1.2 ಲಕ್ಷ ರೂ ಗೆ ಶಿಶು ಮಾರಾಟ ಮಾಡಿ ಮೊಬೈಲ್, ಚಿನ್ನ ಖರೀದಿಸಿದ ದಂಪತಿ!
ಜುಲೈ 5 ರಂದು ಜನಿಸಿದ ತನ್ನ ಮಗುವನ್ನು ಆಗಸ್ಟ್ 7 ರಂದು ಕೌಶಲ್ಯ ಪವಾರ್ ಮತ್ತು ಆಕೆಯ ಮಗಳು ಸೀಮಾ ರೇಶ್ವಾಲ್ ಎಂಬುವವರು ಕರೆದೊಯ್ದಿದ್ದಾರೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಛತ್ರಪತಿ ಸಂಭಾಜಿನಗರ: 'ಲಿವ್-ಇನ್' ಸಂಬಂಧದಲ್ಲಿದ್ದ ದಂಪತಿಯೊಬ್ಬರು ತಮ್ಮ ಸುಮಾರು ಒಂದು ತಿಂಗಳ ಹಸುಗೂಸನ್ನು 1.2 ಲಕ್ಷ ರೂ.ಗೆ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. ಮಾರಾಟದ ನಂತರ ಆ ಮಗುವನ್ನು ಹೈದರಾಬಾದ್‌ಗೆ ಸಾಗಿಸುವ ಮುನ್ನ ಹಲವು ಬಾರಿ ಮರು ಮಾರಾಟ ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಕೂಲಿ ಕಾರ್ಮಿಕರಾಗಿರುವ ಆ ದಂಪತಿ ಮಗು ಮಾರಾಟ ಮಾಡಿದ್ದು, ಬಂದ ಹಣದಲ್ಲಿ ಮೊಬೈಲ್ ಫೋನ್‌ಗಳು ಮತ್ತು ಚಿನ್ನವನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಮಗುವನ್ನು ರಕ್ಷಿಸಲಾಗಿದ್ದು, ಛತ್ರಪತಿ ಸಂಭಾಜಿನಗರದ ಅನಾಥಾಶ್ರಮವೊಂದರಲ್ಲಿ ಇರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.
ಜುಲೈ 5 ರಂದು ಜನಿಸಿದ ತನ್ನ ಮಗುವನ್ನು ಆಗಸ್ಟ್ 7 ರಂದು ಕೌಶಲ್ಯ ಪವಾರ್ ಮತ್ತು ಆಕೆಯ ಮಗಳು ಸೀಮಾ ರೇಶ್ವಾಲ್ ಎಂಬುವವರು ಕರೆದೊಯ್ದಿದ್ದಾರೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ ನಂತರ ಈ ಮಾರಾಟ ಮತ್ತು ಮರುಮಾರಾಟದ ವಿಷಯ ಬೆಳಕಿಗೆ ಬಂದಿದೆ.
ಆ ಇಬ್ಬರು ಮಹಿಳೆಯರು ತನಗೆ ಮತ್ತು ತನ್ನ ಸಂಗಾತಿಗೆ (ಲಿವ್-ಇನ್ ಪಾರ್ಟ್ನರ್) ಒತ್ತಾಯಪೂರ್ವಕವಾಗಿ ಕೆಲವು ದಾಖಲೆಗಳಿಗೆ ಸಹಿ ಹಾಕಿಸಿಕೊಂಡು, 1.2 ಲಕ್ಷ ರೂ. ನಗದನ್ನು ನೀಡಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ 23 ರಂದು ಮುಕುಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತನಿಖಾಧಿಕಾರಿ ಹರೇಶ್ವರ್ ಘುಗೆ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ
"ದಂಪತಿ ಲಿವ್-ಇನ್ ಸಂಬಂಧದಲ್ಲಿದ್ದು, ಕೂಲಿ ಕೆಲಸ ಮಾಡುತ್ತಾರೆ. ಗಂಡ ಕುಡಿತದ ಚಟ ಹೊಂದಿದ್ದಾನೆ. ಅವರು ಮಗುವನ್ನು 1.2 ಲಕ್ಷ ರೂ.ಗೆ ಮಾರಾಟ ಮಾಡಿದರು. ಮಾರಾಟದ ತಕ್ಷಣವೇ, ಅವರು 25,000 ರೂ.ಗೆ ಎರಡು ಮೊಬೈಲ್ ಫೋನ್‌ಗಳು ಮತ್ತು 62,000 ರೂ. ಮೌಲ್ಯದ ಚಿನ್ನವನ್ನು ಖರೀದಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ಕೌಶಲ್ಯ ಮತ್ತು ಮಗುವಿನ ತಾಯಿ ಒಟ್ಟಿಗೆ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಪರಸ್ಪರ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲ ಅಕ್ರಮ ಮಾರಾಟದ ನಂತರ ಮಗು ಇನ್ನೂ ಮೂರು ಬಾರಿ ಕೈ ಬದಲಾಯಿಸಿದೆ.
"ಸೀಮಾ ಆ ಮಗುವನ್ನು ಸಂಗೀತಾ ಅವ್ಹಾದ್ ಎಂಬ ಮಹಿಳೆಗೆ 2.7 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸಂಗೀತಾ ಅವರು 3.5 ಲಕ್ಷ ರೂ. ಪಡೆದ ನಂತರ, ತೆಲಂಗಾಣದ ಜಗತಿಯಾಲ್ ಜಿಲ್ಲೆಯ ಸುರೇಶ್ ಗುಂಟುಕಾ ಎಂಬುವವರಿಗೆ ಆ ಮಗುವನ್ನು ಹಸ್ತಾಂತರಿಸಿದ್ದರುಎಂದು ಘುಗೆ ಹೇಳಿದರು. 1.5 ಲಕ್ಷ ರೂ. 'ಲಾಭ'ದಲ್ಲಿ, ಕೌಶಲ್ಯಾ 1.1 ಲಕ್ಷ ರೂಪಾಯಿಯನ್ನು ತಮ್ಮ ಬಳಿ ಇಟ್ಟುಕೊಂಡರೆ, ಸೀಮಾ 40,000 ರೂಪಾಯಿ ಪಡೆದರು. ಅವರು ಈ ಹಣವನ್ನು ತಮ್ಮ ಸಾಲ ತೀರಿಸಲು ಬಳಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಈ ಮಧ್ಯೆ ಸುರೇಶ್ ಆ ಮಗುವನ್ನು ಹೈದರಾಬಾದ್‌ನಲ್ಲಿರುವ ತಮ್ಮ ಮಹಿಳಾ ಸಂಬಂಧಿಯೊಬ್ಬರಿಗೆ ಹಸ್ತಾಂತರಿಸಿದ್ದರು. "ಅವರು ಕೇವಲ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು 3.5 ಲಕ್ಷ ರೂಪಾಯಿ ಪಡೆದಿದ್ದರು. ಗಾರ್ಮೆಂಟ್ (ಬಟ್ಟೆ) ಉದ್ಯಮವನ್ನು ನಡೆಸುತ್ತಿರುವ ಆ ಮಹಿಳೆ, ಚಿಕಿತ್ಸೆ ಪಡೆದರೂ ಗರ್ಭಧರಿಸಲು ಸಾಧ್ಯವಾಗದ ಕಾರಣ ಮಗುವಿಗಾಗಿ ತೀವ್ರ ಹಂಬಲ ಹೊಂದಿದ್ದರು. ಮಗುವಿನೊಂದಿಗೆ ತುಂಬಾ ಆಪ್ತವಾಗಿದ್ದರು. ಹೀಗಾಗಿ ಆ ಮಗುವನ್ನು ಪಡೆಯಲು ಅವರು ತಪ್ಪು ಮಾರ್ಗವನ್ನು ಆರಿಸಿಕೊಂಡರು ಅಷ್ಟೇ ಎಂದು ಘುಗೆ ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಗಳು, ಕೌಶಲ್ಯಾ, ಸೀಮಾ, ಸಂಗೀತಾ, ಸುರೇಶ್ ಮತ್ತು ಹೈದರಾಬಾದ್‌ನ ಮಹಿಳೆಯನ್ನು ಬಂಧಿಸಲಾಗಿದೆ. ಆರೋಪಿಗಳು ಇದೇ ರೀತಿಯ ಇತರ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ನಮಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಸದ್ಯಕ್ಕೆ, ಮಗುವನ್ನು ಛತ್ರಪತಿ ಸಂಭಾಜಿನಗರದ ಅನಾಥಾಶ್ರಮವೊಂದರಲ್ಲಿ ಇರಿಸಲಾಗಿದೆ ಮತ್ತು ಮುಂದಿನ ಕ್ರಮದ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ನಿರ್ಧರಿಸಲಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



