ನೀನು ಹೋಗು ಹಿಂದೆ ನಾನು ಬರ್ತೀನಿ ಅಂದಿದ್ರು ಅಪ್ಪ; ದೇವೇಗೌಡರ ಕಣ್ಣ ಮುಂದೆಯೇ ಅಮ್ಮನ ಪ್ರಾಣ ಹೋಯಿತು: ಅನಸೂಯ ಮಂಜುನಾಥ್
ಈ ಸಂದರ್ಭದಲ್ಲಿ ಅವರ ಪುತ್ರಿ ಅನುಸೂಯಾ ಅವರು ತಮ್ಮ ತಾಯಿಯ ಇಹಲೋಕ ತ್ಯಜಿಸಿದ ಕೊನೆಯ ಸಮಯದ ನೆನಪುಗಳನ್ನು ಅತ್ಯಂತ ಭಾವುಕರಾಗಿ ಹಂಚಿಕೊಂಡಿದ್ದಾರೆ.

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮನವರ ನಿಧನದ ಹಿನ್ನೆಲೆಯಲ್ಲಿ, ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕಾಗಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಅವರ ಪುತ್ರಿ ಅನುಸೂಯಾ ಅವರು ತಮ್ಮ ತಾಯಿಯ ಇಹಲೋಕ ತ್ಯಜಿಸಿದ ಕೊನೆಯ ಸಮಯದ ನೆನಪುಗಳನ್ನು ಅತ್ಯಂತ ಭಾವುಕರಾಗಿ ಹಂಚಿಕೊಂಡಿದ್ದಾರೆ.
ತಮ್ಮ ಹೆತ್ತ ತಾಯಿ ದೈಹಿಕವಾಗಿ ನಮ್ಮನ್ನು ಬಿಟ್ಟು ದೂರವಾಗಿದ್ದರೂ, ಅವರ ಆಶೀರ್ವಾದ ಹಾಗೂ ಮಾರ್ಗದರ್ಶನದ ಶಕ್ತಿ ಸದಾ ನಮ್ಮ ಕುಟುಂಬದ ಎಲ್ಲ ಸದಸ್ಯರಲ್ಲೂ ಜೀವಂತವಾಗಿರುತ್ತದೆ ಎಂದು ಅನುಸೂಯ ಅವರು ಭಾವುಕವಾಗಿ ನುಡಿದಿದ್ದಾರೆ. ಪ್ರತಿಯೊಬ್ಬ ಸುಮಂಗಲಿ ಮಹಿಳೆಯೂ ಬಯಸುವಂತಹ ಅತ್ಯಂತ ಗೌರವಯುತ ಹಾಗೂ ಸಾರ್ಥಕ ಮರಣ ತಮ್ಮ ತಾಯಿಗೆ ಲಭಿಸಿದೆ ಎಂದು ಅನುಸೂಯಾ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ ಕೊನೆಯ ಕ್ಷಣದಲ್ಲಿ ಎಚ್.ಡಿ. ದೇವೇಗೌಡ ಅವರು ಮುಂಜಾನೆ ಶಿವನಿಗೆ ವಿಶೇಷ ರುದ್ರಾಭಿಷೇಕ ಪೂಜೆ ನೆರವೇರಿಸಿ ತಂದಿದ್ದ ಪವಿತ್ರ ತೀರ್ಥ, ಶ್ರೀಗಂಧ ಹಾಗೂ ದೇವರ ಮಲ್ಲಿಗೆ ಹೂವನ್ನು ತಮ್ಮ ಕೈಯಾರೆ ಹೆಂಡತಿಗೆ ನೀಡಿದರು. ಆ ಪವಿತ್ರ ವಸ್ತುಗಳನ್ನು ಸ್ವೀಕರಿಸಿದ ತಕ್ಷಣವೇ ಚೆನ್ನಮ್ಮನವರು ಕೊನೆಯುಸಿರೆಳೆದರು ಎಂದು ವಿವರಿಸಿದ್ದಾರೆ. ಇಂತಹ ಪುಣ್ಯದ ಸಾವು ಎಲ್ಲರಿಗೂ ದೊರೆಯುವುದಿಲ್ಲ ಎಂದು ಹೇಳುತ್ತಾ ಮಗಳು ಕಣ್ಣೀರು ಸುರಿಸಿದ್ದಾರೆ.
ಅಮ್ಮ ಮುತ್ತೈದೆ ಸಾವನ್ನ ಬಯಸಿದ್ದರು. ಅದರಂತೆ ಮುತ್ತೈದೆಯಾಗಿ ಪ್ರಾಣ ಬಿಟ್ಟಿದ್ದಾರೆ. ಒಂದು ಕಡೆ ಅವರ ಅಗಲಿಕೆ ನೋವಿದ್ದರೆ ಮತ್ತೊಂದೆಡೆ ಮುತ್ತೈದೆಯಾಗಿ ಸಾವನಪ್ಪಿರೋದು ತೃಪ್ತಿ ಇದೆ. ಅಪ್ಪ ಯಾವಾಗಲೂ ಹೇಳುತ್ತಿದ್ದರು ಮೊದಲು ನೀನು ಹೋಗು ಹಿಂದೆ ನಾನು ಬರುತ್ತೇನೆ ಎಂದು ಅದೇ ರೀತಿ ಮುತ್ತೈದೆಯಾಗಿ ಹೋಗಿದ್ದಾರೆ ಎಂದರು.
ಪ್ರತಿ ವಿಚಾರದಲ್ಲೂ ಮಕ್ಕಳಿಗೆ ಅಮ್ಮ ಸಪೋರ್ಟ್ ಮಾಡಿದ್ದಾರೆ. ಅಪ ರಾಜಕೀಯವಾಗಿ ಹೊರಗಡೆ ಇದ್ದಾಗ 70 ಪರ್ಸೆಂಟ್ ಅಮ್ಮನೇ ನಮ್ಮನ್ನ ಬೆಳೆಸಿ ನೋಡಿದ್ದಾರೆ. ಸುದೀರ್ಘ 72 ವರ್ಷಗಳ ಕಾಲ ಅಪ್ಪ ಅಮ್ಮ ಜೀವನ ನಡೆಸಿದ್ದಾರೆ ಒಂದು ದಿನವೂ ಜಗಳ ಆಡಿಲ್ಲ ಎಂದು ತಾಯಿ ಚೆನ್ನಮ್ಮನ ಬಗ್ಗೆ ಎಳೆ ಎಳೆಯಾಗಿ ಬಿಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



