ನಮ್ಮ ಮೆಟ್ರೋ ದರ ವಿವಾದ ತಾರಕಕ್ಕೆ: BMRCL ಲೆಕ್ಕಾಚಾರಕ್ಕೆ ಪ್ರಯಾಣಿಕರ ಅಸಮಾಧಾನ; ಶುಲ್ಕ ಪರಿಷ್ಕರಣೆಗೆ ಒತ್ತಾಯ
ಪ್ರಯಾಣ ದರ ನಿಗದಿ ಸಮಿತಿ (Fare Fixation Committee - FFC) ಶಿಫಾರಸಿನ ಮೇರೆಗೆ 2025ರ ಫೆಬ್ರವರಿಯಿಂದಲೇ ಬಿಎಂಆರ್‌ಸಿಎಲ್ ಗರಿಷ್ಠ 90 ದರವನ್ನು ವಿಧಿಸುತ್ತಿದೆ.

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರು ಈಗಾಗಲೇ ಗರಿಷ್ಠ ₹90 ಪ್ರಯಾಣ ದರವನ್ನು ಪಾವತಿಸುತ್ತಿದ್ದರೆ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (BMRCL) ಸ್ವಂತ ದಾಖಲೆಗಳಲ್ಲೇ 2031ರ ವೇಳೆಗೆ ಗರಿಷ್ಠ ದರ ₹75 ಮಾತ್ರ ಎಂದು ಉಲ್ಲೇಖಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಮೆಟ್ರೋ ದರವನ್ನು ಮರುಪರಿಶೀಲಿಸಿ ತಕ್ಷಣ ಪರಿಷ್ಕರಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ಜೂನ್ 2024ರಲ್ಲಿ ಸಿದ್ಧಗೊಂಡ ಮೆಟ್ರೋ ಹಂತ-3ಎ (ರೆಡ್ ಲೈನ್: ಹೆಬ್ಬಾಳ–ಸರ್ಜಾಪುರ) ಯೋಜನೆಯ ವಿವರವಾದ ವರದಿ (DPR)ಯಲ್ಲಿ, ಪ್ರತಿ ಮೂರು ವರ್ಷಕ್ಕೊಮ್ಮೆ 12% ದರ ಹೆಚ್ಚಳವಾಗಲಿದೆ ಎಂಬ ಲೆಕ್ಕಾಚಾರದ ಆಧಾರದ ಮೇಲೆ 2031ರಲ್ಲಿ ಗರಿಷ್ಠ ಪ್ರಯಾಣ ದರ 75 ರೂ ಆಗಲಿದೆ ಎಂದು ಅಂದಾಜಿಸಲಾಗಿತ್ತು.
ಆದರೆ, ಪ್ರಯಾಣ ದರ ನಿಗದಿ ಸಮಿತಿ (Fare Fixation Committee - FFC) ಶಿಫಾರಸಿನ ಮೇರೆಗೆ 2025ರ ಫೆಬ್ರವರಿಯಿಂದಲೇ ಬಿಎಂಆರ್‌ಸಿಎಲ್ ಗರಿಷ್ಠ 90 ದರವನ್ನು ವಿಧಿಸುತ್ತಿದೆ.
ಡಿಪಿಆರ್‌ನಲ್ಲಿ ಒಂದು ಲೆಕ್ಕ, ವಾಸ್ತವದಲ್ಲಿ ಮತ್ತೊಂದು ಲೆಕ್ಕ!
ಆಸಕ್ತಿಕರ ಸಂಗತಿಯೆಂದರೆ, 2026ರಲ್ಲಿ ಪರಿಷ್ಕರಿಸಲಾದ ಹಂತ-3ಎ ಡಿಪಿಆರ್‌ನಲ್ಲಿಯೂ ಪ್ರತಿ ಮೂರು ವರ್ಷಕ್ಕೊಮ್ಮೆ 12% ದರ ಹೆಚ್ಚಳ ಎಂಬ ಅಂದಾಜನ್ನೇ ಮುಂದುವರಿಸಲಾಗಿದೆ. ಆದರೆ, ಎಫ್‌ಎಫ್‌ಸಿ ವಾರ್ಷಿಕ ಗರಿಷ್ಠ 5% ದರ ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು.
ಈ ವ್ಯತ್ಯಾಸದಿಂದ ಮೆಟ್ರೋ ದರ ಪರಿಷ್ಕರಣೆಗೆ ಒತ್ತಾಯಗಳು ಮತ್ತಷ್ಟು ಬಲಗೊಂಡಿದ್ದರೂ, ಈ ಬಗ್ಗೆ ಬಿಎಂಆರ್‌ಸಿಎಲ್ ಹಲವು ತಿಂಗಳುಗಳಿಂದ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ತಪ್ಪಾದ ಸೂತ್ರದಿಂದ ದರ ಏರಿಕೆ' ಆರೋಪ
ಮೆಟ್ರೋ ದರ ಏರಿಕೆಯಲ್ಲಿ ಬಿಎಂಆರ್‌ಸಿಎಲ್ ದರ ನಿಗದಿ ಸೂತ್ರವನ್ನು ತಪ್ಪಾಗಿ ಅನ್ವಯಿಸಿದ್ದು, ಆರಂಭದಲ್ಲಿ 105% ದರ ಹೆಚ್ಚಳವಾಗಿದ್ದು, ನಂತರ ಅದನ್ನು 71%ಕ್ಕೆ ಇಳಿಸಲಾಯಿತು ಎಂಬ ಆರೋಪಗಳು ಈಗಾಗಲೇ ಕೇಳಿಬಂದಿವೆ. ಇದರಿಂದ ಬಿಎಂಆರ್‌ಸಿಎಲ್ ತನ್ನದೇ ಡಿಪಿಆರ್‌ನಲ್ಲಿ ಅಂದಾಜಿಸಿದ್ದ ದರಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಪ್ರಯಾಣಿಕರು ಪಾವತಿಸುತ್ತಿದ್ದಾರೆ ಎನ್ನಲಾಗಿದೆ.
'ಮೊದಲು ಈಗಿನ ದರ ಸರಿಪಡಿಸಿ, ಬಳಿಕ ಹೊಸ ಏರಿಕೆ ಮಾಡಿ'
ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘದ ಸಹ-ಸಂಯೋಜಕ ರಾಜೇಶ್ ಭಟ್ ಮಾತನಾಡಿ, "ಮತ್ತೊಮ್ಮೆ ದರ ಹೆಚ್ಚಳ ಜಾರಿಗೊಳಿಸುವ ಮುನ್ನ, ಈಗಿನ ದರ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಸರಿಪಡಿಸಬೇಕು. ದರ ನಿಗದಿ ಸೂತ್ರದ ತಪ್ಪು ಅನ್ವಯ ಹಾಗೂ ಹಿಂದಿನ ಅತಿಯಾದ ದರ ಏರಿಕೆ ಕುರಿತು ಸ್ಪಷ್ಟನೆ ನೀಡದೆ ವಾರ್ಷಿಕ 5% ಹೆಚ್ಚಳ ಜಾರಿಗೆ ತರಬಾರದು" ಎಂದು ಒತ್ತಾಯಿಸಿದರು.
ಬಿಎಂಆರ್‌ಸಿಎಲ್ ತನ್ನ ವೆಚ್ಚ, ಆದಾಯ ಮತ್ತು ಲಾಭದ ಸಂಪೂರ್ಣ ವಿವರಗಳನ್ನು ಒಳಗೊಂಡ ಶ್ವೇತಪತ್ರ (White Paper) ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು. "ಪ್ರಯಾಣ ದರವನ್ನು ಹೇಗೆ ನಿಗದಿಪಡಿಸಲಾಗುತ್ತಿದೆ ಹಾಗೂ ಪ್ರಸ್ತುತ ದರ ವ್ಯವಸ್ಥೆಗೆ ಯಾರು ಹೊಣೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಪ್ರಯಾಣಿಕರಿಗಿದೆ" ಎಂದು ಹೇಳಿದರು.
ದರ ನಿಗದಿ ಪ್ರಕ್ರಿಯೆಯನ್ನೂ ಮರುಪರಿಶೀಲಿಸಬೇಕು. ಈ ಪ್ರಕ್ರಿಯೆಯಲ್ಲಿ ಪ್ರಯಾಣಿಕರು ಹಾಗೂ ಇತರ ಹಿತಾಸಕ್ತಿಗಳಿಗೆ ಸಮರ್ಪಕ ಪ್ರತಿನಿಧಿತ್ವ ಸಿಗುತ್ತಿಲ್ಲ ಎಂದೂ ಅವರು ಆರೋಪಿಸಿದರು.
'ಸಾರ್ವಜನಿಕ ಸಾರಿಗೆ ಲಾಭಕ್ಕಾಗಿ ಅಲ್ಲ'
ನಿಯಮಿತ ಮೆಟ್ರೋ ಪ್ರಯಾಣಿಕ ಕೊಚ್ಚು ಶಂಕರ್ ಮಾತನಾಡಿ, "ಸಂಚಾರ ದಟ್ಟಣೆ ಕಡಿಮೆ ಮಾಡಲು, ಮಾಲಿನ್ಯ ನಿಯಂತ್ರಿಸಲು ಹಾಗೂ ಜನರ ಸಂಚಾರ ಸುಲಭಗೊಳಿಸಲು ಸಾರ್ವಜನಿಕ ಸಾರಿಗೆ ಕೈಗೆಟುಕುವ ದರದಲ್ಲಿ ಇರಬೇಕು. ಲಾಭದ ದೃಷ್ಟಿಯಿಂದ ಮೆಟ್ರೋ ದರ ನಿಗದಿಪಡಿಸುವುದು ದುರದೃಷ್ಟಕರ. ಸಾಮಾನ್ಯ ಜನರ ಅನುಕೂಲಕ್ಕಾಗಿ ಸರ್ಕಾರ ಸಾರ್ವಜನಿಕ ಸಾರಿಗೆಯನ್ನು ಕೈಗೆಟುಕುವ ಸೇವೆಯಾಗಿ ನಡೆಸಬೇಕು" ಎಂದು ಹೇಳಿದರು.
ತಪ್ಪಾದ ಲೆಕ್ಕಾಚಾರಗಳಿಂದಾಗಿ, ಹೆಚ್ಚಿನ ಪ್ರಯಾಣಿಕರು ಬಳಸುತ್ತಿದ್ದರೂ ಬೆಂಗಳೂರು ಮೆಟ್ರೋ ದರವು ಭಾರತದ ಇತರ ನಗರಗಳ ಮೆಟ್ರೋಗಳಿಗಿಂತ ಹೆಚ್ಚು ದುಬಾರಿಯಾಗಿದೆ ಎಂದು ಅವರು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




