Jakkur Flying School ಕೊನೆಗೂ ಗ್ರೀನ್ ಸಿಗ್ನಲ್: 2031ರವರೆಗೆ ಪರವಾನಗಿ ನವೀಕರಿಸಿದ DGCA..!
ಈ ಸಂಸ್ಥೆ ಮಧ್ಯಮ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪೈಲಟ್ ಆಗುವ ಕನಸಿಗೆ ಬಲ ನೀಡುವ ಮಹತ್ವದ ತರಬೇತಿ ಕೇಂದ್ರವಾಗಿದೆ.

ಬೆಂಗಳೂರು: ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ (GFTS) ಕೊನೆಗೂ ಡಿಜಿಸಿಎ (DGCA) ಗ್ರೀನ್ ಸಿಗ್ನಲ್ ನೀಡಿದ್ದು, ಇದರ ಬೆನ್ನಲ್ಲೇ ಕಳೆದುಹೋಗಿದ್ದ ವೈಭವ ಮರಳಿ ಪಡೆಯಲು ಶಾಲೆ ಸಜ್ಜಾಗಿದೆ.
ವಿಮಾನಯಾನ ನಿಯಂತ್ರಣ ಸಂಸ್ಥೆಯು ಶಾಲೆಯ ಕಾರ್ಯಾಚರಣೆ ಪರವಾನಗಿಯನ್ನು 2031ರ ಜುಲೈ 15 ರವರೆಗೆ ನವೀಕರಿಸಿದೆ.
ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪೈಲಟ್ ತರಬೇತಿ ಪ್ರಕ್ರಿಯೆಗಳು ಮುಂದಿನ ಒಂದು ತಿಂಗಳೊಳಗೆ ಪುನರಾರಂಭಗೊಳ್ಳಲಿವೆ.
ಈ ನಡುವೆ ಜಕ್ಕೂರು ವೈಮಾನಿಕ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ರನ್‌ವೇ ವಿಸ್ತರಣೆಗಾಗಿ ಹೆಚ್ಚುವರಿ 10 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂಸ್ಥೆ ಮಧ್ಯಮ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪೈಲಟ್ ಆಗುವ ಕನಸಿಗೆ ಬಲ ನೀಡುವ ಮಹತ್ವದ ತರಬೇತಿ ಕೇಂದ್ರವಾಗಿದೆ. ಪ್ರಸ್ತುತ ಶಾಲೆಯಲ್ಲಿ ಒಟ್ಟು ಐದು ವಿಮಾನಗಳಿದ್ದು, ಅವುಗಳಲ್ಲಿ ಸೆಸ್ನಾ 172ಪಿ, ಸೆಸ್ನಾ 172ಎಸ್ ಮತ್ತು ಟೆಕ್ನಮ್ ಪಿ2006ಟಿ ಸೇರಿ ಮೂರು ವಿಮಾನಗಳು ಕಾರ್ಯಾಚರಣೆಯಲ್ಲಿವೆ. ಉಳಿದಿರುವ ಟೆಕ್ನಮ್ ಪಿ2010 ಹಾಗೂ ಸೆಸ್ನಾ 152 ಕೂಡ ಶೀಘ್ರದಲ್ಲೇ ಸೇವೆಗೆ ಸೇರ್ಪಡೆಯಾಗಲಿವೆ ಎಂದು ತಿಳಿಸಿದರು.
ಜಕ್ಕೂರು ಏರೋಡ್ರೋಮ್‌ನ ಈಗಿನ 954 ಮೀಟರ್ ಉದ್ದದ ರನ್‌ವೇಯನ್ನು ಇನ್ನೂ 160 ಮೀಟರ್ ವಿಸ್ತರಿಸಲು 10 ಎಕರೆ ಹೆಚ್ಚುವರಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವ ಸಿದ್ಧವಾಗಿದೆ ಎಂದು ಹೇಳಿದರು.
ಜಕ್ಕೂರು ಸುತ್ತಮುತ್ತ ಎತ್ತರದ ಕಟ್ಟಡಗಳ ನಿರ್ಮಾಣದ ಬಗ್ಗೆ ಮಾತನಾಡಿದ ಅವರು, ಏರೋಡ್ರೋಮ್‌ನಿಂದ 2.7 ಕಿ.ಮೀ ವ್ಯಾಪ್ತಿಯಲ್ಲಿ 45 ಮೀಟರ್‌ಗಿಂತ ಎತ್ತರದ ಕಟ್ಟಡಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ತರಬೇತಿ ಶಾಲೆಯನ್ನೇ ಮುಚ್ಚಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ. ಆದರೆ, ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಂಸ್ಥೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ನಿಯಮ ಉಲ್ಲಂಘನೆಗೂ ಅವಕಾಶ ನೀಡುವುದಿಲ್ಲ," ಎಂದು ಹೇಳಿದರು.
ಖಾಸಗಿ ಪೈಲಟ್ ಪರವಾನಗಿ (PPL) ತರಬೇತಿಗೆ ಕರ್ನಾಟಕದ ಅಭ್ಯರ್ಥಿಗಳಿಗೆ ರೂ.10 ಲಕ್ಷ, ರಾಜ್ಯದ ಹೊರಗಿನ ಅಭ್ಯರ್ಥಿಗಳಿಗೆ ರೂ.15 ಲಕ್ಷ ಶುಲ್ಕ ನಿಗದಿಪಡಿಸಲಾಗಿದೆ. ವಾಣಿಜ್ಯ ಪೈಲಟ್ ಪರವಾನಗಿ (CPL) ತರಬೇತಿಗೆ ಕರ್ನಾಟಕದ ಅಭ್ಯರ್ಥಿಗಳಿಗೆ ರೂ.37 ಲಕ್ಷ ಹಾಗೂ ಹೊರರಾಜ್ಯದ ಅಭ್ಯರ್ಥಿಗಳಿಗೆ ರೂ.42 ಲಕ್ಷ ಶುಲ್ಕ ನಿಗದಿಯಾಗಿದೆ. ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಹೇಳಿದರು.
ಇದಲ್ಲದೆ, ಮೈಸೂರಿನಲ್ಲಿ ಉಪ ತರಬೇತಿ ಕೇಂದ್ರ (Satellite Training Base) ಸ್ಥಾಪಿಸುವ ಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿಸಿದ ಅವರು, ಜಕ್ಕೂರಿನಿಂದ ಹಾರುವ ವಿಮಾನಗಳು ಮೈಸೂರಿನಲ್ಲಿ ಇಳಿದು ಮತ್ತೆ ಜಕ್ಕೂರಿಗೆ ಮರಳುವ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



