HMT ಸಂಸ್ಥೆಗೆ ಬಿಗ್ ರಿಲೀಫ್: ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಬ್ರೇಕ್, ಒಕ್ಕಲೆಬ್ಬಿಸದಂತೆ ಸೂಚನೆ..!
ವಿವಾದಿತ ಉಳಿದ ಜಮೀನನ್ನು ಮಾರಾಟ, ಗುತ್ತಿಗೆ, ಪರವಾನಗಿ ನೀಡುವುದು ಅಥವಾ ಯಾವುದೇ ರೀತಿಯ ಹಕ್ಕು ಸೃಷ್ಟಿಸುವುದು ಸೇರಿದಂತೆ ಅದರ ಸ್ವರೂಪ ಬದಲಾಗುವ ಯಾವುದೇ ವ್ಯವಹಾರ ನಡೆಸುವುದಿಲ್ಲ.

ಬೆಂಗಳೂರು: ಹೆಚ್ಎಂಟಿ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ಮಧ್ಯಂತರ ಆದೇಶ ನೀಡಿರುವ ಕರ್ನಾಟಕ ಹೈಕೋರ್ಟ್, ಮುಂದಿನ ವಿಚಾರಣೆ ನಡೆಯುವವರೆಗೆ ಎಚ್‌ಎಂಟಿ ಲಿಮಿಟೆಡ್ ಅನ್ನು ತೆರವುಗೊಳಿಸಬಾರದು ಎಂದು ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದೆ.
ಅದೇ ವೇಳೆ, ಈಗಾಗಲೇ ತೃತೀಯ ವ್ಯಕ್ತಿಗಳಿಗೆ ಮಾರಾಟವಾಗಿರುವ ಜಾಗವನ್ನು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಯಾವುದೇ ಮರಗಳನ್ನು ಕಡಿಯಬಾರದು ಎಂದೂ ಹೆಚ್‌ಎಂಟಿ ಲಿಮಿಟೆಡ್‌ಗೂ ಸೂಚಿಸಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ಮಧ್ಯಂತರ ಆದೇಶ ನೀಡಿದ್ದು, ನಗರದಲ್ಲಿರುವ 430 ಎಕರೆ 21.853 ಗುಂಟೆ ಜಮೀನನ್ನು ಸರ್ಕಾರಕ್ಕೆ ಹಸ್ತಾಂತರಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಜೂನ್ 16ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಚ್‌ಎಂಟಿ ಲಿಮಿಟೆಡ್ ಹಾಗೂ ಎಚ್‌ಎಂಟಿ ಮಷಿನ್ ಟೂಲ್ಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಎಚ್‌ಎಂಟಿ ಪರ ವಕೀಲರು, ಸಂಸ್ಥೆಯ ಅಧ್ಯಕ್ಷರ ಸೂಚನೆಯಂತೆ, ವಿವಾದಿತ ಉಳಿದ ಜಮೀನನ್ನು ಮಾರಾಟ, ಗುತ್ತಿಗೆ, ಪರವಾನಗಿ ನೀಡುವುದು ಅಥವಾ ಯಾವುದೇ ರೀತಿಯ ಹಕ್ಕು ಸೃಷ್ಟಿಸುವುದು ಸೇರಿದಂತೆ ಅದರ ಸ್ವರೂಪ ಬದಲಾಗುವ ಯಾವುದೇ ವ್ಯವಹಾರ ನಡೆಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಈ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು.
ಅರ್ಜಿಯಲ್ಲಿ, ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 64(ಎ) ಅಡಿಯಲ್ಲಿ ಜೂನ್ 15ರಂದು ಆದೇಶ ಹೊರಡಿಸಲಾಗಿದ್ದು, ಅದರ ಪ್ರತಿಯನ್ನು ಜುಲೈ 2ರಂದು ಅರ್ಜಿದಾರರಿಗೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಈ ವರ್ಷದ ಜನವರಿ 6ರಂದು ಆದೇಶ ಕಾಯ್ದಿರಿಸಲಾಗಿದ್ದರೂ, ಹಲವು ತಿಂಗಳ ಬಳಿಕ ತಡವಾಗಿ ಆದೇಶ ಹೊರಡಿಸಿರುವುದು ದುರುದ್ದೇಶಪೂರಿತ ಕ್ರಮವನ್ನು ಸೂಚಿಸುತ್ತದೆ ಎಂದು ಎಚ್‌ಎಂಟಿ ಆರೋಪಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗೆ ಈ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



