ವರ್ತೂರು ವ್ಯಾಪ್ತಿಯಲ್ಲಿ ಸಿನಿಮೀಯ ಶೈಲಿಯ ಕೃತ್ಯ: ಚಲಿಸುತ್ತಿದ್ದ ವ್ಯಾನ್ ಮೇಲೆ ದಾಳಿ; ಚಾಕು ತೋರಿಸಿ 45 ಸಾವಿರ ರೂ ದರೋಡೆ..!
ಸಂಜೆ 7ರಿಂದ 7.15ರ ನಡುವೆ ಅವರು ಕೊಡತಿ ಗ್ರಾಮ ಪಂಚಾಯಿತಿ ಕಚೇರಿ ಸಮೀಪ ಕಂಪನಿಯತ್ತ ವಾಪಸಾಗುತ್ತಿದ್ದ ವೇಳೆ, ವಾಹನ ಚಾಲಕ ಅಜಯ್ ಕುಮಾರ್ ರಸ್ತೆ ಹಂಪ್ಸ್ ಬಳಿ ವಾಹನದ ವೇಗ ಕಡಿಮೆ ಮಾಡಿದ್ದಾರೆ.

ಬೆಂಗಳೂರು: ಚಲಿಸುತ್ತಿದ್ದ ತಂಪು ಪಾನೀಯಗಳ ವಿತರಣಾ ವ್ಯಾನ್‌ಗೆ ನುಗ್ಗಿದ ಮೂವರು ದರೋಡೆಕೋರರು, ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಸಿ 45,000 ರೂ. ನಗದು ದೋಚಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಡತಿಯಲ್ಲಿ ಶನಿವಾರ ಸಂಜೆ ನಡೆದಿದೆ.
ದರೋಡೆಗೊಳಗಾದವರನ್ನು 24 ವರ್ಷದ ಜಿ. ಮುನ್ನಾ ಕುಮಾರ್, ಅಜಯ್ ಕುಮಾರ್ ಹಾಗೂ ಗಿರೀಶ್ ಎಂದು ಗುರ್ತಿಸಲಾಗಿದೆ. ಮುನ್ನಾ ಕುಮಾರ್ ಕೊಡತಿ ಗೇಟ್ ಸಮೀಪದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆ ಸಂಸ್ಥೆ ತಯಾರಕರಿಂದ ಕೂಲ್‌ಡ್ರಿಂಕ್ಸ್ ಪಡೆದು ವಿವಿಧ ಅಂಗಡಿಗಳಿಗೆ ವಿತರಣೆ ಮಾಡುತ್ತದೆ. ಶನಿವಾರ ಸಿಬ್ಬಂದಿ ಹೊಸ ರಸ್ತೆ, ಕುಡ್ಲು ರಸ್ತೆ, ಬೇಗೂರು ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳ 25ರಿಂದ 30 ಅಂಗಡಿಗಳಿಗೆ ಸರಕು ವಿತರಿಸಿ ಹಣ ಸಂಗ್ರಹಿಸಿದ್ದರು.
ಸಂಜೆ 7ರಿಂದ 7.15ರ ನಡುವೆ ಅವರು ಕೊಡತಿ ಗ್ರಾಮ ಪಂಚಾಯಿತಿ ಕಚೇರಿ ಸಮೀಪ ಕಂಪನಿಯತ್ತ ವಾಪಸಾಗುತ್ತಿದ್ದ ವೇಳೆ, ವಾಹನ ಚಾಲಕ ಅಜಯ್ ಕುಮಾರ್ ರಸ್ತೆ ಹಂಪ್ಸ್ ಬಳಿ ವಾಹನದ ವೇಗ ಕಡಿಮೆ ಮಾಡಿದ್ದಾರೆ.
ಈ ವೇಳೆ ಒಬ್ಬ ದುಷ್ಕರ್ಮಿ ವಾಹನದ ಎಡಭಾಗದಿಂದ ಒಳಗೆ ಹತ್ತಿ, ಚಾಕು ತೋರಿಸಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ಜೊತೆಗೆ ಚಾಲಕನಿಗೆ ವಾಹನ ನಿಲ್ಲಿಸದೆ ಮುಂದಕ್ಕೆ ಚಲಾಯಿಸುವಂತೆ ಸೂಚಿಸಿದ್ದಾನೆ.
ಸುಮಾರು 200 ಮೀಟರ್ ಮುಂದೆ ಸಾಗುತ್ತಿದ್ದಂತೆ ಮತ್ತೊಬ್ಬ ದುಷ್ಕರ್ಮಿ ಕೂಡ ವಾಹನದೊಳಗೆ ಪ್ರವೇಶಿಸಿದ್ದಾನೆ. ಮೂರನೇ ಆರೋಪಿ ಬೈಕ್‌ನಲ್ಲಿ ವಾಹನವನ್ನು ಹಿಂಬಾಲಿಸುತ್ತಿದ್ದನು.
ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಸಿಬ್ಬಂದಿಯಿಂದ ಅಂಗಡಿಗಳಿಂದ ಸಂಗ್ರಹಿಸಿದ್ದ ರೂ.45 ಸಾವಿರ ನಗದನ್ನು ಕಸಿದುಕೊಂಡು, ಬಳಿಕ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಅಂಗಡಿಗಳಿಂದ ಹಣ ಸಂಗ್ರಹಿಸಿ ಸಿಬ್ಬಂದಿ ಇದೇ ಮಾರ್ಗದಲ್ಲಿ ಹಿಂದಿರುಗುತ್ತಾರೆ ಎಂಬ ಮಾಹಿತಿ ಆರೋಪಿಗಳಿಗೆ ಮೊದಲೇ ತಿಳಿದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ದರೋಡೆ ವೇಳೆ ವಾಹನ ಚಲಿಸುತ್ತಲೇ ಇತ್ತು. ಆರೋಪಿಗಳು ಸಿಬ್ಬಂದಿಯಿಂದ ನಗದನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳಿಗೆ ಸಿಬ್ಬಂದಿಯ ಚಲನವಲನದ ಬಗ್ಗೆ ಮುಂಚಿತ ಮಾಹಿತಿ ಇದ್ದಿರಬಹುದೇ ಎಂಬುದನ್ನೂ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ವರ್ತೂರು ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



