'ಎಲ್ಲಿದ್ದೀರಿ Prakash Raj..? ದೆಹಲಿ ಪ್ರತಿಭಟನೆಗೆ ಹೋಗಲು ಸಮಯ ಇದೆ, ನಮ್ಮ ಊರಿಗೆ ಬರಲು ಇಲ್ಲವೇ?': ಗ್ರಾಮಸ್ಥರ ಆಕ್ರೋಶ
2019ರಲ್ಲಿ ಹಿರಿಯೂರು ತಾಲೂಕಿನ ಬಂಡ್ಲರಹಟ್ಟಿ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದ ನಟ ಪ್ರಕಾಶ್ ರಾಜ್, ಆರು ವರ್ಷ ಕಳೆದರೂ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ.
ಚಿತ್ರದುರ್ಗ: "ಎಲ್ಲಿದ್ದೀರಿ ಪ್ರಕಾಶ್ ರಾಜ್? ದೆಹಲಿಯಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸಲು ಸಮಯ ಸಿಗುತ್ತದೆ, ಆದರೆ ನಮ್ಮ ಊರಿಗೆ ಬರಲು ಸಮಯ ಇಲ್ಲವೇ?" ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಂಡ್ಲರಹಟ್ಟಿ ಗ್ರಾಮಸ್ಥರು ನಟ ಪ್ರಕಾಶ್ ರಾಜ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2019ರಲ್ಲಿ ಹಿರಿಯೂರು ತಾಲೂಕಿನ ಬಂಡ್ಲರಹಟ್ಟಿ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದ ನಟ ಪ್ರಕಾಶ್ ರಾಜ್, ಆರು ವರ್ಷ ಕಳೆದರೂ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು, ನಟ ತಮ್ಮ ಮಾತು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಗ್ರಾಮವನ್ನು ದತ್ತು ಪಡೆಯುವುದಾಗಿ ಘೋಷಿಸಿದ ಬಳಿಕ ನೀಡಿದ್ದ ಯಾವುದೇ ಭರವಸೆಯೂ ಈಡೇರಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಪ್ರತಿಭಟನೆ ನಡೆಸಿ ನಟನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಗ್ರಾಮಸ್ಥರ ಪ್ರಕಾರ, 2019ರಲ್ಲಿ ಪ್ರಕಾಶ್ ರಾಜ್ ಎರಡು ಬಾರಿ ಬಂಡ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಸಮಗ್ರ ಅಭಿವೃದ್ಧಿಗೆ ಹಲವು ಭರವಸೆಗಳನ್ನು ನೀಡಿದ್ದರು. ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಶಾಲೆಗಳ ಅಭಿವೃದ್ಧಿ, ರಸ್ತೆ ಹಾಗೂ ಚರಂಡಿ ನಿರ್ಮಾಣ, ಗೋಮಾಳ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಗಳನ್ನು ಸುಧಾರಿಸುವುದಾಗಿ ಅವರು ಘೋಷಿಸಿದ್ದರು.
ಇದಲ್ಲದೆ, ಗ್ರಾಮದ ಅಗತ್ಯಗಳನ್ನು ಅಧ್ಯಯನ ಮಾಡಲು ಶೀಘ್ರದಲ್ಲೇ ತಮ್ಮ ತಂಡವನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಆ ತಂಡವೇ ಇಂದಿಗೂ ಗ್ರಾಮಕ್ಕೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.
ಆರು ವರ್ಷಗಳು ಕಳೆದರೂ ಬಂಡ್ಲರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೆಯೇ ಉಳಿದಿದೆ. ಗ್ರಾಮದಲ್ಲಿ ಅಂತರ್ಜಲದಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಿರುವುದರಿಂದ ಕುಡಿಯುವ ನೀರಿನ ಗುಣಮಟ್ಟ ಹದಗೆಟ್ಟಿದೆ. ಅಂತರ್ಜಲ ಮಟ್ಟವೂ ಕುಸಿದಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಪ್ರಕಾಶ್ ರಾಜ್ ನಮ್ಮ ಗ್ರಾಮವನ್ನು ದತ್ತು ಪಡೆದು ಕುಡಿಯುವ ನೀರು ಹಾಗೂ ಮೂಲಸೌಕರ್ಯದ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಹೇಳಿದಾಗ ನಾವು ತುಂಬಾ ಸಂತೋಷಪಟ್ಟಿದ್ದೆವು. ಆದರೆ ಆರು ವರ್ಷಗಳಾದರೂ ಒಂದು ಭರವಸೆಯನ್ನೂ ಈಡೇರಿಸಿಲ್ಲ," ಎಂದು ಗ್ರಾಮಸ್ಥ ಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಸಿಂಧು ತನಯ ಕೂಡ ಪ್ರಕಾಶ್ ರಾಜ್ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದ ಹಲವು ರಾಷ್ಟ್ರೀಯ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಹಾಗೂ ನವದೆಹಲಿಯಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಭಾಗವಹಿಸಲು ಪ್ರಕಾಶ್ ರಾಜ್ ಅವರಿಗೆ ಸಮಯ ಸಿಗುತ್ತದೆ. ಆದರೆ ಬಂಡ್ಲರಹಟ್ಟಿ ಗ್ರಾಮಸ್ಥರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಮಾತ್ರ ಸಮಯ ಸಿಕ್ಕಿಲ್ಲ ಎಂದು ಟೀಕಿಸಿದ್ದಾರೆ.
ಪ್ರಕಾಶ್ ರಾಜ್ ನೀಡಿದ್ದ ಭರವಸೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು ಅಥವಾ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದು, ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

