Bescom ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: ಇನ್ಮುಂದೆ ಮನೆ ಬಾಗಿಲಿಗೆ ಬರಲ್ಲ ಬಿಲ್; SMS- email ಮೂಲಕವೇ ರವಾನೆ..!
ಗೃಹ ಜ್ಯೋತಿ ಯೋಜನೆಯಡಿ ಮನೆ ಮನೆಗೆ ತೆರಳಿ ಗ್ರಾಹಕರ ವಿವರಗಳ ಪರಿಶೀಲನೆ ಕಾರ್ಯದಲ್ಲಿ ಮೀಟರ್ ರೀಡರ್‌ಗಳು ನಿರತರಾಗಿರುವ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (Bescom) ತನ್ನ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಜುಲೈ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮನೆ ಬಾಗಿಲಿಗೆ ಫಿಸಿಕಲ್ ವಿದ್ಯುತ್ ಬಿಲ್ ವಿತರಣೆ ಮಾಡುವುದಿಲ್ಲ. ಬದಲಾಗಿ ಗ್ರಾಹಕರಿಗೆ SMS ಹಾಗೂ ಇ-ಮೇಲ್ ಮೂಲಕವೇ ಸರಾಸರಿ ವಿದ್ಯುತ್ ಬಿಲ್ ರವಾನಿಸಲು ಮುಂದಾಗಿದೆ.
ಗೃಹ ಜ್ಯೋತಿ ಯೋಜನೆಯಡಿ ಮನೆ ಮನೆಗೆ ತೆರಳಿ ಗ್ರಾಹಕರ ವಿವರಗಳ ಪರಿಶೀಲನೆ ಕಾರ್ಯದಲ್ಲಿ ಮೀಟರ್ ರೀಡರ್‌ಗಳು ನಿರತರಾಗಿರುವ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಸ್ಕಾಂ ಪ್ರಕಟಣೆ ಪ್ರಕಾರ, ಜುಲೈ ತಿಂಗಳಿಗೆ ಗ್ರಾಹಕರಿಗೆ ಸರಾಸರಿ (Average) ಬಿಲ್ ಸಿದ್ಧಪಡಿಸಿ ಕಳುಹಿಸಲಾಗುತ್ತದೆ. ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು ಆಧರಿಸಿ ಬಿಲ್ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ನಂತರದ ಬಿಲ್ಲಿಂಗ್ ಚಕ್ರಗಳಲ್ಲಿ ನೈಜ ಮೀಟರ್ ರೀಡಿಂಗ್ ಆಧರಿಸಿ ಹೆಚ್ಚುವರಿ ಅಥವಾ ಕಡಿಮೆ ಮೊತ್ತವನ್ನು ಸರಿಹೊಂದಿಸಲಾಗುತ್ತದೆ.
ಜುಲೈ ತಿಂಗಳಲ್ಲಿ ಮೀಟರ್ ರೀಡರ್‌ಗಳು ನಿಯಮಿತವಾಗಿ ಮನೆಗಳಿಗೆ ಭೇಟಿ ನೀಡಿ ವಿದ್ಯುತ್ ಮೀಟರ್ ಪರಿಶೀಲನೆ ನಡೆಸುತ್ತಿಲ್ಲ. ಕಾರಣ, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದ ಗ್ರಾಹಕರ ವಿವರಗಳನ್ನು ಮನೆ ಮನೆಗೆ ತೆರಳಿ ಪರಿಶೀಲಿಸುವ ಕಾರ್ಯಕ್ಕೆ ಅವರನ್ನು ನಿಯೋಜಿಸಲಾಗಿದೆ.
ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್‌ವರೆಗೆ ವಿದ್ಯುತ್ ಬಳಕೆ ಮಾಡುವ ಅರ್ಹ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಮಾಹಿತಿ ಪರಿಶೀಲನೆ ಕಾರ್ಯ ನಡೆಯುತ್ತಿರುವುದರಿಂದ ಜುಲೈ ತಿಂಗಳ ಮೀಟರ್ ರೀಡಿಂಗ್ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ, ಎಲ್ಲಾ ವರ್ಗದ ಗ್ರಾಹಕರಿಗೂ ಈ ವ್ಯವಸ್ಥೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೈ ಟೆನ್ಷನ್ (HT) ಗ್ರಾಹಕರು, 40 ಎಚ್‌ಪಿ ಮತ್ತು ಅದಕ್ಕಿಂತ ಹೆಚ್ಚಿನ ಲೋ ಟೆನ್ಷನ್ (LT) ಸಂಪರ್ಕ ಹೊಂದಿರುವ ಗ್ರಾಹಕರು, ಸೌರ ಮೇಲ್ಛಾವಣಿ (Solar Rooftop) ವಿದ್ಯುತ್ ಬಳಕೆದಾರರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರು ಎಂದಿನಂತೆ ಜುಲೈ ತಿಂಗಳ ವಿದ್ಯುತ್ ಬಿಲ್‌ಗಳನ್ನು ಪಡೆಯಲಿದ್ದಾರೆ.
ಬೆಸ್ಕಾಂ, ಎಸ್‌ಎಂಎಸ್ ಅಥವಾ ಇ-ಮೇಲ್ ಮೂಲಕ ಬರುವ ಸರಾಸರಿ ಬಿಲ್‌ಗಳನ್ನು ಗ್ರಾಹಕರು ನಿಗದಿತ ಅವಧಿಯೊಳಗೆ ಪಾವತಿಸುವಂತೆ ಮನವಿ ಮಾಡಿದೆ. ಬಳಿಕದ ಬಿಲ್‌ನಲ್ಲಿ ನೈಜ ಬಳಕೆಯ ಆಧಾರದ ಮೇಲೆ ವ್ಯತ್ಯಾಸದ ಮೊತ್ತವನ್ನು ಸರಿಹೊಂದಿಸಲಾಗುವುದು ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



