ಆಧಾರ್ ದೃಢೀಕರಣ ವ್ಯವಸ್ಥೆಯ ಭದ್ರತೆ ಬಲಪಡಿಸಲು HMS ಉನ್ನತೀಕರಣ: ಪ್ರಿಯಾಂಕ್ ಖರ್ಗೆ!
ವಿಶ್ವಾಸಾರ್ಹ ಹಾಗೂ ಭವಿಷ್ಯದ ಅಗತ್ಯಗಳಿಗೆ ಸಜ್ಜುಗೊಳಿಸುವ ತಾಂತ್ರಿಕ ಸುಧಾರಣೆಯಾಗಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಬಳಸಲಾಗುತ್ತಿರುವ ಆಧಾರ್ ದೃಢೀಕರಣ (Aadhaar Authentication) ವ್ಯವಸ್ಥೆಯ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಹಾರ್ಡ್‌ವೇರ್ ಸೆಕ್ಯುರಿಟಿ ಮಾಡ್ಯೂಲ್ (Hardware Security Module – HSM) ಅನ್ನು ಉನ್ನತೀಕರಿಸುವ ಕಾರ್ಯವನ್ನು ಕರ್ನಾಟಕ ಸರ್ಕಾರ ಕೈಗೊಂಡಿದೆ
ಇದು ಸಾಮಾನ್ಯ ನಿರ್ವಹಣಾ ಕಾರ್ಯವಲ್ಲ; ರಾಜ್ಯದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಮತ್ತಷ್ಟು ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಭವಿಷ್ಯದ ಅಗತ್ಯಗಳಿಗೆ ಸಜ್ಜುಗೊಳಿಸುವ ತಾಂತ್ರಿಕ ಸುಧಾರಣೆಯಾಗಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
"ನಾಗರಿಕ ಸೇವೆಗಳ ಪರಿಣಾಮಕಾರಿ ವಿತರಣೆಗೆ ಸುರಕ್ಷಿತ ಡಿಜಿಟಲ್ ವ್ಯವಸ್ಥೆಗಳು ಅತ್ಯಗತ್ಯ. ಸರ್ಕಾರದ ಪ್ರಮುಖ ಡಿಜಿಟಲ್ ಮೂಲಸೌಕರ್ಯಗಳನ್ನು ಅತ್ಯಾಧುನಿಕ ಭದ್ರತಾ ಮಾನದಂಡಗಳಿಗೆ ಅನುಗುಣವಾಗಿ ನಿರಂತರವಾಗಿ ಬಲಪಡಿಸುವ ಕಾರ್ಯವನ್ನು ನಾವು ಕೈಗೊಳ್ಳುತ್ತಿದ್ದೇವೆ," ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಆಧಾರ್ ದೃಢೀಕರಣ ಸೇವೆಯಲ್ಲಿ ಬಳಸುವ ಎನ್‌ಕ್ರಿಪ್ಷನ್ ಕೀಗಳನ್ನು ಸುರಕ್ಷಿತವಾಗಿ ನಿರ್ವಹಿಸುವ ಪ್ರಮುಖ ವ್ಯವಸ್ಥೆಯಾದ ಹೆಚ್.ಎಸ್.ಎಂ (HSM) ಮೂಲಕ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಪ್ರತಿದಿನ ಸುಮಾರು 10 ರಿಂದ 12 ಲಕ್ಷ ಆಧಾರ್ ದೃಢೀಕರಣ ವ್ಯವಹಾರಗಳು ನಡೆಯುತ್ತಿವೆ. ಈ ಉನ್ನತೀಕರಣದ ಭಾಗವಾಗಿ ಇತ್ತೀಚಿನ ಭದ್ರತಾ ಪ್ಯಾಚ್‌ಗಳು, ಬಗ್ ಫಿಕ್ಸ್‌ಗಳು ಹಾಗೂ ಒ.ಇ.ಎಂ (OEM) ಬೆಂಬಲಿತ ತಂತ್ರಾಂಶ ನವೀಕರಣಗಳನ್ನು ಅಳವಡಿಸಲಾಗುತ್ತಿದೆ.
ಈ ಕಾರ್ಯವನ್ನು ಸಾರ್ವಜನಿಕ ಸೇವೆಗಳಿಗೆ ಹೆಚ್ಚಿನ ತೊಂದರೆ ಉಂಟಾಗುವಂತೆ ಜುಲೈ 31, ಆಗಸ್ಟ್ 1 ಮತ್ತು ಆಗಸ್ಟ್ 2ರಂದು ಸಂಜೆ 6.00 ಗಂಟೆಯಿಂದ ಮರುದಿನ ಬೆಳಿಗ್ಗೆ 6.00 ಗಂಟೆಯವರೆಗೆ ಕಚೇರಿ ವೇಳೆಯ ನಂತರ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದು, ಸಾರ್ವಜನಿಕರಿಗೆ ಆಗಬಹುದಾದ ಅನಾನುಕೂಲವನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸುರಕ್ಷಿತ, ವಿಶ್ವಾಸಾರ್ಹ ಮತ್ತು ಭವಿಷ್ಯೋನ್ಮುಖ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ನಾಗರಿಕರ ಡಿಜಿಟಲ್ ಮಾಹಿತಿಯ ಭದ್ರತೆ ಹಾಗೂ ಸೈಬರ್ ಸ್ಥೈರ್ಯವನ್ನು ಇನ್ನಷ್ಟು ಬಲಪಡಿಸಲು ನಾವು ನಿರಂತರವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



