'ಅಮ್ಮ ನಮ್ಮ ಕುಟುಂಬಕ್ಕಷ್ಟೇ ಅಲ್ಲ, ಲಕ್ಷಾಂತರ ಕುಟುಂಬಗಳಿಗೆ ದಾರಿದೀಪವಾಗಿದ್ದರು': ಕಂಬನಿ ಮಿಡಿದ ಎಚ್.ಡಿ ಕುಮಾರಸ್ವಾಮಿ
ಸುಮಾರು 65ರಿಂದ 70 ವರ್ಷಗಳ ಕಾಲ ನಮ್ಮ ತಂದೆಯ ನೆರಳಾಗಿ ಬದುಕಿದರು. ತಮ್ಮ ಇಡೀ ಜೀವನವನ್ನೇ ಕುಟುಂಬಕ್ಕೆ ಹಾಗೂ ತಂದೆಯ ರಾಜಕೀಯ ಪಯಣಕ್ಕೆ ಮುಡಿಪಾಗಿಟ್ಟರು.

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಜೀವನದ ಅಚಲ ಆಸರೆಯಾಗಿದ್ದ ಚೆನ್ನಮ್ಮ ಅವರ ನಿಧನದ ಬಳಿಕ ದೇವೇಗೌಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ತಾಯಿಯನ್ನು ಕಳೆದುಕೊಂಡ ನೋವನ್ನು ವ್ಯಕ್ತಪಡಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, "ಅವರು ನಮ್ಮ ಕುಟುಂಬಕ್ಕಷ್ಟೇ ಅಲ್ಲ, ಲಕ್ಷಾಂತರ ಕುಟುಂಬಗಳಿಗೆ ದಾರಿದೀಪವಾಗಿದ್ದರು" ಎಂದು ಭಾವುಕರಾಗಿ ಹೇಳಿದ್ದಾರೆ.
ತಾಯಿಯ ಅಗಲಿಕೆಯಿಂದ ತೀವ್ರ ದುಃಖಿತರಾಗಿರುವ. ಕುಮಾರಸ್ವಾಮಿ ಅವರು, "ದೇವರು ಅವರನ್ನು ತನ್ನ ಬಳಿಗೆ ಕರೆದುಕೊಂಡಿದ್ದಾರೆ. ಅವರು ರಾಜರಾಜೇಶ್ವರಿ ದೇವಿಯ ಅಪಾರ ಭಕ್ತೆಯಾಗಿದ್ದರು. ಹಿಂದೆ ಆಸಿಡ್ ದಾಳಿಯಿಂದಲೂ ದೇವರ ಕೃಪೆಯಿಂದ ಬದುಕುಳಿದಿದ್ದರು. ಈಗ ಅವರ ಭೂಲೋಕದ ಕರ್ತವ್ಯ ಮುಗಿದಿದೆ ಎಂದು ದೇವರು ಅವರನ್ನು ತನ್ನ ಬಳಿಗೆ ಕರೆದುಕೊಂಡಿದ್ದಾರೆ ಎಂದು ನಾನು ನಂಬಿದ್ದೇನೆ" ಎಂದು ಹೇಳಿದರು.
ಸುಮಾರು 65ರಿಂದ 70 ವರ್ಷಗಳ ಕಾಲ ನಮ್ಮ ತಂದೆಯ ನೆರಳಾಗಿ ಬದುಕಿದರು. ತಮ್ಮ ಇಡೀ ಜೀವನವನ್ನೇ ಕುಟುಂಬಕ್ಕೆ ಹಾಗೂ ತಂದೆಯ ರಾಜಕೀಯ ಪಯಣಕ್ಕೆ ಮುಡಿಪಾಗಿಟ್ಟರು. ಅವರು ಕೇವಲ ನಮಗೆ ತಾಯಿಯಾಗಿರಲಿಲ್ಲ, ಲಕ್ಷಾಂತರ ಕುಟುಂಬಗಳಿಗೆ ದಾರಿದೀಪವಾಗಿದ್ದರು.
ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಒಂದು ಹನಿ ನೀರು ಕುಡಿಯದೇ ದೇವರ ಧ್ಯಾನದಲ್ಲೇ ತಲ್ಲೀನರಾಗುತ್ತಿದ್ದರು. ಪೂಜಾ ಕೋಣೆಯಲ್ಲೇ 8ರಿಂದ 10 ಗಂಟೆಗಳ ಕಾಲ ಕಳೆಯುತ್ತಿದ್ದರು. ನಮ್ಮ ರಾಜಕೀಯ ಜೀವನದಲ್ಲಿ ಸ್ವಲ್ಪ ಒಳ್ಳೆಯತನ, ವಿವೇಕ ಇದ್ದರೆ ಅದು ತಾಯಿ ಕಲಿಸಿದ ಸಂಸ್ಕಾರವೇ ಎಂದು ಭಾವುಕರಾದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದು, ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಜುಲೈ 15ರಂದು ಉಸಿರಾಟದ ತೊಂದರೆ, ಎದೆಭಾರ ಹಾಗೂ ವಯೋಸಹಜ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಚೆನ್ನಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶ ತಜ್ಞ ಡಾ. ಸತ್ಯನಾರಾಯಣ ಮೈಸೂರು ಹಾಗೂ ಡಾ. ಸುನೀಲ್ ಕರಂತ್ ನೇತೃತ್ವದ ಬಹುಶಾಖಾ ವೈದ್ಯರ ತಂಡ ಅವರ ಚಿಕಿತ್ಸೆ ನಡೆಸುತ್ತಿತ್ತು.
ವೈದ್ಯರ ಪ್ರಕಾರ, ಆರಂಭದಲ್ಲಿ ಚಿಕಿತ್ಸೆ ಉತ್ತಮವಾಗಿ ಸ್ಪಂದಿಸುತ್ತಿದ್ದ ಚೆನ್ನಮ್ಮ ಅವರು ಚೇತರಿಕೆಯ ಹಾದಿಯಲ್ಲಿದ್ದರು. ಆದರೆ, ಶನಿವಾರ ಮಧ್ಯಾಹ್ನ ಏಕಾಏಕಿ ಆರೋಗ್ಯದಲ್ಲಿ ತೀವ್ರ ಹಿನ್ನಡೆಯಾಗಿ ಸಂಜೆ 4 ಗಂಟೆ ಸುಮಾರಿಗೆ ಭಾರೀ ಹೃದಯಾಘಾತಕ್ಕೊಳಗಾಗಿ ನಿಧನರಾದರು.
ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, "ರೋಗಿಯ ಆರೋಗ್ಯ ಚೇತರಿಕೆಯತ್ತ ಸಾಗುತ್ತಿದ್ದರೂ ಶನಿವಾರ ಸಂಜೆ 4 ಗಂಟೆಗೆ ತೀವ್ರ ಹೃದಯಾಘಾತ ಸಂಭವಿಸಿತು. ಎಲ್ಲಾ ಪ್ರಯತ್ನಗಳ ನಡುವೆಯೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ" ಎಂದು ತಿಳಿಸಲಾಗಿದೆ.
ನಿಧನದ ಬಳಿಕ ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಮಣಿಪಾಲ್ ಆಸ್ಪತ್ರೆಯಿಂದ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡ ಅವರ ನಿವಾಸಕ್ಕೆ ತರಲಾಯಿತು. ಕುಟುಂಬ ಸದಸ್ಯರು, ಸಂಬಂಧಿಕರು, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.
ಕುಟುಂಬದ ಮೂಲಗಳ ಪ್ರಕಾರ, ಭಾನುವಾರ ಮಧ್ಯಾಹ್ನ ಪಾರ್ಥಿವ ಶರೀರವನ್ನು ಹಾಸನ ಜಿಲ್ಲೆಗೆ ಕೊಂಡೊಯ್ಯಲಾಗುವುದು. ಸಾರ್ವಜನಿಕರು, ರಾಜಕೀಯ ಮುಖಂಡರು ಹಾಗೂ ಅಭಿಮಾನಿಗಳ ಅಂತಿಮ ದರ್ಶನದ ಬಳಿಕ ಸೋಮವಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.
ಚೆನ್ನಮ್ಮ ಅವರ ಕೊನೆಯ ಕ್ಷಣಗಳು ಕುಟುಂಬದವರ ಮನಕಲುಕುವಂತಿದ್ದವು. 93 ವರ್ಷದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪತ್ನಿಯ ಕೈ ಹಿಡಿದೇ ಕೊನೆಯ ಕ್ಷಣದವರೆಗೂ ಜೊತೆಯಲ್ಲಿದ್ದರು. ಸಂಜೆ 4 ಗಂಟೆಯಿಂದ 4.43 ಗಂಟೆಯವರೆಗೆ ಅವರ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದ ದೇವೇಗೌಡ, ಪತ್ನಿಯ ಕೈಚಳಕ ಸಡಿಲವಾಗುತ್ತಿರುವುದನ್ನು ಅರಿತು ಭಾವುಕರಾಗಿ ಕಣ್ಣೀರಿಟ್ಟರು ಎಂದು ಅವರ ಆಪ್ತರು ತಿಳಿಸಿದ್ದಾರೆ.
72 ವರ್ಷಗಳ ದಾಂಪತ್ಯ ಜೀವನವನ್ನು ಹಂಚಿಕೊಂಡಿದ್ದ ಈ ದಂಪತಿಯ ವಿಯೋಗ ಕ್ಷಣ ಎಲ್ಲರ ಮನಸ್ಸನ್ನೂ ತಟ್ಟಿತು. ಬಳಿಕ ಕುಟುಂಬದವರಿಗೆ ಧೈರ್ಯ ತುಂಬುವ ಜವಾಬ್ದಾರಿಯನ್ನು ಅರಿತು ದೇವೇಗೌಡ ಅವರು ತಮ್ಮನ್ನು ತಾವು ಸಮಾಧಾನಪಡಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.
ಪತ್ನಿಗೆ ಕೊನೆಯ ಗೌರವ ಸಲ್ಲಿಸುವ ವೇಳೆ ದೇವೇಗೌಡ ಅವರು ಸಂಪ್ರದಾಯದಂತೆ ಚೆನ್ನಮ್ಮ ಅವರ ಕೂದಲಿಗೆ ಹೂವಿಟ್ಟು, ಹಣೆಗೆ ಕುಂಕುಮ ಹಾಗೂ ಗಲ್ಲಕ್ಕೆ ಅರಿಶಿನ ಹಚ್ಚಿ ಅಂತಿಮ ವಿಧಿ ನೆರವೇರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



