೀತಿ
ಈ ನಡುವೆ, ಉತ್ತರ ಹಿಂದೂ ಮಹಾಸಾಗರದಲ್ಲಿ ಈ ವರ್ಷದ ಮೊದಲ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯೂ ಇದೆ. ಮುಂದಿನ ವಾರ ಈ ವ್ಯವಸ್ಥೆ ಒಡಿಶಾ ಮತ್ತು ಆಂಧ್ರಪ್ರದೇಶದತ್ತ ಸಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಚಂಡಮಾರುತ ರೂಪುಗೊಂಡರೆ ಅದಕ್ಕೆ ‘ಅರ್ನಬ್’ ಎಂದು ಹೆಸರಿಡುವ ಸಾಧ್ಯತೆಯಿದೆ. ಇದು 2025ರ ನವೆಂಬರ್‌ನಲ್ಲಿ ಉಂಟಾದ ‘ದಿತ್ವಾ’ ಚಂಡಮಾರುತದ ಬಳಿಕ ಈ ಪ್ರದೇಶದಲ್ಲಿ ರೂಪುಗೊಳ್ಳುತ್ತಿರುವ ಮೊದಲ ಚಂಡಮಾರುತವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



